ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೆ ಜನರಿಗೆ ಸಿಗಬೇಕು: ಸಚಿವ ಡಿ.ಕೆ.ಶಿವಕುಮಾರ್

Update: 2018-08-15 13:22 GMT

ಬಳ್ಳಾರಿ, ಆ. 15: ಅಧಿಕಾರಿಗಳು ತಾವು ಕಾರ್ಯ ನಿರ್ವಹಿಸುವ ಕೇಂದ್ರದ ಸ್ಥಾನದಲ್ಲಿಯೆ ಮನೆ ಹಾಗೂ ಕಚೇರಿ ಮಾಡಿ ನಾಮಫಲಕ ಹಾಕಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಅಧಿಕಾರಿಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ಬುಧವಾರ 72ನೆ ಸ್ವಾತಂತ್ರೊತ್ಸವದ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಜಿಲ್ಲೆಗೆ ಪ್ರಥಮ ಬಾರಿ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣ ನಡೆಸಿದ ಬಳಿಕ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಶೀಲ ಜಿಲ್ಲೆಯಾಗಿದೆ. ಮಲೆನಾಡಿನಿಂದ ಹರಿದು ಬರುವ ತುಂಗಭದ್ರ ನದಿಯು ಜಿಲ್ಲೆಯ ಜೀವನಾಡಿ. ರೈತರು ಶಿಸ್ತುಬದ್ಧವಾದ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ನೀರು, ವಿದ್ಯುತ್‌ನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಧಿಕಾರಿಗಳು ಜನರ ನಡುವೆ ಇರಬೇಕು. ಇನ್ನು ಎರಡು ತಿಂಗಳೊಳಗಾಗಿ ನೀವು ನಿಮ್ಮ-ನಿಮ್ಮ ಕಾರ್ಯಕ್ಷೇತ್ರದಲ್ಲೇ ಜನರಿಗೆ ಸಿಗಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿಯೇ ವಾಸ ಮಾಡಬೇಕು, ನೀವು ಬಾಡಿಗೆ ಮನೆ ಮಾಡ್ತಿರೋ, ಕ್ವಾರ್ಟರ್ಸ್‌ನಲ್ಲಿ ಇರುತ್ತಿರೋ ಗೊತ್ತಿಲ್ಲ ಎಂದ ಅವರು, ಎಲ್ಲ ಹಂತಗಳಲ್ಲಿನ ಯಾವುದೇ ಕಾಮಗಾರಿ ನಡೆದರೂ ಅದು ಪಾರದರ್ಶಕವಾಗಿರಬೇಕು. ಎಲ್ಲದಕ್ಕೂ ಬಿಲ್ ಇರಬೇಕು, ಜಿಪಿಎಸ್ ಮೂಲಕ ಕೆಲಸ ಮಾಡಬೇಕು. ಎಲ್ಲ ಅಧಿಕಾರಿಗಳು ಎಲ್ಲಿದ್ದಾರೆ? ಎಲ್ಲಿ ಹೋಗುತ್ತಿದ್ದಾರೆನ್ನುವ ಮಾಹಿತಿ ಮೇಲಾಧಿಕಾರಿಗಳಿಗೆ ಹಾಗೂ ಜನರಿಗೆ ಗೊತ್ತಾಗಬೇಕು ಎಂಬುದು ನನ್ನ ಆಡಳಿತ ವೈಖರಿಯ ಮೊದಲ ಹೆಜ್ಜೆ ಎಂದು ಹೇಳಿದರು.

ಯಾವುದೇ ಇಲಾಖೆಯಲ್ಲಿ ಸರಕಾರದ ಹಣ ಎಷ್ಟೇ ಖರ್ಚಾದರೂ ಅದಕ್ಕೆ ದಾಖಲೆ ಇರಬೇಕು. ಅಲ್ಲದೆ ಎಲ್ಲ ಇಲಾಖೆಗಳಲ್ಲೂ ಪರಿಚಯ ಪುಸ್ತಕ ಹೊಂದಿರಬೇಕು. ಈಗಾಗಲೇ ನಾನು ಜಿಪಿಎಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇನೆ ಎಂದು ತಿಳಿಸಿದರು.

ನಾನು ಬಳ್ಳಾರಿಗೆ ಬಂದು ಎರಡು ನಿಮಿಷ ಆಗಿದೆ. ಒಮ್ಮೆಲೆ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ಆದರೆ ಅಧಿಕಾರಿಗಳನ್ನು ಕೇಂದ್ರ ಸ್ಥಾನದಿಂದ ಕಾರ್ಯಕ್ಷೇತ್ರಕ್ಕೆ ಅಲ್ಲಾಡಿಸುವ ಕೆಲಸ ಮಾಡುತ್ತೇನೆ. ಜನಪ್ರತಿನಿಧಿಗಳು ಕೆಡಿಪಿ ಹಾಗೂ ತಾಪಂ ಸಭೆಗೆ ಹಾಗೂ ಇನ್ನಿತರ ಸಭೆಗಳಿಗೆ ಹಾಜರಾಗುವುದಿಲ್ಲವೆಂಬ ಆರೋಪವಿದೆ. ಇದನ್ನು ಸರಿ ಪಡಿಸುವ ಕೆಲಸ ಮಾಡುತ್ತೇನೆ ಎಂದು ನುಡಿದರು.

ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗಿದೆ. ತೀರ್ಪಿನ ಬಗ್ಗೆ ಕೆಲ ಸಚಿವರು ಸಮಾಧಾನಪಟ್ಟಿರಬಹುದು. ಆದರೆ, ನಾನು ಈ ರೀತಿ ತೀರ್ಪು ಬರುತ್ತದೆಂದು ನಿರೀಕ್ಷೆ ಮಾಡಿರಲಿಲ್ಲ. ಮಹದಾಯಿ ನ್ಯಾಯಾಧಿಕರಣಕ್ಕೆ ಮತ್ತೆ ಮೇಲ್ಮನವಿ ಸಲ್ಲಿಸುತ್ತೇವೆ. ರಾಜ್ಯದ ನೀರಾವರಿ ಸಚಿವನಾಗಿದ್ದುಕೊಂಡು ಒಂದು ಹನಿ ನೀರನ್ನೂ ನಾನು ಬಿಡೋದಿಲ್ಲ, ನಮಗೆ ಸೇರಬೇಕಾದ ನೀರು ನಮಗೆ ಸೇರಲೇಬೇಕು ಎಂದು ಹೇಳಿದರು.

‘ಹಿರೇಮಠ್ ಅವರು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಬದಲು, ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಆಯ್ಕೆಯಾಗಿ ಸದನದಲ್ಲಿ ಅಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಲಿ. ಆಗ ಬೇಕಾದರೆ ತಪ್ಪುಮಾಡಿದವರನ್ನು ಗಲ್ಲಿಗೆ ಹಾಕಲಿ’

-ಡಿ.ಕೆ.ಶಿವಕುಮಾರ್,  ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News