ಸಮಾಜದ ಅಪೇಕ್ಷೆಗೆ ತಕ್ಕಂತೆ ಮಾಧ್ಯಮ ಕ್ಷೇತ್ರ ಕಾರ್ಯನಿರ್ವಹಿಸಬೇಕು: ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ

Update: 2018-08-13 11:43 GMT

ಮುಂಡಗೋಡ,ಆ.13: ಸಮಾಜದ ಅಪೇಕ್ಷೆಗೆ ತಕ್ಕಂತೆ ಮಾಧ್ಯಮ ಕ್ಷೇತ್ರ ಕಾರ್ಯನಿರ್ವಹಿಸಬೇಕು. ಇದು ಅತಿ ಸೂಕ್ಷ್ಮ ಸಂವೇದನೆ ಹೊಂದಿದ ಕ್ಷೇತ್ರ. ಸಮಾಜದ ಉಳಿದ ಕ್ಷೇತ್ರಗಳ ಪರಿಚಯ ಕೂಡ ಈ ಕ್ಷೇತ್ರದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಸಮಾಜ ಕೂಡ ಮಾಧ್ಯಮ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ಶಿರಸಿ-ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಶಿರಸಿ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಆಯೋಜಿಸಲಾಗಿದ್ದ ರಾಧಾಕೃಷ್ಣ ಭಟ್ ಭಟ್ಕಳ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಸಮಾಜ ಪರಿವರ್ತನೆಗೆ ಬೇಕಾದ ಪೂರಕ ಚಟುವಟಿಕೆ ಹಮ್ಮಿಕೊಳ್ಳಬೇಕು. ಪತ್ರಕರ್ತರು ಸಮಾಜದಲ್ಲಿ ತನ್ನದೇ ಆದ ಪ್ರಭಾವ ಬೆಳೆಸಿಕೊಳ್ಳಬೇಕು.  ಹಾಗಾದಾಗ ಮಾಧ್ಯಮ ರಂಗಕ್ಕೂ ಅನುಕೂಲ ಎಂದರು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೊದ್ಯಮ ಸೂಕ್ಷ್ಮವಾಗಿದೆಯಲ್ಲದೇ ಜನತೆಯೂ ಪತ್ರಕರ್ತನನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದರು.

ವಿಜಯವಾಣಿ ಸ್ಥಾನಿಕ ಸಂಪಾದಕ ದತ್ತನಿಧಿ ಉಪನ್ಯಾಸ ನೀಡಿ, ಪ್ರಶ್ನೆ ಕೇಳುವುದು, ವಿಷಯ ಕೆದಕುವುದು ಪತ್ರಕರ್ತನ ಕರ್ತವ್ಯ. ಆದರೆ ಬರವಣಿಗೆ ನಿಷ್ಪಕ್ಷಪಾತವಾಗಿರಲಿ. ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿಗಳನ್ನು ಹರಿಬಿಡುತ್ತಾರೆ. ಇವುಗಳಲ್ಲಿ  ಸುಳ್ಳು ಸತ್ಯಗಳ ಅನ್ವೇಷಣೆಯೂ ಇರುವುದಿಲ್ಲ. ಹಾಗೇ ಯಾರೂ ಜವಾಬ್ದಾರರಿರುವುದದಿಲ್ಲ. ಹಾಗಾಗಿ ಸತ್ಯ ಸಂಗತಿಗಳನ್ನು  ಜನತೆಗೆ ತಲುಪಿಸುವ ಮೂಲಕ ಮಾಧ್ಯಮ ಕ್ಷೇತ್ರ ಅವುಗಳ ಅಪಾಯವನ್ನು ನಿಯಂತ್ರಿಸಬೇಕಾಗುತ್ತದೆ. ತಾನು ಬರೆದಿದ್ದೆಲ್ಲ ಸತ್ಯ ಎಂಬ ಅಹಂ ಪತ್ರಕರ್ತನಿಗೆ ಬಂದರೂ ಅವಾಂತರ ಸೃಷ್ಟಿಯಾಗುತ್ತದೆ. ಟಿ.ವಿ ಮಾಧ್ಯಮ ಬಂದ ಬಳಿಕ ಪತ್ರಿಕಾ ಪ್ರಸಾರಕ್ಕೆ ತೊಂದರೆ ಆಗಿದೆ ಎಂಬುದು ಸತ್ಯವಲ್ಲ. ಏಕೆಂದರೆ ಸುದ್ದಿವಾಹಿನಿಗಳು ಹೆಚ್ಚಾದ ಬಳಿಕ ಪತ್ರಿಕಾ ಪ್ರಸಾರ ಸಂಖ್ಯೆ ಶೇ.8.75 ರಷ್ಟು ಏರಿಕೆಯಾಗಿದೆ ಎಂದು ಹೇಳಿದರು.

ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಜಿಲ್ಲೆಯಲ್ಲಿ ಸಂಘ ಇನ್ನಷ್ಟು ಬಲಗೊಳಿಸುತ್ತೇವೆ. ಸೋಶಿಯಲ್ ಮಿಡಿಯಾ ಸವಾಲಾಗಿದ್ದರೂ ಫೇಕ್ ಸುದ್ದಿ ಬರುವುದರಿಂದ ಜನರು ಪತ್ರಿಕೆ ಮೇಲೆ ವಿಶ್ವಾಸವಿಡುತ್ತಾರೆ ಎಂದರು. ಸಂಘದ ಸದಸ್ಯರು ತಮಗೆ ಸಹಕಾರ ನೀಡಬೇಕು ಎಂದು ಕೋರಿದರು

ನಿಕಟಪೂರ್ವ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ತಮ್ಮ ಅವಧಿಯಲ್ಲಿ ಮಾಡಿದಂತಹ ಸಾಧನೆ ಕುರಿತು ವಿವರಿಸಿದರು

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಉಪಾಧ್ಯಕ್ಷ ಬಸವರಾಜ ಪಾಟೀಲ(ಮುಂಡಗೋಡ) ಅನಂತ ದೇಸಾಯಿ ನರಸಿಂಹ ಅಡಿ, ಸುಮಂಗಲ ಹೊನ್ನೆಕೊಪ್ಪ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News