ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಕೆ.ಜಿ.ಬೋಪಯ್ಯ

Update: 2018-08-11 11:43 GMT

ಮಡಿಕೇರಿ, ಆ.11: ಕ್ರೀಡಾಪಟುಗಳ ತವರೂರಾದ ಕೊಡಗು ಜಿಲ್ಲೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟಕ್ಕೆ ತನ್ನದೇ ಆದ ಚಾರಿತ್ರಿಕ ಹಿನ್ನೆಲೆ ಇದ್ದು, ಗ್ರಾಮೀಣ ಕ್ರೀಡೆಗಳ ಬೆಳವಣಿಗೆಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ. 

ಕೊಡಗು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ನೆಹರು ಯುವ ಕೇಂದ್ರ, ಯೂತ್ ಹಾಸ್ಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಗ್ಗೋಡ್ಲು ಗ್ರಾಮದ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ಶನಿವಾರ ನಡೆದ 27 ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಶಕ್ತಿ, ಯುಕ್ತಿ ಹಾಗೂ ಮನಸ್ಸಿನ ದೃಢತೆ ಹೆಚ್ಚುತ್ತದೆ. ಕೊಡಗಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಆರಂಭಿಸಿದ ನಂತರ ಇತರ ಭಾಗಗಳಲ್ಲೂ ಪ್ರೇರಣೆಯಾಗಿ ಕೆಸರು ಗದ್ದೆ ಕ್ರೀಡಾಕೂಟಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ ಎಂದು ಕೆ.ಜಿ.ಬೋಪಯ್ಯ ಹೇಳಿದರು.

ಹಿಂದಿನ ವರ್ಷಗಳಲ್ಲಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಯಗಳಿಸಿದವರಿಗೆ ಬಾಳೆಗೊನೆ, ತೆಂಗಿನ ಕಾಯಿ ಹಾಗೂ ಎಲೆ ಅಡಿಕೆ ನೀಡಿ ಗೌರವಿಸುತ್ತಿದ್ದರು. ಈ ರೀತಿಯ ಮಹತ್ವವನ್ನು ಹೊಂದಿರುವ ಜಾನಪದ ಸೊಗಡಿನ ಗ್ರಾಮೀಣ ಕ್ರೀಡೆಗಳ ಬಗ್ಗೆ ಯುವ ಸಮೂಹ ಆಸಕ್ತಿ ಹೊಂದಬೇಕೆಂದರು.

ಮಳೆ ನಿಲ್ಲಲು ಪ್ರಾರ್ಥಿಸಿ
ಜಿಲ್ಲೆಯಲ್ಲಿ ಯಾರೂ ನಿರೀಕ್ಷೆ ಮಾಡದಷ್ಟು ಮಳೆಯಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಜನರು ಕಷ್ಟ, ನಷ್ಟಕ್ಕೆ ಸಿಲುಕಿದ್ದು, ಮಳೆ ಕಡಿಮೆಯಾಗಲು ಎಲ್ಲರೂ ಪ್ರಾರ್ಥಿಸೋಣ ಎಂದು ಬೋಪಯ್ಯ ಕರೆ ನೀಡಿದರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ಕ್ಷೀಣಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಭತ್ತದ ಗದ್ದೆಗಳು ಹೆಚ್ಚಾದಷ್ಟು ಅಂತರ್ಜಲದ ಮಟ್ಟ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದರು. ಹಿಂದೆ ಎತ್ತುಗಳನ್ನು ಬಳಸಿ ನಾಟಿ ಮಾಡುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ಯಾಂತ್ರೀಕೃತ ನಾಟಿ ವ್ಯವಸ್ಥೆ ಬಂದಿದೆ. ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ಎಲ್ಲಾ ಸೌಲಭ್ಯಗಳು ದೊರೆಯುತ್ತಿರುವುದರಿಂದ ಕೃಷಿ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಬೇಕೆಂದು ಹರೀಶ್ ಸಲಹೆ ನೀಡಿದರು.  

ತಾ.ಪಂ.ಸದಸ್ಯೆ ಕುಮುದ ರಶ್ಮಿ ಮಾತನಾಡಿ ಕೆಸರು ಗದ್ದೆ ಕ್ರೀಡಾಕುಟದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿನ ದೃಢತೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಹಾಕತ್ತೂರು ಗ್ರಾ.ಪಂ.ಅಧ್ಯಕ್ಷೆ ಶಾರದ ರಾಮಕೃಷ್ಣ, ಯೂತ್ ಹಾಸ್ಟೆಲ್ ಮೇಲ್ವಿಚಾರಕ ರಾಜಶೇಖರ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ.ಹರೀಶ್, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಸುಕುಮಾರ್ ಇತರರು ಇದ್ದರು. ಇಂಧುಮತಿ ಪ್ರಾರ್ಥಿಸಿದರು. ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ, ನಾಟಿ ಓಟ, ಹೀಗೆ ವಿವಿಧ ಕ್ರೀಡೆಗಳು ನಡೆದವು.

ಗ್ರಾಮೀಣ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News