ಮಡಿಕೇರಿ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಆ.15 ರಂದು ‘ಫ್ರೀಡಂ ಸ್ಕ್ವಾರ್’ ಕಾರ್ಯಕ್ರಮ

Update: 2018-08-13 11:54 GMT

ಮಡಿಕೇರಿ ಆ.13 :‘ಸ್ವಾತಂತ್ರ್ಯ ಸಂರಕ್ಷಿಸೊಣ ಹೋರಾಟ ಮುಂದುವರೆಸೋಣ’ ಎಂಬ ಘೋಷ ವಾಕ್ಯದೊಂದಿಗೆ ಎಸ್ಕೆಎಸ್ಸೆಸ್ಸೆಫ್ ಕೊಡಗು ಜಿಲ್ಲಾ ವತಿಯಿಂದ ಸ್ವಾತಂತ್ರ್ಯೋತ್ಸವದ ದಿನವಾದ ಆಗಸ್ಟ್ 15 ರಂದು ಸುಂಟಿಕೊಪ್ಪ ನೆಲ್ಯಹುದಿಕೇರಿ ಮತ್ತು ಎಮ್ಮೆಮಾಡಿನಲ್ಲಿ ‘ಫ್ರೀಡಂ ಸ್ಕ್ವಾರ್’ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿಸ್ಬಾಹಿ ಎಮ್ಮೆಮಾಡು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಹಿರಿಯರ ತ್ಯಾಗ ಬಲಿದಾನಗಳಿಂದ ದೊರಕಿರುವ ಸ್ವಾತಂತ್ರ್ಯದ ಫಲ ಇಂದಿಗೂ ರಾಷ್ಟ್ರದ ಎಲ್ಲರಿಗೂ ಸಮರ್ಪಕವಾಗಿ ದೊರಕಿಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಹಲವಾರು ವಿದ್ಯಮಾನಗಳಿಂದ ಸ್ವಾತಂತ್ರ್ಯದ ಮೂಲ ಉದ್ದೇಶಕ್ಕೆ ಧಕ್ಕೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯವನ್ನು ಸಂರಕ್ಷಿಸುವ ಪ್ರಯತ್ನದ ಭಾಗವಾಗಿ ಸಂಘಟನೆ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮವನ್ನು ಆಯೋಜಿಸಿದೆಯೆಂದು ಮಾಹಿತಿಯನ್ನಿತ್ತರು.

ಕುಶಾಲನಗರ ವಲಯದ ಸುಂಟಿಕೊಪ್ಪದಲ್ಲಿ ನಡೆಯುವ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ  ತಮ್ಲಿಖ್ ದಾರಿಮಿ ಮತ್ತು ಸುಂಟಿಕೊಪ್ಪದವರೇ ಆದ ಎಂ.ಸಿ. ಅಬ್ದುಲ್ ಹಮೀದ್ ಮುಸ್ಲಿಯಾರ್ ಪ್ರಧಾನ ಭಾಷಣ ಮಾಡಲಿದ್ದಾರೆ. ಸಿದ್ದಾಪುರ ವಲಯದ ನೆಲ್ಯಹುದಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಪಿ.ಎಂ. ಆರಿಫ್, ಸಂಘಟನೆಯ ಜಿಲ್ಲಾ ಕಾರ್ಯನಿರ್ವಾಹಕ ಕಾರ್ಯದರ್ಶಿ ಶುಹೈಬ್ ಫೈಝಿ ಕೊಳಕೇರಿ ಭಾಷಣ ಮಾಡಲಿದ್ದಾರೆ. ವೀರಾಜಪೇಟೆ ವಲಯದ ಎಮ್ಮೆಮಾಡಿನ ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿಸ್ಬಾಹಿ, ವೀರಾಜಪೇಟೆ ವಲಯದ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಫೈಝಿ ಮುಖ್ಯ ಭಾಷಣ ಮಾಡಲಿದ್ದಾರೆಂದು ತಿಳಿಸಿದಿರು.

ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯಿಂದ 200 ವಲಯಗಳಲ್ಲಿ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ ನಡೆಯಲಿದ್ದು, ಇದರ ಭಾಗವಾಗಿ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಶ್ರಮಿಸಿದವರು, ಬಲಿದಾನಗೈದವರನ್ನು ಸ್ಮರಿಸಿ, ಸ್ವಾತಂತ್ರ್ಯದ ಮಹತ್ವವನ್ನು ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ನಡೆಯಲಿದೆಯೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಂಚಾಲಕ ಕರೀಂ ಮೌಲವಿ ಸಿದ್ದಾಪುರ, ಸಿದ್ದಾಪುರ ವಲಯದ ಖಜಾಂಚಿ, ಅಬ್ದುಲ್ ರಶೀದ್, ಜಿಲ್ಲಾ ಸದಸ್ಯ ಸಂಶುದ್ದೀನ್ ಎನ್., ನೆಲ್ಯಹುದಿಕೇರಿ ವಿಭಾಗದ ಉಪಾಧ್ಯಕ್ಷ ಶಮೀದ್ ಎಂ.ಹೆಚ್. ಹಾಗೂ ಕುಶಾಲನಗರ ವಲಯದ ಶಕೀರ್ ಫೈಝಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News