ಕೊಪ್ಪ: ಮುಂದುವರೆದ ಧಾರಾಕಾರ ಮಳೆ; ತಾಲೂಕಿನ ವಿವಿಧೆಡೆ ಹಾನಿ

Update: 2018-08-14 18:42 GMT

ಕೊಪ್ಪ, ಆ.14: ಕಳೆದ ಎರಡು ಮೂರು ದಿನಗಳಿಂದ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಸುರಿದ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಹಾನಿ ಉಂಟಾಗಿದೆ.

ಹರಿಹರಪು ಹೋಬಳಿಯ ಹರಿಹರಪುರದ ಶೃಂಗೇರಿ ರಸ್ತೆಯಲ್ಲಿರುವ ಕೃಷ್ಣಮೂರ್ತಿ ಎಂಬವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ. ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆಯ ಹೊತ್ತಿಗೆ ಗೋಡೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ ಕೃಷ್ಣಮೂರ್ತಿ ಮತ್ತು ಅವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ಯಾನುವಳ್ಳಿಯ ಕೊಲ್ಲಮ್ಮ ಎಂಬವರ ವಾಸದ ಮನೆಯ ಗೋಡೆ ಕುಸಿದಿದೆ. ಅದೇ ರೀತಿ ಕಾರಗದ್ದೆ ಸಮೀಪದ ಕೋಡೂರು ನಿವಾಸಿ ಲಕ್ಷ್ಮಣಪೂಜಾರಿ ಎಂಬವರ ವಾಸದ ಮನೆಯ ಗೋಡೆ ಜರಿದು ಬಿದ್ದು ಹಾನಿಯಾಗಿದೆ.

ತುಂಗಾನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನಾರ್ವೆ, ನಾಗಲಾಪುರದಲ್ಲಿ ಭತ್ತದ ಗದ್ದೆಗೆ ನೀರು ನುಗ್ಗಿ ಜಲಾವೃತವಾಗಿದೆ. ಹರಿಹರಪುರ-ಭಂಡಿಗಡಿ ರಸ್ತೆಯ ಕಾರಂಗಿ ಬಳಿ ತುಂಗಾ ನದಿ ನೀರು ರಸ್ತೆಗೆ ನುಗ್ಗಿ ಸ್ವಲ್ಪ ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್. ರಾಮಸ್ವಾಮಿ, ರಾಜಸ್ವ ನಿರೀಕ್ಷಕ ಇಫ್ತಿಖಾರ್, ಗ್ರಾಮ ಲೆಕ್ಕಿಗ ಸಂದೀಪ್, ರಮೇಶ್ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಸಬಾ ಹೋಬಳಿಯ ಕಾಚಗಲ್‍ನಲ್ಲಿ ಕೃಷ್ಣಪ್ಪ ಎಂಬವರ ವಾಸದ ಮನೆಯ ಅಡಿಗೆ ಕೋಣೆಯ ಗೋಡೆ ಕುಸಿದು ಹಾನಿಯಾಗಿದೆ. ಭಾರತ್ ರೈಸ್ ಮಿಲ್ ಸಮೀಪ ನೇತಾಜಿನಗರದ ನಂದಿನಿ ಎಂಬವರ ವಾಸದ ಮನೆಯಲ್ಲಿ ಅಡಿಗೆ ಕೋಣೆಯ ಗೋಡೆ ಹಾಗೂ ಹಿಂಬಾಗದ ಗೋಡೆ ಕುಸಿದು ಹಾನಿಯಾಗಿದೆ. ಕುದುರೆಗುಂಡಿ ಬಳಿ ಕಪಿಲಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕುದುರೆಗುಂಡಿ-ಕಾನೂರು ರಸ್ತೆ ಸಂಚಾರ ಬಂದ್ ಆಗಿದೆ. ನುಗ್ಗಿ ಪಂಚಾಯತ್ ವ್ಯಾಪ್ತಿಯ ಹೊಸೂರಿನಲ್ಲಿ ಭತ್ತದ ಗದ್ದೆಗೆ ಹಳ್ಳದ ನೀರು ನುಗ್ಗಿ ಜಲಾವೃತಗೊಂಡಿದೆ ಭತ್ತದ ಸಸಿಗಳು ಸಂಪೂರ್ಣ ಮುಳುಗಿಹೋಗಿವೆ.

ಹಾನಿಯಾದ ಪ್ರದೇಶಗಳಿಗೆ ರಾಜಸ್ವ ನಿರೀಕ್ಷಕ ಸತೀಶ್, ಗ್ರಾಮ ಲೆಕ್ಕಿಗರಾದ ಸೀತಾರಾಮ್, ಮಂಜುನಾಥ್ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಯಪುರ ಹೋಬಳಿಯ ಹುಲಿಗರಡಿ ಗ್ರಾಮದ ಹರಗೋಡು ವಾಸಿ ಶ್ರೀಮತಿ ಎಂಬವರ ವಾಸದ ಮನೆಗೆ ಪೂರ್ಣ ಪ್ರಮಾಣದ ಹಾನಿಯಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಸ್ಪೋಟದ ಸದ್ದು ಕೇಳಿಬರುತ್ತಿದ್ದ ಕೊಗ್ರೆ ಸಮೀಪದ ಅಬ್ಬಿಕಲ್ಲಿಗೆ ಸೋಮವಾರ ತಹಶೀಲ್ದಾರ್ ಟಿ.ಎಸ್. ತನುಜ ಸವದತ್ತಿ, ಉಪತಹಶೀಲ್ದಾರ್ ರಾಮಣ್ಣ, ರಾಜಸ್ವ ನಿರೀಕ್ಷಕ ನಾಗರಾಜ್, ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣ ಕೇಂದ್ರದ(ಕೆಎಸ್‍ಎನ್‍ಎಂಡಿಎಂಸಿ) ವಿಜ್ಞಾನಿ ದಯಾನಂದ್ ಮುಂತಾದವರು ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಸ್ಪೋಟದ ಕುರಿತು ಸಂಶೋಧನೆ ನಡೆಸಲು ಮಂಗಳವಾರ ವಿಜ್ಞಾನಿಗಳ ತಂಡ ವೈಜ್ಞಾನಿಕ ಪರಿಕರಗಳೊಂದಿಗೆ ಆಗಮಿಸಲಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ  ಮತ್ತು ತಾಲೂಕು ಪಂಚಾಯತ್ ಸದಸ್ಯೆ ಭವಾನಿ ಹೆಬ್ಬಾರ್ ಸೋಮವಾರ ಅಬ್ಬಿಕಲ್ಲಿಗೆ ಭೇಟಿ ನೀಡಿದರು. ಈ ಸಂದರ್ಭ ಗ್ರಾಮಸ್ಥರು ಸ್ಪೋಟದ ಸಂದರ್ಭದಲ್ಲಿ ತಮಗಾದ ಅನುಭವವನ್ನು ಅಧ್ಯಕ್ಷರ ಜೊತೆ ಹಂಚಿಕೊಂಡರು. ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದ್ದು ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬ ಆತಂಕ ಉಂಟಾಗಿದೆ. ಸ್ಪೋಟದ ಬಗ್ಗೆ ಸೂಕ್ತ ಸಂಶೋಧನೆ ನಡೆಸಿ ಗ್ರಾಮಸ್ಥರ ಆತಂಕ ನಿವಾರಣೆ ಮಾಡುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News