ಕಾಸರಗೋಡು ಸೇರಿದಂತೆ ಕೇರಳದ 12 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

Update: 2018-08-15 08:49 GMT

ತಿರುವನಂತಪುರ, ಆ.15: ಕೇರಳ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆ  ಅಪಾರ ಹಾನಿಯನ್ನುಂಟು ಮಾಡಿದ್ದು, ಮಳೆಯ ಅವಾಂತರ ನಿಂತಿಲ್ಲ. ಭಾರೀ ಮಳೆ ಇನ್ನೂ ಮುಂದುವರಿಯುವ ಸಾಧ್ಯತೆ ಕಂಡು ಬಂದೆ. ಕಾಸರಗೋಡು ಸೇರಿದಂತೆ  12 ಜಿಲ್ಲೆ ಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ವಯನಾಡ್, ಕೊಝಿಕ್ಕೋಡ್, ಕಣ್ಣೂರು, ಕಾಸರಗೋಡು, ಮಲಪ್ಪುರಂ, ಪಾಲಕ್ಕಾಡ್, ಇಡುಕ್ಕಿ, ಎರ್ನಾಕುಳಂ, ಅಲಪ್ಪುಝ, ತ್ರಿಶೂರ್, ಕೊಟ್ಟಾಯಂ, ಮತ್ತು ಪಟ್ಟಣಂತಿಟ್ಟ  ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೇರಳದಲ್ಲಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿದೆ. ಸತತ ಮಳೆಯ ಹಿನ್ನೆಲೆಯಲ್ಲಿ ಕೊಚ್ಚಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು  ಶನಿವಾರದ ತನಕ ಮುಚ್ಚಲಾಗಿದೆ.  ವಿಮಾನಗಳನ್ನು ರಾಜ್ಯದ  ಬೇರೆ ಬೇರೆ ನಿಲ್ದಾಣಗಳಿಗೆ  ಸ್ಥಳಾಂತರಿಸಲಾಗಿದೆ. ಮನ್ನಾರ್ ನಲ್ಲಿ ಕಳೆದ ಸಂಜೆ  ಹೋಟಲೊಂದರ ಮೇಲೆ ಗುಡ್ಡ ಕುಸಿದು  ತಮಿಳುನಾಡಿನ ವ್ಯಕ್ತಿಯೊಬ್ಬರು  ಮೃತಪಟ್ಟಿದ್ದಾರೆ.  6 ಮಂದಿಯನ್ನು ರಕ್ಷಿಸಲಾಗಿದೆ.

ಕೊಂಡೊಟ್ಟಿಯಲ್ಲಿ ಮಣ್ಣಿನ ಗುಡ್ಡ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮವಾಗಿ ಮನೆಯೊಳಗೆ ನಿದ್ರಿಸುತ್ತಿದ್ದ ಆರರ ಹರೆಯದ ಬಾಲಕ ಮತ್ತು ಆತನ ತಂದೆ , ತಾಯಿ ಮೃತಪಟ್ಟರು.  ತ್ರಿಶೂರ್ ನಲ್ಲಿ ವಿದ್ಯುತ್ ಆಘಾತದಿಂದ ಮೀನುಗಾರರೊಬ್ಬರು ಬಲಿಯಾಗಿದ್ದಾರೆ.

ಇದೇ ವೇಳೆ ಪಂಪಾ ನದಿಯಲ್ಲಿ ನೀರಿನ ಮಟ್ಟ ಏರಿರುವ ಹಿನ್ನೆಲೆಯಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸಿದಂತೆ ಟಿಡಿಬಿ ಮನವಿ ಮಾಡಿದೆ.  

 ಮುಲ್ಲಪೆರಿಯಾರ್  ನದಿ ನೀರಿನ ಮಟ್ಟ  ಏರಿದ್ದು,   ಪೆರಿಯಾರ್ ಡ್ಯಾಮ್ ನ ಗರಿಷ್ಠ ಮಟ್ಟ 142 ಅಡಿ. ನಿನ್ನೆ  ಮಲ್ಲಪೆರಿಯಾರ್ ಡ್ಯಾಮ್ ನ ನೀರಿನ ಮಟ್ಟ 137.4  ಅಡಿ  ಇತ್ತು. ಇಂದು ಬೆಳಗ್ಗಿನ ವೇಳೆ  ಪೆರಿಯಾರ್  ಡ್ಯಾಮ್ ನಲ್ಲಿ ನೀರಿನ ಮಟ್ಟ 142  ಅಡಿ ತಲುಪಿದೆ. ಈಗಾಗಲೇ  4489 ಕ್ಯೂಸೆಕ್ಸ್  ನೀರನ್ನು ಹರಿದು ಬಿಡಲಾಗಿದೆ ಎಂದು  ಅಧಿಕೃತ ಮೂಲಗಳು ತಿಳಿಸಿವೆ. 

ಪಂಪಾ ನದಿಯಲ್ಲಿ ಪ್ರವಾಹ ಏರಿದ ಕಾರಣದಿಂದಾಗಿ ಶಬರಿಮಲೆ ದೇವಸ್ಥಾನ ಮುಳುಗಡೆ ಭೀತಿಯನ್ನು ಎದುರಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News