ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದ ರೂಪಾಯಿ

Update: 2018-08-13 06:27 GMT

 ಮುಂಬೈ, ಆ.13: ಭಾರತದ ರೂಪಾಯಿ ವೌಲ್ಯ ಸೋಮವಾರ ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದಿದೆ. ಭಾರತದ ರೂಪಾಯಿ ಮೌಲ್ಯ ಇಂದು 69.62 ರೂ.ಗೆ ಕುಸಿದಿದೆ. ಈ ದಿಢೀರ್ ಬೆಳವಣಿಗೆಗೆ ಟರ್ಕಿಯ ಆರ್ಥಿಕ ಬಿಕ್ಕಟ್ಟು ಕಾರಣ ಎನ್ನಲಾಗಿದೆ.

ಆಮದುದಾರರಿಂದ ಹಾಗೂ ಬ್ಯಾಂಕ್‌ಗಳಿಂದ ಅಮೆರಿಕ ಕರೆನ್ಸಿಗೆ ಹೆಚ್ಚಿದ ಬೇಡಿಕೆ, ಹೊಸ ವಿದೇಶಿ ನಿಧಿಯ ಹೊರಹರಿವು ರೂಪಾಯಿ ವೌಲ್ಯ ಕುಸಿತಕ್ಕೆ ಕಾರಣ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. 2018ರ ಜು.20 ರಂದು ರೂಪಾಯಿ ವೌಲ್ಯ ದಾಖಲೆ ಕನಿಷ್ಠ ಮೌಲ್ಯಕ್ಕೆ (69.13 ರೂ.) ಕುಸಿತ ಕಂಡಿತ್ತು.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ಹತ್ತಿರದಿಂದ ಗಮನಿಸುತ್ತಿರುವ ಆರ್‌ಬಿಐ, ಪರಿಸ್ಥಿತಿ ಕೈಮೀರಿದರೆ ಮಧ್ಯೆ ಪ್ರವೇಶಿಸಿ ಆರ್ಥಿಕ ನಿಯಮಗಳಲ್ಲಿ ಬದಲಾವಣೆ ತಂದು ರೂಪಾಯಿ ವೌಲ್ಯ ಕುಸಿತ ತಡೆಯಲು ಯತ್ನಿಸುವ ಸಾಧ್ಯತೆಯಿದೆ.

ಕಳೆದ ವಾರವಿಡೀ ಚೇತೋಹಾರಿ ವಹಿವಾಟು ನಡೆಸಿದ್ದ ಭಾರತದ ಶೇರು ಮಾರುಕಟ್ಟೆ ಸೋಮವಾರ ಆರಂಭದಲ್ಲೇ ಕುಸಿತ ಕಂಡಿದೆ. ಇಂದಿನ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 280 ಅಂಕಗಳ ಕುಸಿತ ಕಂಡಿದ್ದರೆ, ನಿಫ್ಟಿ 11350 ಅಂಕಗಳಿಗೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News