ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೇ ಪಿಸ್ತೂಲ್?

Update: 2018-08-15 13:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 15: ಪತ್ರಕರ್ತೆ ಗೌರಿ ಲಂಕೇಶ್, ಹಿರಿಯ ಸಂಶೋಧಕ ಡಾ. ಎಂ.ಎಂ.ಕಲ್ಬುರ್ಗಿ, ವಿಚಾರವಾದಿ ನರೇಂದ್ರ ದಾಬೋಲ್ಕರ್ ಸೇರಿದಂತೆ ಮೂವರ ಹತ್ಯೆಗೂ ಬಳಸಿದ್ದು ಒಂದೆ ಪಿಸ್ತೂಲ್ ಎಂಬ ಆಘಾತಕಾರಿ ಅಂಶವನ್ನು ಎಸ್‌ಐಟಿ(ಸಿಟ್) ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಮೂವರು ವಿಚಾರವಾದಿಗಳನ್ನು ಒಂದೆ ಪಿಸ್ತೂಲ್ನಿಂದ ಹತ್ಯೆ ಮಾಡಿದರೆ, ಚಿಂತಕ ಗೋವಿಂದ್ ಪನ್ಸಾರೆ ಅವರ ಹತ್ಯೆಗೆ ಬೇರೆ ಪಿಸ್ತೂಲ್ ಬಳಸಲಾಗಿದೆ ಎನ್ನುವ ಮಾಹಿತಿ ಎಸ್‌ಐಟಿ (ಸಿಟ್) ತನಿಖಾಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದೆ.

ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ವಿಚಾರಣೆಯಿಂದ ಸಂಶೋಧಕ ಡಾ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕೆಲ ಖಚಿತ ಮಾಹಿತಿಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ.

ಗುಂಡಿಕ್ಕಿದ್ದು ಅಮೋಲ್ ಕಾಳೆ: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಅವರನ್ನು ಧಾರವಾಡದಲ್ಲಿನ ಅವರ ನಿವಾಸದಲ್ಲೆ ಗುಂಡಿಕ್ಕಿ ಹತ್ಯೆ ಮಾಡಿದ್ದು, ಅಮೋಲ್ ಕಾಳೆ ಎಂಬ ಅಂಶವೂ ಬಯಲಿಗೆ ಬಂದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ವಿಚಾರವಾದಿಗಳ ಹತ್ಯೆ ಈತನೇ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ಡಾ.ಕಲ್ಬುರ್ಗಿ ಅವರ ವಿವಾದಾತ್ಮಕ ಹೇಳಿಕೆಯೇ ಅವರ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಕಲ್ಬುರ್ಗಿ ಅವರ ಮನೆ ಬಾಗಿಲು ತಟ್ಟಿದ ಅಮೋಲ್ ಕಾಳೆ, ಅವರು ಹೊರ ಬಂದ ಕೂಡಲೇ ಗುಂಡು ಹಾರಿಸಿದ್ದನು. ನಂತರ ಅಲ್ಲಿಂದ ಬೈಕ್ ಮುಖಾಂತರ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಕಲ್ಬುರ್ಗಿ ಅವರನ್ನು ಕೊಲ್ಲಲು ಕಾಕಾ ಎಂಬಾತನೇ ಹೇಳಿದ್ದ. ಆತನ ಆಜ್ಞೆಯಂತೆಯೇ ಅಮೋಲ್ ಕಾಳೆ ಗುಂಡಿಕ್ಕಿ ಕೊಲೆ ಮಾಡಿದ್ದ ಎಂದು ಹೇಳಲಾಗಿದೆ. ಆದರೆ, ಆತ ಆರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದು, ಆತನ ಬಲಗೈ ಬಂಟನೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಗೊತ್ತಾಗಿದೆ.

ಈಗಾಗಲೇ ಸಿಟ್ ತನಿಖಾಧಿಕಾರಿಗಳು ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ 12 ಮಂದಿಯನ್ನು ಬಂಧಿಸಿದ್ದು, ಆ ಪೈಕಿ ಅಮೋಲ್ ಕಾಳೆ, ರಾಮಚಂದ್ರ ಬದ್ದಿ, ಗಣೇಶ್ ಮಿಸ್ಕಿನ್ ಹಾಗೂ ತಲೆ ಮರೆಸಿಕೊಂಡಿರುವ ನಿಹಾಲ್ ಯಾನೆ ದಾದಾ ಪಾಲ್ಗೊಂಡಿದ್ದಾರೆಂದು ಗೊತ್ತಾಗಿದ್ದು, ಈ ಸಂಬಂಧ ಸಿಟ್ ತನಿಖಾಧಿಕಾರಿಗಳು ನೀಡಿರುವ ವರದಿಯನ್ನು ಆಧರಿಸಿ ಸಿಐಡಿ ತನಿಖೆ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳ ಒಟ್ಟು 12 ಪಿಸ್ತೂಲ್ ಗಳಿದ್ದು, ಒಂದನ್ನು ಕೊಲೆಗಾಗಿ ತೆಗೆದಿರಿಸಿದ್ದರು. ವಶಕ್ಕೆ ಪಡೆದಿರುವ ಪಿಸ್ತೂಲ್ಅನ್ನು ಗುಜರಾತ್‌ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗಾಗಿ ರವಾನಿಸಲಾಗಿದೆ ಎಂದು ಸಿಟ್ ಮೂಲಗಳು ತಿಳಿಸಿವೆ.

ಪತ್ರಕರ್ತೆ ಹತ್ಯೆಗೆ ಪತ್ರಕರ್ತನ ಕುಮ್ಮಕ್ಕು
‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪತ್ರಕರ್ತನೊಬ್ಬ ಕುಮ್ಮಕ್ಕು ನೀಡಿರುವ ಅಂಶ ತನಿಖೆಯಿಂದ ಗೊತ್ತಾಗಿದ್ದು, ಮಹಾರಾಷ್ಟ್ರ ಮೂಲದ ಸನಾತನ ಪ್ರಭಾಸ್ ಪತ್ರಿಕೆಯ ಶಶಿಕಾಂತ್ ರಾಣೆ ಹಂತಕರಿಗೆ ಬೆಂಬಲ ನೀಡಿದ್ದ. ಆದರೆ, ಆತ ಎಪ್ರಿಲ್ 5ರಂದೆ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News