ರಾಜ್ಯಸಭೆಯಲ್ಲಿ ಕೊಡವ ಲ್ಯಾಂಡ್ ಕುರಿತು ಚರ್ಚೆ: ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿಶ್ವಾಸ

Update: 2018-08-13 11:48 GMT

ಮಡಿಕೇರಿ, ಆ.13: ಕೊಡಗಿನ ಮೂಲಭೂತವಾದ ಸಮಸ್ಯೆಗಳ ಪರಿಹಾರ ಮತ್ತು ಅತೀ ಸೂಕ್ಷ್ಮಾತಿ ಸೂಕ್ಷ್ಮ ಜನಾಂಗವಾದ ಕೊಡವರ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಕೊಡವ ಪ್ರದೇಶ ಸ್ವಾಯತ್ತತೆಯ ಕುರಿತಾದ ಕೊಡವ ನ್ಯಾಷನಲ್ ಕೌನ್ಸಿಲ್‍ನ ಹೋರಾಟಕ್ಕೆ ಪೂರಕವಾಗಿ, ಪ್ರಸಕ್ತ ಸಾಲಿನ ನವೆಂಬರ್ ನಲ್ಲಿ ನಡೆಯುವ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಕೊಡವರ ಬೇಡಿಕೆಗಳಿಗೆ ಕಳೆದ ಸಾಲಿನ ಕೊಡವ ನ್ಯಾಷನಲ್ ಡೇಯಲ್ಲಿ ಪಾಲ್ಗೊಂಡಿದ್ದ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣ್ಯನ್ ಸ್ವಾಮಿ ಸ್ಪಂದಿಸಿದ್ದರು. ಇದೀಗ ಇವರ ಮೂಲಕ ಮುಂದಿನ ನವೆಂಬರ್ ನಲ್ಲಿ ನಡೆಯುವ ಲೋಕಸಭೆಯಲ್ಲಿ ಕೊಡವ ಪ್ರದೇಶ ಸ್ವಾಯತ್ತತೆ ಕುರಿತ ಮಸೂದೆ ಮಂಡನೆಯಾಗುವುದರೊಂದಿಗೆ, ರಾಜ್ಯಸಭೆಯಲ್ಲಿ ಚರ್ಚೆಗೆ ಒಳಪಡಲಿದೆ. ಇದು ಸಿಎನ್‍ಸಿಯ ಅವಿಶ್ರಾಂತ ಹೋರಾಟದ ಫಲವಾಗಿದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗುವ ಮತ್ತು ರಾಜ್ಯಸಭೆಯಲ್ಲಿ ವಿಷಯ ಚರ್ಚೆಗೊಳಪಡುವ ವಿಚಾರವನ್ನು ಸ್ವತಃ ಡಾ. ಸುಬ್ರಮಣ್ಯನ್ ಸ್ವಾಮಿ ಅವರು ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಬಿಜೆಪಿಯ ಉನ್ನತ ಮಟ್ಟದ ನಾಯಕತ್ವದಲ್ಲಿ ಕೊಡವ ಪ್ರದೇಶಕ್ಕೆ ಸ್ವಾಯತ್ತತೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಂವಿಧಾನಿಕ ರಕ್ಷಣೆ ನೀಡಲು ಸಹಮತ ಹಾಗೂ ಒಮ್ಮತ ಮೂಡಿರುವ ಕುರಿತು ಆಶಾವಾದವನ್ನು ಡಾ.ಸುಬ್ರಮಣ್ಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ ಎಂದು ನಾಚಪ್ಪ ತಿಳಿಸಿದರು.

ಅತೀ ಸೂಕ್ಷ್ಮಾತೀಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಸಮುದಾಯವಾದ ಕೊಡವರಿಗೆ ಕೊಡಗಿನಲ್ಲಲ್ಲದೆ ಬೇರೆಲ್ಲೂ ಅವರ ಸಾಂಸ್ಕೃತಿಕ ತಾಯಿ ಬೇರುಗಳಿಲ್ಲ. ಇದೆಲ್ಲವನ್ನು ಅರಿತ  ಡಾ.ಸುಬ್ರಮಣ್ಯನ್ ಸ್ವಾಮಿಯವರು ಮತ್ತು ಬಿ.ಕೆ.ಹರಿಪ್ರಸಾದ್‍ರವರು ಕೊಡವ ಸಮುದಾಯದ ಹಿತಾಸಕ್ತಿಗೆ ಪೂರಕವಾಗಿ ಈ ದೇಶದ ಸರ್ವೋಚ್ಛ ಶಾಸನ ಸಭೆಯ ಮುಂದೆ ಖಾಸಗಿ ಮಸೂದೆ ಮಂಡಿಸುವ ಮೂಲಕ ಕೊಡವರ ವೇದನೆ ಸಂವೇದನೆಗಳನ್ನು  ಅನಾವರಣಗೊಳಿಸಿರುವುದಾಗಿ ಅವರು ಹೇಳಿದರು.

ಡಾ.ಸುಬ್ರಮಣ್ಯನ್ ಸ್ವಾಮಿಯವರು ಕೊಡವ ಪ್ರದೇಶ ಸ್ವಾಯತ್ತತೆ ವಿಚಾರವನ್ನು ಲೋಕಸಭೆಯ ಮುಂದೆ ಖಾಸಗಿ ಮಸೂದೆಯಾಗಿ ಮಂಡಿಸಿ, ಸಧ್ಯದಲ್ಲೇ ಅದು ಚರ್ಚೆಗೆ ಬರುವಂತೆ ನೋಡಿಕೊಂಡರೆ, ಬಿ.ಕೆ. ಹರಿಪ್ರಸಾದ್‍ರವರು ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನಗಳನ್ನು ನಡೆಸಿರುವುದನ್ನು ನಾಚಪ್ಪ ಉಲ್ಲೇಖಿಸಿದರು.

ಸಿಎನ್‍ಸಿ ಆತ್ಮಸ್ಥೈರ್ಯದಿಂದ ಶಾಂತಿಯ ಮಾರ್ಗದಲ್ಲಿ ಹೋರಾಟವನ್ನು ನಡೆಸುತ್ತಾ ಬಂದಿದೆ. ಆದರೆ ಇದನ್ನು ಹತ್ತಿಕ್ಕುವ ಕಾರ್ಯವನ್ನು ಕೆಲವು ಸ್ವಜಾತಿ ಭ್ರಷ್ಟರು ಮಾಡಿದ್ದಾರೆ. ಕೊಡವರ ಪರವಾದ ಹೋರಾಟಗಳನ್ನು ವಿರೋಧಿಸುವ ಕೆಲವರು ನಕ್ಸಲ್ ಮತ್ತು ದೇಶದ್ರೋಹಿ ಚಟುವಟಿಕೆಗಳ ಬಗ್ಗೆ ಮೃದುಧೋರಣೆ ತೋರುತ್ತಿದ್ದಾರೆ ಎಂದು ನಾಚಪ್ಪ ಆರೋಪಿಸಿದರು. ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸಿದಾಗ ಮಾತ್ರ ಜಮ್ಮಾಬಾಣೆ ಜಾಗ ಕೊಡವರ ಬಳಿಯೇ ಉಳಿಯುತ್ತದೆ. ಇಲ್ಲದಿದ್ದಲ್ಲಿ ಸರಕಾರದ ಆಸ್ತಿ ಎಂದು ಗುರುತಿಸಲ್ಪಡುವ ಆತಂಕ ಎದುರಾಗಬಹುದೆಂದು ಅವರು ಇದೇ ಸಂದರ್ಭ ಅಭಿಪ್ರಾಯಪಟ್ಟರು.

ಡಾ.ಸುಬ್ರಮಣ್ಯನ್ ಸ್ವಾಮಿ ಜನ್ಮದಿನ
ಕೊಡಗಿನ ಕೊಡವರ ಭಾವನೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿರುವ ಡಾ.ಸುಬ್ರಮಣ್ಯನ್ ಸ್ವಾಮಿಯವರ 78ನೇ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಸಿ.ಎನ್.ಸಿ. ತಲಕಾವೇರಿಯಲ್ಲಿ ಶ್ರೀ ಅಗಸ್ತ್ಯೇಶ್ವರರಿಗೆ, ಮಾತೆ ಕಾವೇರಿಗೆ ಮತ್ತು ಶ್ರೀ ಇಗ್ಗುತಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಅವರ ಆರೋಗ್ಯ ಮತ್ತು ಭವಿಷ್ಯ ಉತ್ತಮವಾಗಿರಲೆಂದು ಪ್ರಾರ್ಥಿಸಲಿದೆ ಎಂದು ನಾಚಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಕಿರಿಯಮಾಡ ಶರಿನ್ ಹಾಗೂ ಚಂಬಂಡ ಜನತ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News