ಭದ್ರಾ ಜಲಾಶಯದಿಂದ ನೀರು ಹೊರಕ್ಕೆ: ಮುಳುಗಡೆ ಭೀತಿಯಲ್ಲಿ ಗ್ರಾಮಸ್ಥರು

Update: 2018-08-15 13:31 GMT

ತರೀಕೆರೆ, ಆ.15: ಮಲೆನಾಡಿನಲ್ಲಿ ಕಳೆದ ಐದು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿರುವ ಭದ್ರಾ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಜಲಾಶಯದ ನಾಲ್ಕುಗೇಟ್‍ಗಳಿಂದ ಹೊರಕ್ಕೆ ಬಿಡುಲಾಗುತ್ತಿದೆ. ಭಾರೀ ನೀರು ಹೊರಬರುತ್ತಿರುವುದರಿಂದ ಸಮೀಪದ ಸೋಮಪುರ ಗ್ರಾಮದಲ್ಲಿ ಸೇತುವೆಯೊಂದು ಮುಳುಗಡೆಯಾಗಿದ್ದು, ನೀರಿನ ಹರಿವು ಹೆಚ್ಚಿದಂತೆಲ್ಲ ಈ ಭಾಗದ ಕೆಲ ಗ್ರಾಮಗಳು ಮುಳುಗಡೆಯಾಗುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

ಭದ್ರಾ ಜಲಾಶಯದಲ್ಲಿ ಕಳೆದೊಂದು ದಶಕದಲ್ಲಿ ಅತೀ ಹೆಚ್ಚು ನೀರು ಸಂಗ್ರಹವಾಗಿದ್ದು, ಇತ್ತೀಚೆಗೆ ಜಲಾಶಯದಿಂದ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿತ್ತು. ಆದರೆ ಮಲೆನಾಡು ಭಾಗದಲ್ಲಿ ತುಂಗಾ ಭದ್ರಾ ನದಿಗಳು ಕಳೆದ ಐದು ದಿನಗಳಿಂದ ತಂಬಿ ಹರಿದ ಪರಿಣಾಮ ಭದ್ರಾ ಜಲಾಶಯದಲ್ಲಿ ನೀರಿನ ಹರಿವು ಹೆಚ್ಚಲಾರಂಭಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಜಲಾಶಯದ ನಾಲ್ಕು ಗೇಟ್‍ಗಳ ಮೂಲಕ ಸುಮಾರು 1 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಪರಿಣಾಮ ಜಲಾಶಯದ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಅಕ್ಕಪಕ್ಕದ ಗ್ರಾಮಗಳಿಗೂ ನೀರು ಹರಿದಿದೆ ಎಂದು ತಿಳಿದು ಬಂದಿದೆ. ಅಲ್ಲದೇ ತಾಲೂಕು ವ್ಯಾಪ್ತಿಯಲ್ಲಿರುವ ಸೋಮಪುರ ಎಂಬಲ್ಲಿ ಸೇತುವೆ ಎಂದು ಮುಳುಗಡೆಯಾಗಿದೆ ಎಂದು ತಿಳಿದು ಬಂದಿದೆ.

ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟ ಪರಿಣಾಮ ಜಲಾಶಯದ ತಗ್ಗುಪ್ರದೇಶಗಳ ಗ್ರಾಮಗಳು ಜಲಾವೃತಗೊಳ್ಳುವ ಆತಂಕ ಇದೀಗ ಎದುರಾಗಿದ್ದು, ಮಂಗಳವಾರ ರಾತ್ರಿ ಕೆಲ ಗ್ರಾಮಗಳ ಜನರನ್ನು ತಾಲೂಕು ಆಡಳಿತ ತೆರವುಗೊಳಿಸಿ ತಾಲೂಕಿನ ರಂಗೇನಹಳ್ಳಿಯಲ್ಲಿರುವ ಅಂಬಾ ಭವಾನಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆ.

ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಹಾಗೂ ಕೆಲ ಜಿಪಂ ಸದಸ್ಯರು ಸಂತ್ರಸ್ಥರ ನೆರವಿಗೆ ಅಗತ್ಯ ಇರುವಲ್ಲಿ ಗಂಜಿಕೇಂದ್ರಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News