ಯುವಶಕ್ತಿಯನ್ನು ಬಳಸಿ ಕೌಶಲ್ಯ ಭಾರತ ನಿರ್ಮಾಣ ಮಾಡಬೇಕು: ಸಚಿವ ಜಿ.ಟಿ.ದೇವೇಗೌಡ

Update: 2018-08-15 13:39 GMT

ಮೈಸೂರು,ಆ.15: ಅಗಾಧವಾದ ಯುವಶಕ್ತಿಯನ್ನು ಬಳಸಿಕೊಂಡು ವಿಜ್ಞಾನ, ತಂತ್ರಜ್ಞಾನ, ಕೃಷಿ ,ವೈದ್ಯಕೀಯ, ಕೈಗಾರಿಕಾ ಕ್ಷೆತ್ರಗಳಲ್ಲಿ ಪರಿಣಾಮಕಾರಿ ಸಾಧನೆ ಮಾಡಲು ಕೌಶಲ್ಯ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗು ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. 

ನಗರದ ಬನ್ನಿಮಂಟಮದ ಪಂಜಿನ ಕವಾಯಿತು ಮೈದಾನದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 72ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿ ತ್ರಿವರ್ಣ ಧ್ವಜಹಾರಿಸಿ ನಂತರ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸುವ ಕಾರ್ಯಕ್ರಮಗಳಿಗೆ ಕಾಯಕಲ್ಪ ನೀಡಬೇಕು. ದೇಶದಲ್ಲಿ ಅಗಾಧವಾಗಿರುವ ಮಾನವವ ಸಂಪನ್ಮೂಲಗಳಿಗೆ ದುಡಿಯುವ ಚೈತನ್ಯ ದೊರಕುವಂತಾಗಬೇಕು, ವಿಶ್ವದಲ್ಲಿ ಬಲಾಡ್ಯ ದೇಶವಾಗಿ ರೂಪುಗೊಂಡಿರುವ ಭಾರತವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಶ್ರೀಮಂತಗೊಳಿಸುವಂತಾಗಬೇಕು. ದೇಶದ ಆರ್ಥಿಕ ಒಗ್ಗಟ್ಟನ್ನು ಕಾಪಾಡಿ ಎಲ್ಲಾ ರಂಗಗಳಲ್ಲಿಯೂ ದೇಶವನ್ನು ಸ್ವಾವಲಂಬಿಯಾಗುವಂತೆ ಮಾಡಬೇಕು. ಇದಕ್ಕಾಗಿ ದೇಶದಲ್ಲಿ ಲಭ್ಯವಿರುವ ಅಗಾಧವಾದ ಯುವಶಕ್ತಿಯನ್ನು ಬಳಸಿಕೊಂಡು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಸಾಧನೆ ಮಾಡಬೇಕು ಎಂದು ಹೇಳಿದರು.

ಭಾರತವು ತನ್ನ ಸುಧೀರ್ಘ ಇತಿಹಾಸದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದೆ. ಎಷ್ಟೋ ಬಾರಿ ಪರಕೀಯರ ದಾಳಿಗೆ ತುತ್ತಾದರೂ ಅದನ್ನು ಆತ್ಮವಿಶ್ವಾಸದಿಂದ ಸಹಿಸಿಕೊಂಡು ಬಂದಿದೆ. ತನ್ನ ಶತ್ರು ರಾಷ್ಟ್ರಗಲನ್ನು ಗೌರವಿಸುವ, ತನ್ನ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದುವಂತಹ ನಿರಂತರ ಬದ್ಧತೆಯನ್ನು ಹೊಂದಿದೆ. ಸರ್ವಜನರ ಅವಶ್ಯಕತೆಗಳಾದ ಆಹಾರ, ನೀರು, ವಸತಿ ಸೇರಿದಂತೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಸುವದರೊಂದಿಗೆ ದೇಶ ಮುಕ್ತ, ಸ್ವಾಸ್ಥ ರಾಷ್ಟ್ರ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಾರರು ಶ್ರಮಿಸಿದ್ದು, ಅದರಲ್ಲಿ ಪ್ರಮುಖವಾಗಿ ಮಹಾತ್ಮಗಾಂಧಿ, ಜವಹಾರ್ ಲಾಲ್ ನೆಹರು, ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಹಲವಾರು ಮಹನೀಯರ ಕೊಡುಗೆ ಅಪಾರ. ಜೊತೆಗೆ ದಿನ ನಿತ್ಯ ಹಗಲು ರಾತ್ರಿ ಎನ್ನದೆ ತಮ್ಮ ಜೀವವನ್ನೇ ದೇಶಕ್ಕೆ ಮುಡಿಪಾಗಿಟ್ಟು ಕಾಯುತ್ತಿರುವ ಯೋಧರನ್ನು ಎಂದೂ ಮರೆಯಬಾರದು ಎಂದು ಹೇಳಿದರು.

ಇಂದಿನ ಪಥಸಂಚಲನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ 29ಕ್ಕು ಹೆಚ್ಚು ತಂಡಗಳು ಭಾಗವಹಿಸಿದ್ದವು. ನಂತರ ವಿವಿಧ ಶಾಲಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಮೇಯರ್ ಭಾಗ್ಯವತಿ, ಜಿ.ಪಂ.ಅಧ್ಯಕ್ಷೆ ನಯೀಮ ಸುಲ್ತಾನ್, ಶಾಸಕರುಗಳಾದ, ಎಲ್.ನಾಗೇಂದ್ರ, ತನ್ವೀರ್ ಸೇಠ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್, ಡಿಸಿಪಿ. ವಿಷ್ಣುವರ್ಧನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News