ಸುಭದ್ರ ಭಾರತದ ಸುಂದರ ಭವಿಷ್ಯ ನಿರ್ಮಾಣವೇ ಎಸ್ಸೆಸ್ಸೆಫ್ ಗುರಿ: ಸುಫಿಯಾನ್ ಸಖಾಫಿ

Update: 2018-08-14 18:41 GMT

ಕೊಪ್ಪ, ಆ.14: ಸುಭದ್ರ ಭಾರತದ ಸುಂದರ ಭವಿಷ್ಯ ನಿರ್ಮಾಣವೇ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್) ಮುಖ್ಯ ಉದ್ದೇಶ ಎಂದು ರಾಜ್ಯ ಕಾರ್ಯದರ್ಶಿ ಸುಫಿಯಾನ್ ಸಖಾಫಿ ಅಭಿಪ್ರಾಯಪಟ್ಟರು.

72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್ಸೆಸ್ಸೆಫ್ ವತಿಯಿಂದ ಕೊಪ್ಪದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಆಜಾದಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಅಖಂಡತೆ, ಸಮಗ್ರತೆ, ಸೌಹಾರ್ದ ತೆ ಕಾಪಾಡಲು ಎಸ್ಸೆಸ್ಸೆಫ್ ನಿರಂತರ ಶ್ರಮಿಸುತ್ತದೆ. ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಪಾಕಿಸ್ತಾನ ಭಾರತದ ಭೂಮಿಯನ್ನು ಕಬಳಿಸಲು ಬಂದಾಗ ಎಸ್ಸೆಸ್ಸೆಫ್ ವಿರೋಧವಾಗಿ ನಿಂತಿದೆ. ಅಗತ್ಯ ಬಿದ್ದಾಗ ದೇಶದ ಪರವಾಗಿ ಸೈನಿಕರಂತೆ ಹೋರಾಟ ನಡೆಸುತ್ತದೆ. ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಂಘಟನೆ ಸಿದ್ಧವಿದೆ ಎಂದ ಅವರು, ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲಾ ಮಸೀದಿ, ಮದರಸಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು ಎಂದರು.

ವೇದಿಕೆಯಲ್ಲಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಮುಸ್ತಾಫ ನಯೀಮಿ, ಜಿಲ್ಲಾಧ್ಯಕ್ಷ ಸೈಯದ್ ಹಮೀಮ್ ತಂಙಳ್, ಜಿಲ್ಲಾ ಕಾರ್ಯದರ್ಶಿ ಸಫ್ವಾನ್ ಸಖಾಫಿ, ಸಹಕಾರ ಸಾರಿಗೆ ಅಧ್ಯಕ್ಷ ಈ.ಎಸ್. ಧರ್ಮಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ. ರವಿಕಾಂತ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್ ಜೈನ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ಬಿ.ಎಚ್. ದಿವಾಕರ್ ಭಟ್, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಾನ್ಸಿಸ್ ಕಾರ್ಡೋಜ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಎಸ್ಸೆಸ್ಸೆಫ್ ಕಾರ್ಯಕರ್ತರಿಂದ ತ್ರಿವರ್ಣ ಧ್ವಜದೊಂದಿಗೆ ಆಜಾದ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ವಲಯಗಳಿಂದ ಆಗಮಿಸಿದ್ದ ಸಂಘಟನೆಯ ನೂರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News