ಅಧಿಕಾರ, ಸಂಪತ್ತು ಎಲ್ಲಾ ವರ್ಗದ ಜನರಲ್ಲೂ ಹಂಚಿಕೆ ಆಗಬೇಕು: ಸಚಿವ ಕೆ.ಜೆ.ಜಾರ್ಜ್

Update: 2018-08-15 13:03 GMT

ಚಿಕ್ಕಮಗಳೂರು, ಆ.15: ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಬುಧವಾರ ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 72ನೇ ಸ್ವಾತಂತ್ರ್ಯ ದಿನಾಚರಣೆ  ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ನಂತರ ಧ್ವಜವಂದನೆ ಸಲ್ಲಿಸಿ ಮಾತನಾಡಿದ ಅವರು, ಅನೇಕ ಮಹಾನ್ ವ್ಯಕ್ತಿಗಳ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಈ ದಿವಸ ಭಾರತದ ಇತಿಹಾಸದಲ್ಲಿ ನಾವು ಯಾರೂ ಮರೆಯಲಾಗದ ದಿನ ಎಂದು ಬಣ್ಣಿಸಿದರು.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು 18ನೇ ಆಗಸ್ಟ್ 1927ರಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಯುವಕರನ್ನು ಉದ್ದೇಶಿಸಿ ಸಂದೇಶ ನೀಡಿರುವುದು ಜಿಲ್ಲೆಯ ಜನತೆಗೆ ಹೆಮ್ಮೆ ತರುವಂತದ್ದು, ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಅಧಿಕಾರ, ಅವಕಾಶ ಮತ್ತು ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ  ಹಂಚಿಕೆ ಆಗಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ಉದ್ದೇಶ. ನಮ್ಮ ಸರ್ಕಾರದ ಧ್ಯೇಯವು ಇದೆ ಆಗಿದೆ. ಬಹು ಸಂಸ್ಕೃತಿ ಹೊಂದಿರುವ ನಮ್ಮ ದೇಶದಲ್ಲಿ ಏಕತೆಯನ್ನು ಸಂವಿಧಾನ ರೀತ್ಯಾ ರಕ್ಷಿಸಿಕೊಂಡು ಹೋಗುವ ಜವಬ್ದಾರಿ ನಮ್ಮ ಮೇಲಿದೆ ಎಂದರು. ಆಡಳಿತ ಸುಧಾರಣೆಯಲ್ಲಿ ರಾಜ್ಯವು ರಾಷ್ಟ್ರಕ್ಕೆ ಮಾದರಿಯಾಗಿದೆ. ಆಡಳಿದಲ್ಲಿ ತಂತ್ರಜ್ಞಾನ ಆಳವಡಿಕೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ಹತ್ತು ಸಾವಿರ ಸರ್ಕಾರಿ ಕಚೇರಿಗಳನ್ನು ಇ-ಆಡಳಿತ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದರು. 

ರಾಜ್ಯದ ಮೈತ್ರಿ ಸರ್ಕಾರ ಜನಪರ ಸರ್ಕಾರವಾಗಿದೆ. ಮೈತ್ರಿ ಧರ್ಮಕ್ಕೆ ಅನುಗುಣವಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಕಂಕಣಬದ್ದವಾಗಿದೆ. ಶ್ರೀ ಸಾಮಾನ್ಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಯೋಜನೆ ಕಾರ್ಯಗತಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದುರು.

ಕೃಷಿ ಕ್ಷೇತ್ರದಲ್ಲಿ ರೋಬಾಟ್ ಮತ್ತು ಡ್ರೋಣ್ ಬಳಕೆಗೆ ಉತ್ತೇಜನ ನೀಡಲು ಸರ್ಕಾರ ಉದ್ದೇಶಿಸಿದೆ. ಅದೇ ರೀತಿ ಮುಖ್ಯ ಮಂತ್ರಿಗಳು ಹಸಿರು ಕರ್ನಾಟಕ ಯೋಜನೆ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಅರಣ್ಯ ಬೆಳೆಸುವುದು ಇದರ ಉದ್ದೇಶವಾಗಿದ್ದು, ಸಂಘಸಂಸ್ಥೆ, ಸಾರ್ವಜನಿಕರು ಕೈಜೋಡಿಸಬೇಕೆಂದರು. ರಾಜ್ಯದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಉದ್ದಿಮೆಯನ್ನು ಪ್ರೋತ್ಸಾಹಿಸಲು ದಿಶಾ ಯೋಜನೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ ಇದರಿಂದ ಒಂದು ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದರು.

ರಾಜ್ಯದ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 250 ಕೋಟಿ ರೂ. ವಿಶೇಷ ಪ್ಯಾಕೇಜ್ ಒದಗಿಸಲಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ  ಪಲಾನುಭವಿಗಳು ಪಡೆಯುತ್ತಿದ್ದ 600 ರೂ. ಮಾಸಾಶನವನ್ನು 1000 ರೂ.ಗೆ ಹೆಚ್ಚಿಸಲಾಗಿದೆ. ಅದಕ್ಕಾಗಿ 660 ಕೋಟಿ ರೂ. ಒದಗಿಸಲಾಗಿದೆ. 32.92 ಲಕ್ಷ ವೃದ್ಧರು ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆ ನವೆಂಬರ್ 1 ರಿಂದ ಜಾರಿಯಾಗಲಿದೆ ಎಂದರು.

ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ ಪ.ಜಾತಿ, ಪ.ಪಂಗಡದ 5000 ನಿರುದ್ಯೋಗಿ ಯುವಕ ಯುವತಿಯರಿಗೆ ಆದಾಯ ಬರುವ ಆರ್ಥಿಕ ಚಟುವಟಿಕೆ ಪ್ರಾರಂಭಿಸಲು ಗರಿಷ್ಟ 10 ಲಕ್ಷ ರೂ. ಆರ್ಥಿಕ ನೆರವು. ಪ.ಜಾತಿ, ಪ.ಪಂಗಡದ 50,000 ನಿರುದ್ಯೋಗಿಗಳಿಗೆ 15 ಕೋಟಿ ರೂ. ವೆಚ್ಚದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶ ಕುಡಿಯುವ ನೀರು ಶುದ್ದೀಕರಣ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಲಧಾರೆ ಯೋಜನೆ, ಸ್ವಸಹಾಯ ಗುಂಪುಗಳ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸಿ ಆದಾಯ ಹೆಚ್ಚಿಸಲು ಕಾಯಕ ಯೋಜನೆ. ರಾಜ್ಯದ ಐದು ನಗರ ಪ್ರದೇಶಗಳ ಬೀದಿ ಬದಿಯ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು ಬಡವರ ಬಂಧು ಸೇವೆ ಆರಂಭಿಸಲಾಗುವುದು ಎಂದರು.

ಜಿಲ್ಲೆಯೂ ಪ್ರಸಿದ್ಧ ಕವಿಗಳಿಗೆ ಜನ್ಮನೀಡಿದೆ. ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಪ್ರಸಿದ್ಧ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಜಿಲ್ಲಾಡಳಿತದಿಂದ ನಗರದ ಸುಭಾಷ್‍ಚಂದ್ರ ಬೋಸ್ ಆಟದ ಮೈದಾನದಲ್ಲಿ ನಡೆದ 72ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯರಾದ  ಎಸ್.ಎಲ್. ಧರ್ಮೇಗೌಡ, ಎಸ್.ಎಲ್. ಭೋಜೇಗೌಡ, ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್, ತಾ.ಪಂ. ಅಧ್ಯಕ್ಷ ಜಯಣ್ಣ, ನಗರಸಭೆ ಉಪಾಧ್ಯಕ್ಷ ಸುಧೀರ್, ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್. ವಿಜಯ್‍ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತುಂತುರು ಮಳೆಯ ನಡುವೆಯೇ ನಗರದ ಜಿಲ್ಲಾ ಆಟದ ಮೈದಾನದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಳೆಯ ಹಿನ್ನೆಲೆಯಲ್ಲಿ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News