ಮೋದಿ ಚೌಕೀದಾರ ಅಲ್ಲ, ಭ್ರಷ್ಟಾಚಾರದ ಭಾಗೀದಾರ : ಸಿದ್ದರಾಮಯ್ಯ

Update: 2018-08-13 13:22 GMT

ಬೀದರ್, ಆ.13: ಪ್ರಧಾನಿ ನರೇಂದ್ರ ಮೋದಿ ದೇಶದ ಚೌಕೀದಾರ ಅಲ್ಲ, ಭ್ರಷ್ಟಾಚಾರದ ಭಾಗಿದಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಲ್ಕು ವರ್ಷಗಳ ಬಳಿಕ ಕೇಂದ್ರದ ಬಿಜೆಪಿ ಸರಕಾರದ ಬಂಡವಾಳ ಬಯಲಾಗಿದೆ. ಎಲ್ಲ ರಂಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಸುಳ್ಳು ಭರವಸೆ ಮತ್ತು ಅಪಪ್ರಚಾರದ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ. ನರೇಂದ್ರ ಮೋದಿ ಈ ದೇಶದ ಚೌಕೀದಾರ ಅಲ್ಲ. ಭ್ರಷ್ಟಾಚಾರದ ಭಾಗಿದಾರ. ಅವರ ಕುಮ್ಮಕ್ಕಿನಿಂದಲೇ ದೇಶದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ದೂರಿದರು. ಸುಳ್ಳು ಭರವಸೆಗಳ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೋದ ಮೋದಿ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ರಾಹುಲ್ ಗಾಂಧಿಯವರು ಪ್ರಧಾನಿ ಆಗಲಿದ್ದಾರೆ. ಬಳಿಕ ಅವರು ರೈತರ ಸಾಲ ಮನ್ನಾ ಮಾಡಲಿದ್ದಾರೆ. ಪ್ರಧಾನಿಯವರ ಮನ್ ಕೀ ಬಾತ್ ನಿಂದ ಬಡವರ ಹೊಟ್ಟೆ ತುಂಬದು. ಅವರಿಗೆ ಬೇಕಿರುವುದು ಕಾಮ್ ಕೀ ಬಾತ್. ದಲಿತರ ಬಗ್ಗೆ ಮೋದಿಗೆ ಕಾಳಜಿ ಇದ್ದರೆ ಅವರಿಗಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಎಸ್ಸಿಪಿ, ಟಿಎಸ್ಪಿ ಕಾಯಿದೆಯನ್ನು ದೇಶವ್ಯಾಪಿ ಜಾರಿಗೆ ತರಲಿ. ಕೇವಲ ಮೂಗಿಗೆ ತುಪ್ಪ ಸವರುವುದರಿಂದ ದಲಿತರು, ರೈತರ ಉದ್ಧಾರ ಆಗದು. ಅವರ ಕಲ್ಯಾಣಕ್ಕೆ ಕಾರ್ಯಕ್ರಮ ಜಾರಿಗೆ ತರಬೇಕು. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಅವರು ತಿಳಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಆರು ಸ್ಥಾನಗಳ ಪೈಕಿ ನಾಲ್ಕು ಸ್ಥಾನ ತಂದುಕೊಟ್ಟ ಮತದಾರರಿಗೆ ಕೃತಜ್ಞತೆಗಳು. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ತಂದುಕೊಟ್ಟದ್ದು ಕೇಂದ್ರದಲ್ಲಿದ್ದ ಯುಪಿಎ ಸರಕಾರ. ಬಿಜೆಪಿಯಿಂದ ಆ ಕೆಲಸ ಆಗಲಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು. ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಕಳಕಳಿಗೆ ಬಲ ಬರಬೇಕಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಪಕ್ಷಕ್ಕೆ ಆಶೀರ್ವಾದ ಮಾಡುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕೆಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ರಾಜ್ಯ ಕಾಂಗ್ರೆಸ್ ಸಾರಥ್ಯವನ್ನು ದಿನೇಶ್ ಗಂಡೂರಾವ್ ಹಾಗೂ ಈಶ್ವರ್ ಖಂಡ್ರೆಗೆ ವಹಿಸಿದ್ದಾರೆ. ಈ ಇಬ್ಬರು ಯುವ ಮುಖಂಡರ ನಾಯಕತ್ವದಲ್ಲಿ ನಮ್ಮ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಾವು ನುಡಿದಂತೆ ನಡೆದು ಅಧಿಕಾರ ನಡೆಸಿ ಜನರ ಹಿತ ಕಾಪಾಡಿದೆವು. ಆದರೆ, ಬಿಜೆಪಿಗರ ಅಪಪ್ರಚಾರಕ್ಕೆ ನಮ್ಮ ಪಕ್ಷ ಬಲಿಯಾಯಿತು. ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಯಮಾಡಿ ತಾವು ಬಿಜೆಪಿಯರ ಮಾತಿಗೆ ಕಿವಿಗೊಡದೆ ನಮ್ಮ ಪಕ್ಷವನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಡಿ.ಕೆ.ಶಿವಕುಮಾರ್, ರಾಜಶೇಖರ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News