ಸಿಎಂ ಕುಮಾರಸ್ವಾಮಿಯಿಂದ ಭತ್ತದ ನಾಟಿ ಕಾರ್ಯ!

Update: 2018-08-11 13:21 GMT

ಮಂಡ್ಯ,ಆ.11: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಶನಿವಾರ ಭತ್ತದ ನಾಟಿ ಹಾಕುವ ಮೂಲಕ ಗಮನ ಸೆಳೆದರು.

ಬಿಳಿ ಪಂಚೆಯುಟ್ಟು ಸಚಿವ ಸಾ.ರಾ.ಮಹೇಶ್ ಸೇರಿದಂತೆ ಜಿಲ್ಲೆಯ ಶಾಸಕರ ಜತೆ ಮಧ್ಯಾಹ್ನ 1.10ಕ್ಕೆ ಆಗಮಿಸಿದ ಕುಮಾರಸ್ವಾಮಿ, ಸಮೀಪದ ಆಂಜನೇಯಸ್ವಾಮಿ ದೇವಾಲದಲ್ಲಿ ಪೂಜೆ ಸಲ್ಲಿಸಿ ಗದ್ದೆಯ ಕಡೆಗೆ ನಡೆದರು. ಭೂಮಿಗೆ ಪೂಜೆ ಸಲ್ಲಿಸಿ ರೈತರು ಮತ್ತು ರೈತ ಮಹಿಳೆಯರ ಜತೆ ಗದ್ದೆಗಿಳಿದ ಅವರು, ಭತ್ತದ ನಾಟಿ ಹಾಕಿ ಸಂಭ್ರಮಿಸಿದರು. ಕುಮಾರಸ್ವಾಮಿ ಜತೆ ನಾಟಿ ಮಾಡಲು ಶಾಸಕರು, ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು  ಮುಗಿಬಿದ್ದರು.

ಜಮೀನಿನ ಸುತ್ತ ನೆರದಿದ್ದ ನೂರಾರು ರೈತರು ಹರ್ಷೋದ್ಘಾರ ಮಾಡುತ್ತಿದ್ದರೆ, ಮತ್ತೊಂದೆಡೆ ಹೆಗ್ಗಡಹಳ್ಳಿಯ ಸೋಬಾನೆ ಕೃಷ್ಣೇಗೌಡ ತಂಡದಿಂದ ಜಾನಪದ ಗಾಯನ ಮೊಳಗುತ್ತಿತ್ತು. ಸ್ವತಃ ಗಾಯಕರಾದ ಶಾಸಕ ಡಾ.ಕೆ.ಅನ್ನದಾನಿ ಹಾಡಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲನಾನಂದನಾಥ ಸ್ವಾಮೀಜಿ ಮುಖ್ಯಮಂತ್ರಿಗಳ ನಾಟಿ ಕಾರ್ಯವನ್ನು ಶ್ಲಾಘಿಸಿ ಆಶೀರ್ವದಿಸಿದರು.

ಕೆಂಚೇಗೌಡರ 5 ಎಕರೆ ಜಮೀನಿನ ನಾಟಿ ಕಾರ್ಯ ಸುಮಾರು ಒಂದೂವರೆ ಗಂಟೆಯಲ್ಲಿ ಪೂರ್ಣಗೊಂಡಿತು. ನಂತರ ಜಮೀನಿನ ಬಳಿಯೇ ರೈತರ ಜತೆ ಮುಖ್ಯಮಂತ್ರಿ ಸಹಭೋಜನ ಮಾಡಿದರು. ರೈತರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಊಟ ಬಡಿಸಿ ಉಪಚರಿಸಿದರು.

ಜೋಡೆತ್ತುಗಳ ಜತೆ ನೇಗಿಲು ಹೊತ್ತ ಕುಮಾರಸ್ವಾಮಿ, ತಲೆ ಮೇಲೆ ಊಟದ ಪುಟ್ಟಿ ಹೊತ್ತು ಗದ್ದೆಗೆ ತೆರಳುತ್ತಿರುವ ಪತ್ನಿ ಅನಿತಾಕುಮಾರಸ್ವಾಮಿ ಕಲಾಕೃತಿವುಳ್ಳ ಫೋಟೋವನ್ನು ಮುಖ್ಯಮಂತ್ರಿಗಳಿಗೆ ಗಿಫ್ಟ್ ನೀಡಿದ ಸಚಿವ ಸಿ.ಎಸ್.ಪುಟ್ಟರಾಜು, ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದ ರೈತ ಮಹಿಳೆಯರಿಗೆ  ಸೀರೆ ವಿತರಿಸಿ ಅಭಿನಂದಿಸಿದರು.

ರೈತರ ಋಣ ತೀರಿಸಲು ನಾಟಿಯಲ್ಲಿ ಭಾಗಿಯಾಗಿದ್ದೇನೆ: ಸಿಎಂ ಕುಮಾರಸ್ವಾಮಿ
ರೈತ ಕುಟುಂಬದಲ್ಲಿ ಹುಟ್ಟಿದ ನನಗೆ ನಾಟಿ ಮಾಡುವುದು ಹೊಸತಲ್ಲ. ಇದನ್ನು ರಾಜಕೀಯವಾಗಿ ತೆಗೆದುಕೊಂಡರೆ ನಾನು ಏನು ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ಟೀಕಾಕಾರರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಭತ್ತದ ನಾಟಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾಟಕ ಮಾಡಲು ಇಲ್ಲಿಗೆ ಬಂದಿಲ್ಲ, ರೈತರ ಋಣ ತೀರಿಸಲು ಬಂದಿದ್ದೇನೆ ಎಂದು ಹೇಳಿದರು.
ರೈತರ ಋಣ ತೀರಿಸಲು ನಾನು ಸದಾ ಬದ್ದನಾಗಿದ್ದೇನೆ. ಗೌರಿಗಣೇಶ ಹಬ್ಬದೊಳಗಾಗಿ ನಾಡಿನ ಆರೂವರೆ ಕೋಟಿ ಜನರಿಗೂ ಸಿಹಿಸುದ್ದಿ ನೀಡುತ್ತೇನೆ. ರೈತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ರೈತರ ಸಮಸ್ಯೆಗೆ ವಿಧಾನಸೌಧದ ಬಾಗಿಲು ಸದಾ ತೆರೆದಿರುತ್ತದೆ ಎಂದು ಅವರು ಹೇಳಿದರು.

ನಾನು ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ. ನನಗೆ ಉತ್ತರ ಕರ್ನಾಟಕ ಬೇರೆ ಅಲ್ಲ, ದಕ್ಷಿಣ ಕರ್ನಾಟಕ ಬೇರೆ ಅಲ್ಲ, ಎರಡೂ ಒಂದೇ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನನ್ನ ಮೇಲೆ ನಂಬಿಕೆಯಿಡಿ, ಸಂಶಯಪಡಬೇಡಿ ಎಂದು ಅವರು ಮನವಿ ಮಾಡಿದರು.

ಮಂಡ್ಯ ಜಿಲ್ಲೆ ರೈತರ ಋಣ ನನ್ನ ಮೇಲೆ ಅಪಾರವಾಗಿದೆ. ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಿದ್ದೀರಿ. ಏಳೇಳು ಜನ್ಮಕ್ಕೂ ಮಂಡ್ಯದ ಜನರ ಋಣ ತೀರಿಸಲಾಗದು. ಮಂಡ್ಯದ ಅಭಿವೃದ್ಧಿ ಜತೆಗೆ ರಾಜ್ಯದ 30 ಜಿಲ್ಲೆಗಳನ್ನು ದತ್ತು ತೆಗೆದುಕೊಂಡು ನಾನು ಕೆಲಸ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ರೈತರು ಎರಡು ವರ್ಷದಿಂದ ನೀರಿಲ್ಲದೆ ಭತ್ತ ನಾಟಿ ಮಾಡಲು ಸಾಧ್ಯವಿರಲಿಲ್ಲ. ಅಲ್ಲದೆ ಕೃಷಿ ಇಲಾಖೆಯೂ ನಾಟಿ ಮಾಡದಿರಲು ಮನವಿ ಮಾಡಿತ್ತು. ಈ ವರ್ಷ ಕಾವೇರಿ ಕಣಿವೆಯಲ್ಲಿ  ಮಳೆಯಾಗಿದ್ದು, ನಾಟಿ ಮಾಡಲು ಒಳ್ಳೆಯ ವಾತಾವರಣ ಕೂಡಿಬಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ರೈತರ ಜತೆ ಭತ್ತದ ನಾಟಿ ಕಾರ್ಯ ಮಾಡಿರುವುದು ನನ್ನ ಜೀವನದ ಸಾರ್ಥಕತೆ ಮತ್ತು ಪುಣ್ಯ. ಮುಂದಿನ ತಿಂಗಳಿನಿಂದ ರಾಜ್ಯದ 30 ಜಿಲ್ಲೆಗೂ ಭೇಟಿ ಕೊಡುತ್ತೇನೆ. ತಿಂಗಳಲ್ಲಿ ಒಂದು ದಿನ ರೈತರ ಜತೆ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದರು.
ಈಗಾಗಲೇ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಒಂದೂವರೆ ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು, ವಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನು ಸಹ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಕೆಆರ್‍ಎಸ್ ಸೊಬಗು ಸವಿದ ಸಿಎಂ
ಭತ್ತದ ನಾಟಿ ನಂತರ ಸಿಎಂ ಕುಮಾರಸ್ವಾಮಿ ಫುಲ್ ರಿಲಾಕ್ಸ್ ಮೂಡಿನಲ್ಲಿ ಕೆಅರ್‍ಎಸ್ ಸೊಬಗನ್ನು ಸವಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಪುಟ್ಟರಾಜು ಹಾಗೂ ಸಾ.ರಾ. ಮಹೇಶ್ ಜತೆ ಅಣೆಕಟ್ಟೆ ಮೇಲೆ ವಿಹಾರ ಮಾಡಿದರು.

ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕೆಆರ್‍ಎಸ್ ರೌಂಡ್ ಹಾಕಿದ ಸಿಎಂ, ಅಲ್ಲಿಂದ ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News