ಕೇರಳದ ಭಾರೀ ಮಳೆಗೆ ಭೂಕುಸಿತ: ಮಾಲಕನ ಕುಟುಂಬವನ್ನು ರಕ್ಷಿಸಿದ ಶ್ವಾನ!

Update: 2018-08-12 07:38 GMT
ಫೋಟೊ ಕೃಪೆ: ndtv.com

ಇಡುಕ್ಕಿ, ಆ.12: ಇಡುಕ್ಕಿ ಅಣೆಕಟ್ಟಿನ ಐದೂ ಬಾಗಿಲುಗಳನ್ನು ತೆರೆದ ಹಿನ್ನೆಲೆಯಲ್ಲಿ ಅಣೆಕಟ್ಟಿನ ಕೆಳಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು, 37 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 35 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಈ ಭೀಕರ ಪ್ರವಾಹದಿಂದಾಗಿ ಸಂಭವಿಸಿದ ಭೂಕುಸಿತದಿಂದ ತನ್ನ ಯಜಮಾನನ ಕುಟುಂಬವನ್ನು ಕುಟುಂಬವನ್ನು ರಕ್ಷಿಸಿದ ನಾಯಿಯೊಂದು ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಗುರುವಾರ ಜಿಲ್ಲೆಯ ಕಂಜಿಕುಳಿ ಗ್ರಾಮದ ಪಿ.ಮೋಹನ್ ಹಾಗೂ ಕುಟುಂಬ ತಮ್ಮ ಮನೆಯಲ್ಲಿ ಸುಖನಿದ್ರೆಯಲ್ಲಿತ್ತು. ಮುಂಜಾನೆ 3 ಗಂಟೆ ವೇಳೆಗೆ ನಾಯಿ ವಿಚಿತ್ರವಾಗಿ ಬೊಗಳುವುದು ಕೇಳಿ ಎಚ್ಚರಗೊಂಡರು. ಆದರೆ ಆರಂಭದಲ್ಲಿ ಇದನ್ನು ಮೋಹನ್ ನಿರ್ಲಕ್ಷಿಸಿದರು. ಆದರೆ ಕೆಲವೇ ನಿಮಿಷಗಳಲ್ಲಿ ಇನ್ನೂ ಜೋರಾಗಿ ಬೊಗಳಲು ಆರಂಭಿಸಿದ ರಾಕಿ, ಜೋರಾಗಿ ಊಳಿಡಲು ಆರಂಭಿಸಿತು.

"ಅದು ತೀರಾ ಅಸಹಜ ಬೊಬ್ಬೆ. ಇದರಿಂದಾಗಿ ಏನೋ ಎಡವಟ್ಟಾಗಿದೆ ಎಂದುಕೊಂಡೆವು. ಏನಾಗಿದೆ ಎಂದು ನೋಡಲು ಮನೆಯಿಂದ ಹೊರಗೆ ಬಂದೆ" ಎಂದು ಮೋಹನ್ ವಿವರಿಸಿದರು.

ಇಡೀ ಕುಟುಂಬದವರು ರಾಕಿಯ ಬಳಿ ಬಂದರು. ಅವರು ಮನೆಯಿಂದ ಹೊರಬರುತ್ತಿದ್ದಂತೇ ಮನೆಯ ಮೇಲೆ ದೊಡ್ಡ ಧರೆ ಕುಸಿದುಬಿದ್ದು ಕಣ್ಣೆದುರೇ ಮನೆ ಧ್ವಂಸವಾಯಿತು. ರಾಕಿ ಹಾಗೂ ಯಜಮಾನನ ಕುಟುಂಬದವರು ಸರ್ಕಾರ ವ್ಯವಸ್ಥೆ ಮಾಡಿದ್ದ ಪರಿಹಾರ ಶಿಬಿರಕ್ಕೆ ಓಡಿದರು.

ಮೋಹನ್ ಕುಟುಂಬ ವಾಸವಿದ್ದ ಕಟ್ಟಡದಲ್ಲೇ ಇದ್ದ ವೃದ್ಧ ದಂಪತಿ ಭೂಕುಸಿತದಿಂದ ಮೃತಪಟ್ಟಿದ್ದಾರೆ. ಪೆರಿಯಾರ್ ನದಿ ತೀರದಲ್ಲಿದ್ದ ಮನೆಗೆ ಪ್ರವಾಹಭೀತಿ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ಕುಟುಂಬ ಒಂದು ಕಿಲೋಮೀಟರ್ ದೂರದ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತ್ತು. "ಅಧಿಕಾರಿಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ನಾವು ಬಾಡಿಗೆ ಮನೆಗೆ ಬಂದೆವು. ಆದರೆ ಭೂಕುಸಿತದಿಂದ ನಮ್ಮ ಬಾಡಿಗೆ ಮನೆ ಧ್ವಂಸವಾಗಿದ್ದು, ಅಜ್ಜ- ಅಜ್ಜಿ ಜೀವಂತ ಸಮಾಧಿಯಾದರು. ಪತ್ನಿ ಹಾಗೂ ಒಂದು ವರ್ಷದ ಮಗುವನ್ನು ಜನ ರಕ್ಷಿಸಿದರು ಎಂದು 24 ವರ್ಷದ ಮೊಮ್ಮಗ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News