ಮಿತಿಗಳ ನಡುವೆ ಬೆವರಹನಿಗಳು...

Update: 2018-08-12 18:30 GMT

ಬದುಕಿನಿಂದಲೇ ಯಥಾವತ್ ಮೊಗೆದು ತೆಗೆದ ನೆನಪುಗಳ ಹನಿಗಳೇ ಕೆ. ಮಲ್ಲಿನಾಥ್ ಅವರು ಬರೆದ 'ಬೆವರ ಹನಿಗಳು'. ಅವರೇ ಹೇಳುವಂತೆ ಇವು ಜೀವನದ ಸತ್ಯ ಘಟನೆಗಳನ್ನು ಆಧರಿಸಿದವುಗಳು. ಲೇಖಕ ಮಲ್ಲಿನಾಥರು ಕೆಎಎಸ್ ಅಧಿಕಾರಿ. ಇಂತಹದೊಂದು ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುವಾಗ ಅವರು ಮುಖಾಮುಖಿಗೊಳ್ಳಬೇಕಾದ ಹಲವು ಮಹತ್ವದ ಸಂಗತಿಗಳಿರುತ್ತವೆ. ಜನಸಾಮಾನ್ಯರೊಂದಿಗೆ ಮಾತ್ರವಲ್ಲ, ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಹಿರಿಯ ನಾಗರಿಕರ ಜೊತೆಗೆ ವ್ಯವಹಾರಿಸುವ ಸಂದರ್ಭಗಳು ಎದುರಾಗುತ್ತವೆ. ಈ ನಿಟ್ಟಿನಲ್ಲಿ ಮಲ್ಲಿನಾಥ್ ಅವರ ಬರಹಗಳು ಒಂದಿಷ್ಟು ಕುತೂಹಲವನ್ನು ಹುಟ್ಟಿಸುತ್ತವೆೆ. ಈ ಕೃತಿಯನ್ನು ಮೂರು ಭಾಗವನ್ನಾಗಿ ಮಾಡಿದ್ದಾರೆ. ಮೊದಲ ಭಾಗದಲ್ಲಿ ಮಂಜುಹನಿಯ ನೆನಪುಗಳಿವೆ. ಭಾಗ ಎರಡರಲ್ಲಿ, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಗಳಿವೆ. ಭಾಗ ಮೂರರಲ್ಲಿ ವೃತ್ತಿ ಬದುಕಿನ ಜೊತೆಗೆ ಬೆಸೆದುಕೊಂಡ ಇತರ ಬರಹಗಳಿವೆ.
ಬೆರಳಚ್ಚುಗಾರನಾಗಿ ಆರಂಭಗೊಂಡ ಲೇಖಕರ ಬದುಕು, ಬಳಿಕ ಶಿಕ್ಷಕನಾಗಿ, ಆ ಬಳಿಕ ಕಂದಾಯ ಇಲಾಖೆಯ ಅಧಿಕಾರಿ....ಮುಂದೆ ತಹಶೀಲ್ದಾರ್...ಹೀಗೆ ಅವರ ವೃತ್ತಿ ಬದುಕು ಮುಂದುವರಿಯುತ್ತದೆ. ಇಲ್ಲಿ ವೃತ್ತಿ ಬದುಕಿನಲ್ಲಿ ಮಾಡಿದ ಸಾಧನೆಗಳಷ್ಟೇ ಅಲ್ಲ, ಆ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅವರ ಅನುಭವ, ಅವರು ಕಂಡುಕೊಂಡ ಬದುಕು, ಬವಣೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ತಮ್ಮ ಮಂಜುಹನಿಗಳು ಕೃತಿಯಲ್ಲಿ ತಮ್ಮ ಬದುಕಿನ ಅನೇಕ ವಿಷಯಗಳನ್ನು ಪ್ರಸ್ತಾಪಿಸಿರುವ ಲೇಖಕರು, ಈ ಕೃತಿಯಲ್ಲಿ ತಮ್ಮ ಮೂರು ದಶಕಗಳ ಆಡಳಿತಾತ್ಮಕ ಅನುಭವ ಹಾಗೂ ನಿವೃತ್ತಿಯ ಅನಂತರ ಎರಡು ದಶಕಗಳ ವಿವಿಧ ಇಲಾಖೆಗಳಲ್ಲಿ ಕಂಡುಂಡ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಒಬ್ಬ ಅಧಿಕಾರಿಯಾಗಿ ತನ್ನ ಬದುಕಿನ ಅನುಭವವನ್ನು ತೆರೆದಿಡಬೇಕಾದರೆ ಒಂದಿಷ್ಟು ಸೃಜನಶೀಲ ಮನಸ್ಸಿರಬೇಕು. ಅಂತಹ ಸೃಜನಶೀಲ ಮನಸ್ಸಿನಿಂದ ಅರಳಿದ ಕೃತಿ ಇದು. ವಿಶೇಷವೆಂದರೆ, ಇಲ್ಲಿ ಲೇಖಕರು ತಮ್ಮ ಖಾಸಗಿ ಬದುಕಿಗೆ ಒತ್ತುಕೊಟ್ಟಿದ್ದಾರೆ. ಹಾಗೆಯೇ ತಮ್ಮ ನಂಬಿಕೆ, ಮೂಢನಂಬಿಕೆ ಎಲ್ಲವನ್ನೂ ಓದುಗರ ಮೇಲೆ ಹೇರುವ ಪ್ರಯತ್ನ ಮಾಡಿದ್ದಾರೆ. ಇದು ಕೃತಿಯ ಮಿತಿಯೂ ಹೌದು. ಜನಸಾಮಾನ್ಯರೊಂದಿಗೆ ಬೆಸೆಯುವ ಅಪಾರ ಅವಕಾಶವಿರುವ ವೃತ್ತಿ ಕಂದಾಯ ಇಲಾಖೆ. ಈ ಸಂದರ್ಭದಲ್ಲಿ ಜನಸಾಮಾನ್ಯರ ಜೊತೆಗೆ ಬೆರೆತು, ಅವರು ಬದುಕು ಬವಣೆಗಳನ್ನು ಪರಿಣಾಮಕಾರಿಯಾಗಿ ತೆರೆದಿಡುವ ಅವಕಾಶ ಲೇಖಕರಿಗಿತ್ತು. ವೈಯಕ್ತಿಕ ಅನುಭವಗಳನ್ನು ಕಥನರೂಪದಲ್ಲಿ ವಿವರಿಸಬಹುದಾಗಿತ್ತು. ಆದರೆ ಇದು ಸಣ್ಣ ಪುಟ್ಟ ಟಿಪ್ಪಣಿಗಳಂತಿದೆ. ಒಂದು ರೀತಿಯಲ್ಲಿ ಲೇಖಕರ ಆತ್ಮಕಥನವಾಗಿದೆ. ಕೆಲವು ಪ್ರಕರಣಗಳಂತೂ ವರದಿಯ ರೂಪದಲ್ಲಿವೆೆ. ಅದು ನೀರಸವಾಗಿದೆ. ಓದುಗರ ಜೊತೆಗೆ ಸಂವಾದಿಸುವಲ್ಲಿ ಅದು ವಿಫಲವಾಗುತ್ತದೆ. ನಿವೃತ್ತ ಅಧಿಕಾರಿಯಾಗಿ ಇಷ್ಟರಮಟ್ಟಿಗಾದರೂ ತಮ್ಮ ವೃತ್ತಿ ದಾರಿಯ ಕಡೆಗೆ ಹಿನ್ನೋಟ ಹರಿಸಿದ ಕಾರಣಕ್ಕೆ ಮಲ್ಲಿನಾಥರನ್ನು ಅಭಿನಂದಿಸಬೇಕು. ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ಇನ್ನಷ್ಟು ವಿಸ್ತಾರವಾಗಿ, ಒಳನೋಟಗಳ ಜೊತೆಗೆ ಕಟ್ಟಿಕೊಡುವ ಅವಕಾಶ ಅವರಿಗಿದೆ. ಮುಂದಿನ ದಿನಗಳಲ್ಲಿ ಅವರಿಂದ ಅಂತಹದೊಂದು ಪ್ರಯತ್ನ ನಡೆಯಬೇಕಾಗಿದೆ.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News