ಖಾಸಗಿ ಬ್ಯಾಂಕುಗಳ ಸಾಲಮನ್ನಾ ಮಾಡುತ್ತಿರುವ ಮೊದಲ ರಾಜ್ಯ ನಮ್ಮದು: ಕೃಷಿ ಸಚಿವ ಶಿವಶಂಕರ ರೆಡ್ಡಿ

Update: 2018-08-13 17:27 GMT

ದಾವಣಗೆರೆ,ಆ.13: ಈಗಾಗಲೇ 2 ಲಕ್ಷ ರೂ ವರೆಗಿನ ಬೆಳೆಸಾಲ ಮನ್ನಾ ಮಾಡಲಾಗಿದ್ದು, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಖಾಸಗಿ ಬ್ಯಾಂಕುಗಳಲ್ಲಿರುವ ರೈತರ ಸಾಲಮನ್ನಾ ಮಾಡಲು ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ಹಾಗಾಗಿ ಕೇಂದ್ರ ಸರ್ಕಾರ ಹೊರತುಪಡಿಸಿದರೆ ರಾಜ್ಯಗಳ ಪೈಕಿ ಖಾಸಗಿ ಬ್ಯಾಂಕುಗಳ ಸಾಲಮನ್ನಾ ಮಾಡುತ್ತಿರುವ ಮೊದಲ ರಾಜ್ಯ ನಮ್ಮದಾಗಿದೆ ಎಂದು ಕೃಷಿ ಸಚಿವ ಹೆಚ್.ಎಸ್.ಶಿವಶಂಕರ ರೆಡ್ಡಿ ಹೇಳಿದರು.

ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕೃಷಿಭಾಗ್ಯ ಯೋಜನೆಯ ರೈತರೊಂದಿಗೆ ಸಂವಾದ ಹಾಗೂ ಕೃಷಿ ಯಂತ್ರೋಪಕರಣ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರಿಗೆ ಒಟ್ಟಾರೆ 45 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಲಭಿಸಲಿದೆ. ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಿ ಅವರಿಗೆ ಋಣಮುಕ್ತಿ ಪತ್ರ ಕೊಡುವುದು ಸರ್ಕಾರದ ಉದ್ದೇಶವಾಗಿದೆ. ಈ ಹಿಂದಿನ ಸರ್ಕಾರಗಳು ಕೇವಲ ಸೊಸೈಟಿ ಸಹಕಾರ ಸಂಘಗಳ ಸಾಲಗಳನ್ನು ಮಾತ್ರ ಮನ್ನಾ ಮಾಡಿದ್ದವು ಎಂದರು.

ರಾಜ್ಯದಲ್ಲಿ ಈವರೆಗೆ ಒಂದು ಲಕ್ಷದ ತೊಂಬತ್ತಾರು ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಜಿಲ್ಲೆಯಲ್ಲಿ 6 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಎರಡೂವರೆ ಎಕರೆ ಮೇಲ್ಪಟ್ಟ ಜಮೀನಿರುವ ರೈತರು ಕೃಷಿ ಹೊಂಡ ಮಾಡಿಕೊಳ್ಳಬಹುದು ಎಂದರು. 

ಈ ಕೃಷಿ ಹೊಂಡಗಳಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಮಳೆಯಾಶ್ರಿತ ಬೆಳೆಗಳಿಗೆ ಮಳೆ ಕೈಕೊಟ್ಟಾಗ ಕೃಷಿ ಹೊಂಡದ ನೀರನ್ನು ಬಳಸಿಕೊಂಡು ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ರೈತರು ತಮ್ಮ ಪಾಲಿನ ವಂತಿಗೆ ಪಾವತಿಸಿದರೆ ಸಬ್ಸಿಡಿ ಹಣ ದೊರೆಯುವುದರಿಂದ ಕಡಿಮೆ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದು. ಆ ಮೂಲಕ ಸುಸ್ಥಿರ ಕೃಷಿ ಚಟುವಟಿಕೆ ಮಾಡಬಹುದು ಎಂದರು.   

ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ರೈತರು ಹೇಳಿದಾಗ, ಸ್ಥಳೀಯ ಕಾರ್ಗಿಲ್ ಕಂಪನಿಯವರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು. ಸ್ಥಳೀಯರು ಬೆಳೆದ ಶೇ. 50 ರಷ್ಟು ಮೆಕ್ಕೆಜೋಳವನ್ನು ಕಂಪನಿ ಖರೀದಿಸುವಂತೆ ಅವರಿಗೆ ಮನವರಿಕೆ ಮಾಡಲಾಗುವುದು. ಹಾಗೂ ಕಂಪನಿಯವರು ಕೇಳುವಂತಹ ಗುಣಮಟ್ಟದ ಮೆಕ್ಕೆಜೋಳ ನೀಡುವುದು ರೈತರ ಜವಾಬ್ದಾರಿ. ಗುಣಮಟ್ಟದ ಮೆಕ್ಕಜೋಳ ನೀಡಿದರೆ ಹೊರ ರಾಜ್ಯಗಳಿಂದ ಕಾರ್ಗಿಲ್ ಕಂಪನಿಯು ಖರೀದಿಸುವುದನ್ನು ತಡೆಗಟ್ಟಬಹುದು. ಕೇಂದ್ರ ಸರ್ಕಾರ 1750 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ಪಡಿತರದಲ್ಲಿ ಮೆಕ್ಕೆಜೋಳ ನೀಡಿ ಎನ್ನುತ್ತಾರೆ. ನಾವುಗಳು ಮೆಕ್ಕೆಜೋಳವನ್ನು ಆಹಾರವಾಗಿ ಸೇವಿಸುವುದಿಲ್ಲ. ಹಾಗಾಗಿ ವ್ಯಾಪಾರಕ್ಕಷ್ಟೇ ಮೆಕ್ಕೆಜೋಳವನ್ನು ಅವಲಂಬಿಸಿದ್ದೇವೆ. 

ಮಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಹೆಲ್ತ್ ಕಾರ್ಡ್, ಮಣ್ಣಿನ ಪರೀಕ್ಷೆ, ಮಣ್ಣಿನ ಆರೋಗ್ಯ, ಪೋಷಕಾಂಶಗಳ ಬಗೆಗಿನ ಮಾಹಿತಿ ಎಲ್ಲವೂ ರೈತ ಸಂಪರ್ಕ ಕೇಂದ್ರದಿಂದಲೇ ದೊರೆಯುವಂತೆ ನೋಡಿಕೊಳ್ಳಲಾಗುವುದು. ಈ ಮೂಲಕ ಎಲ್ಲಾ ಪೊಷಕಾಂಶಗಳು ಬೆಳಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಕೇವಲ ಎನ್.ಪಿ.ಕೆ ಯನ್ನಷ್ಟೇ ಬೆಳೆಗಳಿಗೆ ನೀಡಿದರೆ ಸಾಲದು. ಭೂಮಿಯ ಫಲವತ್ತತೆ ಹೆಚ್ಚಿಸುವ ಲಘು ಪೋಷಕಾಂಶಗಳನ್ನು ನೀಡಬೇಕು. ಹಾಗೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿ ಹೆಚ್ಚಿನ ಇಳುವರಿ ಪಡೆಯಬಹುದೆಂದರು.

ಗೋಕಟ್ಟೆ ನಿರ್ಮಿಸಿಕೊಳ್ಳಲು ರೈತರು ಕೇಳಿದ ಬೇಡಿಕೆಗೆ ಉತ್ತರಿಸಿದ ಸಚಿವರು, ಗೋಕಟ್ಟೆ ನಿರ್ಮಿಸಿಕೊಳ್ಳಲು 10 ಲಕ್ಷ ರೂವರೆಗೆ ನರೇಗಾದಡಿ ದೊರೆಯುತ್ತದೆ. ನಿಮ್ಮ ಗ್ರಾಮ ಪಂ.ಯಿಂದಲೇ ಗೋಕಟ್ಟೆ ನಿರ್ಮಿಸಿಕೊಳ್ಳಬಹುದು ಎಂದರು.

ರೈತ ಅನುವುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಮಗೆ ಕೆಲ ತಿಂಗಳಿಂದ ಸಂಬಳ ಇಲ್ಲ ಹಾಗೂ ಕೊಡುತ್ತಿರುವ ಸಂಬಳ ತೀರಾ ಕಡಿಮೆ ಎಂಬ ಬೇಡಿಕೆಗೆ ಉತ್ತರಿಸಿದ ಸಚಿವರು, ನಿಮ್ಮ ಸೇವೆಯ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿಯಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿ ಮುಂದಿನ ದಿನಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಹೊಂಡಕ್ಕೆ ಸಚಿವರು ಬಾಗಿನ ಅರ್ಪಿಸಿದರು ಹಾಗೂ ವಿವಿಧ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೃಷಿ ಪರಿಕರಗಳನ್ನು ವಿತರಣೆ ಮಾಡಿದರು.

ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಜಿ.ಪಂ. ಸದಸ್ಯ ಬಸವಂತಪ್ಪ, ಗ್ರಾ.ಪಂ ಅಧ್ಯಕ್ಷರು, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದ್ಗಲ್, ಸಹಾಯಕ ನಿರ್ದೇಶಕ ಹಿರಿಯಣ್ಣ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News