ಅಸ್ಸಾಂ ನಾಗರಿಕ ಪಟ್ಟಿಯಿಂದ 25 ಲಕ್ಷ ಹಿಂದೂಗಳನ್ನು ಕೈಬಿಡಲಾಗಿದೆ: ಮಮತಾ ಬ್ಯಾನರ್ಜಿ

Update: 2018-08-14 18:42 GMT

ಕೊಲ್ಕತ್ತಾ, ಆ.14: ಅಸ್ಸಾಂ ನಾಗರಿಕ ನೋಂದಣಿ ಪಟ್ಟಿ ಕುರಿತಂತೆ ಕೇಂದ್ರ ಸರಕಾರವನ್ನು ತರಾಟೆಗೆ ಗೆಗೆದುಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಪಟ್ಟಿಯಿಂದ 25 ಲಕ್ಷ ಹಿಂದೂಗಳು ಮತ್ತು 13 ಲಕ್ಷ ಮುಸ್ಲಿಮರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ. ದೇಶದ ಇತರ ರಾಜ್ಯಗಳಲ್ಲಿರುವ ಅಕ್ರಮ ವಲಸಿಗರನ್ನು ಗುರುತಿಸಲು ಕೂಡಾ ಅಸ್ಸಾಂ ಮಾದರಿಯನ್ನೇ ಅನುಸರಿಸಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲೂ ಬ್ಯಾನರ್ಜಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಪ್ರತಿ ರಾಜ್ಯದಲ್ಲೂ ಇತರ ರಾಜ್ಯಗಳ ಜನರು ಇದ್ದಾರೆ ಎಂಬುದರತ್ತ ಬೆಟ್ಟು ಮಾಡಿದ ಬ್ಯಾನರ್ಜಿ, ಅಸ್ಸಾಂನ ಮೂರು ಕೋಟಿ ಜನರ ಪೈಕಿ 40 ಲಕ್ಷ ಮಂದಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದೇ ಮಾದರಿಯನ್ನು ಇತರ ರಾಜ್ಯಗಳಿಗೂ ಅನ್ವಯಿಸಿದರೆ ಸರಿಯಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಹಳಷ್ಟು ಮಂದಿ ಬೆಂಗಾಳಿಗಳು ಮತ್ತು ಬಿಹಾರಿಗಳಿದ್ದಾರೆ. ಬಂಗಾಳದಲ್ಲಿ ಸಾಕಷ್ಟು ಮಂದಿ ಬಿಹಾರಿಗಳು ಮತ್ತು ಮಾರ್ವಾಡಿಗಳಿದ್ದಾರೆ. ಈ ಆಟವನ್ನು ಆ ರಾಜ್ಯಗಳಲ್ಲಿ ಆಡಿದರೆ ಸರಿಯಾಗವಹುದೇ? ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಅಸ್ಸಾಂನಲ್ಲಿ ನೋಂದಣಿ ಪಟ್ಟಿಯಿಂದ ಕೈಬಿಡಲಾದ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಅವರ ಮೇಲೆ ಬಿಜೆಪಿ ದೌರ್ಜನ್ಯವೆಸಗುತ್ತಿದೆ. ಈ ಕುರಿತು ನಾನು ಅಲ್ಲಿನ ಜನರ ಜೊತೆ ಮಾತನಾಡುವ ವೇಳೆ ತಿಳಿದುಕೊಂಡಿದ್ದೇನೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News