ಬೀಫ್, ಪೋರ್ಕ್ ತಿನ್ನುತ್ತಿದ್ದ ನೆಹರೂ ಪಂಡಿತ್ ಅಲ್ಲ ಎಂದ ಬಿಜೆಪಿ ಶಾಸಕ!

Update: 2018-08-11 09:00 GMT

ಹೊಸದಿಲ್ಲಿ, ಆ.11: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು  ಬೀಫ್ ಮತ್ತು ಪೋರ್ಕ್  ತಿನ್ನುತ್ತಿದ್ದುದರಿಂದ ಅವರು ಪಂಡಿತ್ ಆಗಲು ಸಾಧ್ಯವಿಲ್ಲ ಎಂದು ರಾಜಸ್ಥಾನ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.

“ನೆಹರೂ ಅವರು ಪಂಡಿತ್ ಅಲ್ಲ. ಗೋಮಾಂಸ ಮತ್ತು ಹಂದಿ ಮಾಂಸ ತಿನ್ನುವವರು ಪಂಡಿತ್ ಆಗಲು ಸಾಧ್ಯವಿಲ್ಲ. ಮುಸ್ಲಿಮರಿಗೆ ಹಂದಿ ಅಪವಿತ್ರ ಹಾಗೂ ಹಿಂದುಗಳಿಗೆ ಗೋವು ಪವಿತ್ರ ಎಂದು ನಮಗೆ ಗೊತ್ತು'' ಎಂದು  ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಅಹುಜಾ ಹೇಳಿದರು.

ಈ ಹಿಂದೆ ಕೂಡ ಅಹುಜಾ ತಮ್ಮ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸಿದವರು. ಆಲ್ವಾರ್ ಗೋರಕ್ಷಕರನ್ನು ಸಮರ್ಥಿಸಿದ್ದರು. ಜೆಎನ್‍ಯುವಿನಲ್ಲಿ  ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಾದ ಹುಟ್ಟಿಕೊಂಡ ಸಂದರ್ಭ ನೀಡಿದ್ದ ಇನ್ನೊಂದು ಹೇಳಿಕೆಯಲ್ಲಿ ಜೆಎನ್‍ಯು ಕ್ಯಾಂಪಸ್ಸಿನಲ್ಲಿ  ಪ್ರತಿ ದಿನ ಕಾಂಡೋಮುಗಳು ಪತ್ತೆಯಾಗುತ್ತವೆ ಎಂದು ಹೇಳಿದ್ದರು.

ರಾಜಸ್ಥಾನದ ಆಲ್ವಾರ್ ನಲ್ಲಿ ಅಕ್ಬರ್ ಖಾನ್ ರನ್ನು ಗೋಕಳ್ಳಸಾಗಣಿಕೆ ಆರೋಪದಲ್ಲಿ ಥಳಿಸಿ ಹತ್ಯೆ ಮಾಡಿದ ಘಟನೆಯ ನಂತರ ಹೇಳಿಕೆ ನೀಡಿದ್ದ ಅಹುಜಾ ಗೋ ಕಳ್ಳಸಾಗಾಟಗಾರರ ಕೆನ್ನೆಗೆ ಬಾರಿಸಿ  ನಂತರ ಅವರನ್ನು ಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದಿದ್ದರು.

ಗೋರಕ್ಷಕರಿಂದ ಥಳಿತಕ್ಕೊಳಗಾಗಿ ಎಪ್ರಿಲ್ 2017ರಲ್ಲಿ ಸಾವಿಗೀಡಾಧ ಪೆಹ್ಲೂ ಖಾನ್ ಹತ್ಯೆಯನ್ನೂ ಅವರು ಸಮರ್ಥಿಸಿದ್ದರು. “ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಆದರೆ ಅವರ ಸಾವಿನ ಬಗ್ಗೆ ನಮಗೆ  ವಿಷಾದವಿಲ್ಲ. ಏಕೆಂದರೆ ಗೋ ಕಳ್ಳಸಾಗಾಟಗಾರರು ಗೋ ಹತ್ಯೆ ಮಾಡುವವರು. ಅವರಂತಹ ಪಾಪಿಷ್ಠರಿಗೆ ಹಿಂದೆಯೂ ಇಂತಹ ದುರ್ಗತಿಯಾಗಿದೆ ಮುಂದೆಯೂ ಆಗುವುದು'' ಎಂದು ಅಹುಜಾ ಹೇಳಿದ್ದರು.

ತಮ್ಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಗೋರಕ್ಷಕರಿಗೆ ಹಣ ನೀಡಿದ್ದಾಗಿಯೂ ಅವರು ಒಮ್ಮೆ ಹೇಳಿದ್ದರು. ಹನ್ನೆರಡನೇ  ತರಗತಿ ತನಕ ಕಲಿತಿರುವ ಅಹುಜಾ ತಮ್ಮಪ್ರೊಫೈಲ್ ನಲ್ಲಿ ತಾವೊಬ್ಬ ಪತ್ರಕರ್ತ ಎಂದು ಬರೆದಿದ್ದಾರೆ. ಪ್ರಕಟನೆ ನಿಲ್ಲಿಸಿರುವ ಮತ್ ಸಮ್ಮತ್ ಎಂಬ ಸಾಪ್ತಾಹಿಕದ ಆಡಳಿತ ಸಂಪಾದಕರಾಗಿ ಅವರು ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News