ಸಂಕಷ್ಟದಲ್ಲಿರುವ ಕೊಡಗು ಜನತೆಯ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದನೆ: ಸಚಿವ ಸಾ.ರಾ.ಮಹೇಶ್ ಭರವಸೆ

Update: 2018-08-15 12:17 GMT

ಮಡಿಕೇರಿ, ಆ.15 : ಅತಿವೃಷ್ಟಿಯಿಂದಾಗಿ ಕೊಡಗಿನಲ್ಲಿ ಹಿಂದೆಂದಿಗಿಂತಲೂ ಅಧಿಕ ಹಾನಿ ಉಂಟಾಗಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಜಿಲ್ಲೆಯ ಜನರ ಸಮಸ್ಯೆಗಳಿಗೆ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣ ಸ್ಪಂದಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ಸಚಿವ ಸಾ.ರಾ. ಮಹೇಶ್ ಭರವಸೆ ನೀಡಿದ್ದಾರೆ.

ಸುರಿಯವ ಮಳೆಯ ನಡುವೆಯೇ ನಗರದ ಕೋಟೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು 72ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹನೀಯರ ಆದರ್ಶಗಳನ್ನು ಗೌರವಿಸಿ ಸಾಮರಸ್ಯದಿಂದ ಬಾಳ್ವೆ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಅತಿವೃಷ್ಟಿಯಿಂದ ನಲುಗಿರುವ ಕೊಡಗಿನ ಜನತೆ ದೃತಿಗೆಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸರಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದು, ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ಭರವಸೆ ನೀಡಿದರು. ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಸಂಸ್ಕೃತಿಗಳ ರಕ್ಷಣೆಗೆ ಕೈಜೋಡಿಸುವ ಪಣತೊಡಬೇಕೆಂದರು.

ಹೋರಾಟದ ಶತಮಾನದ ಇತಿಹಾಸ ಇಂದಿನ ಅಭಿವೃದ್ಧಿಗೆ ಮುನ್ನೋಟವಾಗಲಿ ಎಂದು ಆಶಿಸಿದ ಸಚಿವರು, ಭಿನ್ನ-ಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಮ್ಮ ಹಿರಿಯರ ಕನಸು ನನಸಾಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ನೀಡಲು ದೃಢ ಸಂಕಲ್ಪ ಮಾಡಲಾಗಿದೆ. ಸ್ವಾತಂತ್ರ್ಯದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಭೇದ ಭಾವವಿಲ್ಲದೆ ಒಟ್ಟಾಗಿ ಕೆಲಸ ಮಾಡಬೇಕೆಂದು ಸಾ.ರಾ.ಮಹೇಶ್ ಕರೆ ನೀಡಿದರು.

ಭಾರತೀಯ ರಾಷ್ಟ್ರೀಯ ಚಳುವಳಿಯು ದೇಶದ ಸ್ವಾತಂತ್ರ್ಯ ಹೋರಾಟದ ಮೈಲಿಗಲ್ಲಾಗಿದ್ದು, 1885ರಿಂದ 1905ರವರೆಎ ಭಾರತೀಯ ರಾಷ್ಟ್ರೀಯತೆಯು ದೇಶದ ಎಲ್ಲೆಡೆ ಮೊಳಗುತ್ತಿತ್ತು. ಆ ನಂತರ ಪ್ರಥಮ ಮಹಾಯುದ್ಧ ಹಾಗೂ ಪಾಶ್ಚಾತ್ಯ ಶಿಕ್ಷಣ ಪಡೆದ ಭಾರತೀಯರು ದೇಶವನ್ನು ಆಂಗ್ಲರ ಆಳ್ವಿಕೆಯಿಂದ ಮುಕ್ತಗೊಳಿಸಲು ಹೋರಾಟ ರೂಪಿಸಿದರು ಎಂದು ನೆನಪಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಇದೇ ಸಂದರ್ಭ ಸ್ಮರಿಸಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ, ದೇಶದ ರಕ್ಷಣೆಗಾಗಿ ದುಡಿದ ಕೊಡಗಿನ ಪ್ರಮುಖರನ್ನೂ ನೆನಪು ಮಾಡಿಕೊಂಡರಲ್ಲದೆ, ಈ ಎಲ್ಲಾ ಮಹನೀಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವೆಲ್ಲ ಒಂದಾಗಿ ನಡೆಯಬೇಕಿದೆ ಎಂದು ಹೇಳಿದರು.

ಸಾಧನ ವಿತರಣ:
ಇದೇ ಸಂದರ್ಭ ಸಚಿವರು ವಿಶೇಷ ಅಗತ್ಯತೆಯ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ಹಾಗೂ ಹಸಿರು ಕರ್ನಾಟಕ ಆಂದೋಲನದ ಪ್ರಯುಕ್ತ ಅರಣ್ಯ ಇಲಾಖೆಯಿಂದ ಸಸಿಗಳನ್ನು ವಿತರಿಸಿದರು. ಅಲ್ಲದೆ ಇದರ ನೆನಪಿಗಾಗಿ ಕೋಟೆ ಆವರಣದಲ್ಲಿ ಗಿಡವೊಂದನ್ನು ನೆಟ್ಟರು.

ಕಳೆದ ಸಾಲಿನ ದ್ವಿತೀಯ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸ್ವರೂಪ ಆರ್ (ವಿಜ್ಞಾನ), ಭಾವನಾ ಎಸ್.ಆರ್ (ಕಲೆ) ಗಗನ್(ವಾಣಿಜ್ಯ), ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವರಿಷ್ಮಾ ಕೆ.ಎಸ್, ಆಂಗ್ಲ ಮಾಧ್ಯಮದಲ್ಲಿ ಗ್ರೆಟೆಲ್ ಅನುಷಾ ಡಿಸೋಜಾ ಅವರುಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತಲ್ಲದೆ, ಸ್ಕೌಟ್, ಗೈಡ್ಸ್, ಬುಲ್‍ಬುಲ್‍ನಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪಥಸಂಚಲನ ರದ್ದು
ಸ್ವಾತಂತ್ರ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಮಳೆಯ ನಡುವೆಯೇ ಸಚಿವರು ಧ್ವಜಾರೋಹಣ ನೆರವೇರಿಸಿದರಲ್ಲದೆ, ಪೊಲೀಸ್ ತಂಡದಿಂದ ವಂದನೆ ಸ್ವೀಕರಿಸಿದರು. ಮಳೆಯ ಪರಿಣಾಮ ಪಥಸಂಚಲನವನ್ನು ರದ್ದುಗೊಳಿಸಲಾಯಿತಲ್ಲದೆ, ರೈತಗೀತೆಗೂ ಕತ್ತರಿ ಹಾಕಲಾಯಿತು. 

ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿಲ್ಲ
ಪೂರ್ವಾಹ್ನ ಕೋಟೆ ಆವರಣದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನಡೆಯಬೇಕಿದ್ದ ಹಾಗೂ ಸಂಜೆ ಮೈತ್ರಿ ಸಭಾಂಗಣದಲ್ಲಿ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಳೆಯ ಕಾರಣದಿಂದ ರದ್ದುಗೊಳಿಸಲಾಯಿತು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News