ಅತೀವೃಷ್ಟಿ ಹಾನಿಗೆ ವಿಶೇಷ ಅನುದಾನ ಬಿಡುಗಡೆಗೆ ಸಿಎಂಗೆ ಮನವಿ: ಸಚಿವ ಕೆ.ಜೆ.ಜಾರ್ಜ್

Update: 2018-08-14 18:34 GMT

ಚಿಕ್ಕಮಗಳೂರು, ಆ.14: ಮಳೆಹಾನಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ತಾವು ಮತ್ತು ಜಿಲ್ಲೆಯ ಐದು ಶಾಸಕರು ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ, ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸೋಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಮಳೆಯಿಂದ ಮಲೆನಾಡು ಭಾಗದಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಸಿ.ಟಿ.ರವಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಶೇ. 40ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ, ಜೀವಹಾನಿಯಾಗಿದೆ. ಬಯಲು ಸೀಮೆ ಭಾಗದಲ್ಲಿ ಬೆಳೆನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಆದ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಸಚಿವ ಕೆ.ಜೆ. ಜಾರ್ಜ್‍ರವರ ಗಮನ ಸೆಳೆದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಮಾತನಾಡಿ, ಜಿಲ್ಲೆಯ ಎಲ್ಲಾ ಸರಕಾರಿ ಇಲಾಖೆಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂಧಿಗಳ ಕೊರತೆ ಇದೆ. ಸಂಬಂಧಪಟ್ಟ ಇಲಾಖೆಯಿಂದ ದಾಖಲೆ ತಗೆದುಕೊಳ್ಳಲು ಆಗುತ್ತಿಲ್ಲ ಮತ್ತು ಅಭಿವೃದ್ಧಿ ಕೆಲಸಗಳಿಗೂ ತೊಡಕಾಗುತ್ತಿದೆ. ದಾಖಲೆಗಳಿಲ್ಲದೆ ಕೆಡಿಪಿ ಸಭೆಗೆ ಹೋದ ಪುಟ್ಟ ಬಂದ ಪುಟ್ಟ ಎಂಬುವಂತಾಗಿದೆ. ಖಾಲಿ ಇವರು ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು. ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಹುದ್ಧೆಗಳ ಭರ್ತಿಗೆ ಮುಖ್ಯಮಂತ್ರಿ ಮಟ್ಟದಲ್ಲಿ ಸಭೆ ನಡೆಯಬೇಕು. ಜಿಲ್ಲೆಯಲ್ಲಿ ತುರ್ತಾಗಿ ಬೇಕಾಗುವ ಹುದ್ಧೆಗಳ ಭರ್ತಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಫಾರಂ. ನಂ. 50, 53ರಡಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ತಗಾದೆ ತೆಗೆಯುತ್ತಾರೆ. ಬಡವರು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕು ಎಂದ ಶಾಸಕ ಟಿ.ಡಿ.ರಾಜೇಗೌಡ, ಅಧಿಕಾರಿಗಳು ಪುಸ್ತಕ ನೋಡಿ ಕೆಲಸ ಮಾಡಿದರೆ ಆಗುವುದಿಲ್ಲ. ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.

ಶಾಸಕ ಸಿ.ಟಿ ರವಿ ಮಾತನಾಡಿ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಮಾಡದೆ ಈ ಸಮಸ್ಯೆ ಪರಿಹಾರವಾಗುವುದಿಲ್ಲ. ತಕ್ಷಣವೇ ಜಂಟಿ ಸರ್ವೇ ನಡೆಯಬೇಕು ಎಂದ ಅವರು, 94ಸಿ, 94ಸಿಸಿ ಯಡಿಯಲ್ಲಿ ಗೋಮಾಳ ಮತ್ತು ಸಿಎನ್‍ಡಿ ಸೇರಿದ ಜಾಗ ನೀಡದಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದರಿಂದ ಫಲಾನುಭವಿಗಳಿಗೆ ಜಾಗ ನೀಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಮುಂದಿನ ಐದು ತಿಂಗಳಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು. ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ತಾಲೂಕಿನ ಎಮ್ಮೆದೊಡ್ಡಿ ಅಮೃತ್ ಮಹಲ್ ಜಮೀನ್‍ನಲ್ಲಿ ಅನೇಕ ರೈತರು ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಸಾಗುವಳಿ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅಧಿಕಾರಿಗಳು ತಡೆಯುತ್ತಾರೆ ಎಂದು ದೂರಿದ ಅವರು, ಪಶುಸಂಗೋಪನೆ ಇಲಾಖೆಯಿಂದ ತೆರವುಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. 

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ತಮ್ಮ ತಂದೆಯ ಕಾಲದಿಂದಲೂ ಆ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಹೋರಾಟ ನಡೆಯುತ್ತಿದೆ. ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಆ ಭಾಗಕ್ಕೆ ಮೂಲಭೂತ ಸೌಲಭ್ಯ ನೀಡಿ ಅಭಿವೃದ್ಧಿ ಪಡಿಸಲಾಗಿತ್ತು. ಅಜ್ಜಂಪುರದಲ್ಲಿರುವ ಅಮೃತ್ ಕಾವಲ್ ತಳಿ ಸಂವದ್ಧನ ಕೇಂದ್ರದಲ್ಲಿ ಮೂಕ ಪ್ರಾಣಿಗಳ ರೋಧನ ಕೇಳುವವರು ಇಲ್ಲದಂತಾಗಿದೆ. ಎಮ್ಮೆದೊಡ್ಡಿಯಲ್ಲಿರುವ ಅಮೃತ್ ಮಹಲ್ ತಳಿ ಸಂವರ್ಧನ ಕೇಂದ್ರ ಹೆಸರಿಗೆ ಮಾತ್ರ. ಪಶುಸಂಗೋಪನ ಇಲಾಖೆಯಿಂದ ತೆರವುಗೊಳಿಸಿ ಆ ಭಾಗದ ಸಾಗುವಳಿ ದಾರರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಎಮ್ಮೆದೊಡ್ಡಿ ಅಮೃತ್ ಮಹಲ್ 21 ಸಾವಿರ ಎಕರೆ ಪ್ರದೇಶ ನೋಟಿಫೀಕೆಶನ್ ಆಗಿದೆ. 7ಸಾವಿರ ಎಕರೆ ಕಂದಾಯ, 7ಸಾವಿರ ಎಕರೆ ಅರಣ್ಯ ಮತ್ತು 7ಸಾವಿರ ಎಕರೆ ಪಶುಸಂಗೋಪನ ಇಲಾಖೆಗೆ ಜಂಟಿ ಸರ್ವೇಯಲ್ಲಿ ಗುರುತು ಮಾಡಲಾಗಿದೆ ಎಂದ ಅವರು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಹುಬ್ಬಳ್ಳಿ ಅಂಕೋಲ ರೈಲ್ವೇ ಹಳಿ ನಿರ್ಮಾಣದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಅದಕ್ಕೆ ಪರ್ಯಾಯವಾಗಿ ಕುದುರೆಮುಖ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಳಸ ಇನಾಂ ಭೂಮಿ ತೆರವು ಮತ್ತು ಮಸಗಲಿ ರಕ್ಷಿತರಣ್ಯ ನಿರಾಶ್ರಿತರಿಗೆ ಜಾಗ ನೀಡಲು ಜಾಗ ಇಲ್ಲದಂತಾಗಿದೆ. ನಮ್ಮಗೆ ಭೂಮಿಯ ಅಗತ್ಯವಿದೆ. ಕುದುರೆಮುಖ ಅರಣ್ಯ ಇಲಾಖೆಗೆ ನೀಡಿದ್ದೇಕೆ ಎಂದು ಪ್ರಶ್ನಿಸಿದರು. 

ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಇದು ತಮ್ಮ ಗಮನಕ್ಕೂ ಬಾರದೆ ಸರ್ಕಾರದ ಮಟ್ಟದಲ್ಲಿ ಆಗಿದೆ ಎಂದು ತಿಳಿಸಿದರು. ಶಾಸಕ ಸಿ.ಟಿ.ರವಿ ಮಾತನಾಡಿ, ಕುದುರೆಮುಖ ಟೌನ್‍ಶೀಫ್ ಅಭಿವೃದ್ಧಿಗೆ ಸರ್ಕಾರ ಕೋಟ್ಯಾಂತರ ರೂ. ಖರ್ಚು ಮಾಡಿದ್ದು ಅದು ಹಾಳಾಗುತ್ತದೆ. ಅದರ ಬದಲು ಜೈವಿಕ ಸಂಶೋಧನ ಕೇಂದ್ರ ಅಥವಾ ಅರಣ್ಯ ತರಬೇತಿ ಕೇಂದ್ರ ತೆರೆಯಲು ಚಿಂತನೆ ನಡೆಸುವಂತೆ ತಿಳಿಸಿದರು. ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಕೆ.ಜೆ. ಜಾರ್ಜ್ ತಿಳಿಸಿದರು.

ಕರಗಡ ಕುಡಿಯುವ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ ಎಂದು ಸರಕಾರ ತಮಗೆ ನೀಡಿರುವ ಪತ್ರದಲ್ಲಿ ತಿಳಿಸಲಾಗಿದೆ. 2ನೇ ಹಂತದ ಕಾಮಗಾರಿಗೆ  16 ಕೋಟಿ ರೂ. ಪ್ರಸ್ತಾವ ಸಲ್ಲಿಸಲಾಗಿದೆ. ಕಾಮಗಾರಿಯಲ್ಲಿ ಕಳಪೆಯಾಗಿದೆ. ಸಮಗ್ರ ತನಿಖೆ ಆದೇಶಿಸುವಂತೆ ತಾಲೂಕು ಪಂಚಾಯತ್ ನಿರ್ಣಯ ತಗೆದುಕೊಳ್ಳಲಾಗಿದೆ. ನೀರು ಹರಿಯದ ಕಾಲುವೆ ವರ್ಕ್‍ಶೀಫ್ ನೀಡುವುದರಿಂದ ಗುತ್ತಿಗೆದಾರನಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ಮೊದಲ ಹಂತದ ಕೆಲಸವೇ ಮುಗಿಯದಿದಿದ್ದರೂ ಮುಗಿದಿದೆ ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ. ಕಾಮಗಾರಿಯ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಸಣ್ಣ ನೀರಾವರಿ ಇಲಾಖೆ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪತ್ರ ಬರೆಯೋಣ, ಆಗ ಸರಕಾರದ ಮಟ್ಟದಲ್ಲಿ ತನಿಖೆ ನಡೆಸಲು ಅವಕಾಶ ಆಗುತ್ತದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. 

ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಆನಂದಪ್ಪ, ಕೃಷಿ ಮತ್ತು ಸೆಣ್ಣ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಪಿ. ಮಹೇಂದ್ರ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಸೇರಿದಂತೆ ಅನೇಕರು ಇದ್ದರು.

ಸಭೆಯಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡುವ ಸಂದರ್ಭದಲ್ಲಿ ಜಿಲ್ಲೆಗೆ ಇದುವರೆಗೂ ಪ್ರಾಮಾಣಿಕ ಅಧಿಕಾರಿಗಳು ಮತ್ತು ಮಂತ್ರಿಗಳು ಬಂದಿಲ್ಲ ಎಂದಾಗ ಟಿ.ಡಿ.ರಾಜೇಗೌಡ, ಎಸ್.ಎಲ್. ಧಮೇಗೌಡ ವಿರೋಧ ವ್ಯಕ್ತಪಡಿಸಿದರು. ಎಂ.ಪಿ. ಕುಮಾರಸ್ವಾಮಿ ಮುಂದುವರೆದು ಮಾತನಾಡಿ, ಜಿಲ್ಲೆಯವರೇ ಆದ ಟಿ.ಡಿ.ರಾಜೇಗೌಡ ಅಥವಾ ಧರ್ಮೇಗೌಡರವರನ್ನು ಮಂತ್ರಿಯಾಗಿ ಮಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು ಎಂದರು. ಆಗ ಇಡೀ ಸಭೆಯೇ ನಗೆಗಡಲಿನಲ್ಲಿ ತೇಲಿತು. 

ಸಭೆಯ ವೇಳೆ ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, ಚಂದ್ರಗ್ರಹಣ ದೋಷದಿಂದ ತೊಂದರೆಯಾಗುತ್ತದೆ ಎಂದು ಮನೆ ಖಾಲಿ ಮಾಡಿದ ಹಾವುಗೊಲ್ಲ ಕುಟುಂಬಗಳಿಗೆ ನಾಗಲಾಪುರ ಸವೇ ನಂ. 189ರಲ್ಲಿ ಜಾಗ ಗುರುತಿಸಲಾಗಿದೆ. ಈ ಜಾಗ ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದಾಗ, ಸಭೆಯಲ್ಲಿದ್ದ ಡಿಎಫ್‍ಓ ಮಾತನಾಡಿ, ಈ ಜಾಗವು ಕಿರು ಶ್ರೀಗಂಧ ಅರಣ್ಯ ಪ್ರದೇಶಕ್ಕೆ ಸೇರಿದೆ, ಇದನ್ನು ನಿವೇಶನಕ್ಕೆ ನೀಡಲು ಅರಣ್ಯ ಇಲಾಖೆ ತೀರ್ಮಾನಿಸಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News