ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್: ಬುಮ್ರಾ, ಅಶ್ವಿನ್ ಸಂಪೂರ್ಣ ಫಿಟ್

Update: 2018-08-14 18:45 GMT

ಲಂಡನ್, ಆ.14: ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ಶನಿವಾರ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಟೀಮ್ ಇಂಡಿಯಾಕ್ಕೆ ಲಭ್ಯವಿರಲಿದ್ದಾರೆ. ಬುಮ್ರಾ ಸಂಪೂರ್ಣ ಫಿಟ್‌ನೆಸ್ ಪಡೆದಿರುವುದು ಕೊಹ್ಲಿ ಪಡೆಗೆ ಹೊಸ ಹುಮ್ಮಸ್ಸು ನೀಡಿದೆ.

ಜೂನ್‌ನಲ್ಲಿ ಡಬ್ಲಿನ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಬುಮ್ರಾ ಎಡಗೈಗೆ ಗಾಯವಾಗಿತ್ತು. ಆ ನಂತರ ಅವರು ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಆಡಿರಲಿಲ್ಲ. ಬಲಹೆಬ್ಬೆರಳು ಮುರಿತಕ್ಕೊಳಗಾದ ಕಾರಣ ಇಂಗ್ಲೆಂಡ್ ವಿರುದ್ಧದ ಈಗಾಗಲೇ ನಡೆದಿರುವ ಎರಡು ಟೆಸ್ಟ್ ಪಂದ್ಯಗಳಿಂದಲೂ ಹೊರಗುಳಿದಿದ್ದರು.

 ಬುಮ್ರಾ ಜು.4 ರಂದು ಲೀಡ್ಸ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಭಾರತದಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದರು. ಬುಮ್ರಾಗೆ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ಕರೆ ನೀಡಲಾಗಿತ್ತು. ಬುಮ್ರಾ ಮೂರನೇ ಪಂದ್ಯದಲ್ಲಿ ಆಡುವ ಬಳಗಕ್ಕೆ ಆಯ್ಕೆಯಾಗುತ್ತಾರೆಯೇ? ಎಂದು ಕಾದು ನೋಡಬೇಕಾಗಿದೆ. ಮತ್ತೊಂದೆಡೆ ಆರ್.ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ಫಿಟ್ ಇದ್ದಾರೆಂದು ಘೋಷಿಸಲಾಗಿದೆ. ಅಶ್ವಿನ್ ಹಾಗೂ ಪಾಂಡ್ಯಗೆ ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಬೌಲಿಂಗ್ ಮಾಡುವ ಕೈಗೆ ಗಾಯವಾಗಿತ್ತು. ಮೂರನೇ ಟೆಸ್ಟ್‌ಗೆ ಕೊಹ್ಲಿ ಫಿಟ್: ಇದೇ ವೇಳೆ ನಾಯಕ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್‌ಗೆ ಸಂಪೂರ್ಣ ಫಿಟ್‌ನೆಸ್ ಪಡೆದು ಆಡಲಿದ್ದಾರೆ. ತಾನು ಸಂಪೂರ್ಣ ಫಿಟ್ ಆಗಿದ್ದು 100 ಶೇ.ಸಾಮರ್ಥ್ಯದಿಂದ ವಿಕೆಟ್ ನಡುವೆ ಓಡಬಲ್ಲೆ ಎಂದು ಕೊಹ್ಲಿ ಹೇಳಿದ್ದಾರೆ. ಮಂಗಳವಾರ ಟೀಮ್ ಇಂಡಿಯಾದ ಎಲ್ಲ ಸದಸ್ಯರಿಗೂ ಜಿಮ್ ಮಾಡಲು ಅವಕಾಶ ನೀಡಲಾಗಿತ್ತು. ನಾಯಕ ಕೊಹ್ಲಿ ಸಹಿತ ಎಲ್ಲರೂ ಜಿಮ್‌ನಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News