ಕಳಸ: ಮುಂದುವರೆದ ಮಳೆ; ಹಲವೆಡೆ ಗುಡ್ಡ ಕುಸಿತ

Update: 2018-08-13 18:40 GMT

ಕಳಸ,ಆ.13: ಕಳಸ ಹೋಬಳಿಯಾದ್ಯಂತ ಮುಂದುವರೆದ ಮಳೆಯಿಂದ ಕಳಸ ಸಮೀಪದ ಹಳುವಳ್ಳಿಯ ತಾರಿಕೊಂಡ ಎಂಬಲ್ಲಿ ಬೃಹತ್ ಗಾತ್ರದ ಗುಡ್ಡ ಕುಸಿದಿದ್ದು, ಎರಡು ಕುಟುಂಬಗಳು ಸಂಕಷ್ಟದಲ್ಲಿವೆ.

ಇಲ್ಲಿಯ ಕಳಸ ಗ್ರಾಮ ಪಂ. ವ್ಯಾಪ್ತಿಯ ಮಾವಿನಕೆರೆ ಗ್ರಾಮ ವ್ಯಾಪ್ತಿಯ ತಾರಿಕೊಂಡದಲ್ಲಿ ಭಾನುವಾರ ರಾತ್ರಿ ಗುಡ್ಡವೊಂದು ಜರಿದು ಬಿದ್ದಿದೆ. ಗುಡ್ಡದ ಜೊತೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಈ ಗುಡ್ಡದ ಕೆಲಭಾಗದಲ್ಲಿರುವ ಪ್ರಕಾಶ ಎಂಬವರ ಮನೆಗೆ ಹಾನಿಯಾಗಿದ್ದು, ಮನೆಯಲ್ಲಿ ವಾಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿ, ಕುಟುಂಬಸ್ಥರು ಮನೆ ತೊರೆದು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದಕ್ಕೆ ಹೊಂದಿಕೊಂಡಂತೆ ಶೇಷ ಎಂಬುವವರ ಮನೆಯ ಮೇಲೂ ಗುಡ್ಡ ಜರಿದು ಬೀಳುತ್ತಿದ್ದು, ಆತಂಕದಲ್ಲಿ ವಾಸ ಮಾಡುತ್ತಿದ್ದಾರೆ. ಹಲವಾರು ಕಾಫಿ, ಅಡಿಕೆ ಮರಗಳು ನೆಲಕಚ್ಚಿದ್ದು ಲಕ್ಷಾಂತರ ರೂ. ಹಾನಿಯಾಗಿದೆ. ಇದೇ ಗ್ರಾಮದ ಗಂಗಾದರ ಶೆಟ್ಟಿ ಎಂಬುವವರ ಮನೆಯ ಹಿಂದೆ ಗುಡ್ಡ ಜರಿದು ಬಿದ್ದು, ಮನೆಯ ಒಂದು ಭಾಗ ಜಖಂ ಗೊಂಡಿದೆ.

ಸುರಿಯುತ್ತಿರುವ ಮಳೆಯಿಂದ ಭಾನುವಾರದ ರಾತ್ರಿ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮುಳುಗಿ ಕೆಲ ಕಾಲ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತ್ತು. ಸೋಮವಾರವೂ ಮಳೆಯ ಅಬ್ಬರ ಮುಂದುರೆದು ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಆಸು-ಪಾಸು ಸಂಪೂರ್ಣ ಜಲಾವೃತಗೊಂಡು ಸಾಕಷ್ಟು ಕೃಷಿ ಭೂಮಿಗಳು ನೀರು ಪಾಲಾಗಿದೆ. ಗುಡ್ಡ ಪ್ರದೇಶ ಮತ್ತು ನದಿ ಅಂಚಿನಲ್ಲಿ ವಾಸ ಮಾಡುವ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಹೋಬಳಿಯ ಬಹುತೇಕ ಕಡೆ ವಿದ್ಯುತ್ ನಿಲುಗಡೆಯಾಗಿದ್ದು, ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News