ಹಾಸನ: ಜಿಲ್ಲಾಡಳಿತದ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ

Update: 2018-08-15 18:30 GMT

ಹಾಸನ, ಆ.15: ಹಾಸನದಲ್ಲಿ ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ, ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವ ಸಂದೇಶವನ್ನು ನೀಡಿದರು.

ಸ್ವಾತಂತ್ರೋತ್ಸವ ಸಂದೇಶ ನೀಡಿದ ಸಚಿವರು, ನೂರಾರು ವರ್ಷಗಳ ಬ್ರಿಟೀಷರ ದಾಸ್ಯದಿಂದ ಹೊರ ಬಂದು ನಮ್ಮ ದೇಶ ಸ್ವಾತಂತ್ರ್ಯ ಹೊಂದಿದ ದಿನ. ಈ ಸ್ವಾತಂತ್ರ್ಯದ ಹೋರಾಟದ ಹಿಂದೆ ಸಾವಿರಾರು ಮಂದಿಯ ಬಲಿದಾನವಿದೆ. ಮಹಾತ್ಮಗಾಂಧಿ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾಲಜಪತ್‍ ರಾಯ್, ಜವಾಹರಲಾಲ್ ನೆಹರು, ಸುಭಾಶ್ಚಂದ್ರ ಬೋಸ್, ಸರೋಜಿನಿ ನಾಯ್ಡು ಸೇರಿದಂತೆ ಸಹಸ್ರಾರು ಮಂದಿಯ ಕೆಚ್ಚೆದೆಯ ಹೋರಾಟದ ಫಲವಾದ ಈ ಸ್ವಾತಂತ್ರ್ಯವನ್ನು ನಾವೆಲ್ಲರೂ ಹೆಮ್ಮೆ ಹಾಗೂ ಸಂತೋಷದಿಂದ ಆಚರಿಸೋಣ ಎಂದುರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಬಡತನದ ಬವಣೆಯಲ್ಲಿದ್ದ ಭಾರತ ಇಂದು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಷ್ಟರ ಮಟ್ಟಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆದು ನಿಂತಿದೆ. ಇದಕ್ಕೆ ಹೆಮ್ಮೆಪಡೋಣ. ಈ ಸಾಧನೆಗೆ ಕಾರಣರಾದ ಎಲ್ಲಾ ಮಹನೀಯರನ್ನು ಇಂದು ಸ್ಮರಿಸಿ ಅಭಿನಂದಿಸೋಣ ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಶಸ್ತ್ರಪಡೆಗಳು ಹಾಗೂ ವಿದ್ಯಾರ್ಥಿಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಸಂಗ್ರಾಮ ಗೀತ ಕಥನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಯಲ್ ಅಪಲೋ ಶಾಲೆ, ವಿಜಯ ಆಂಗ್ಲ ಮಾಧ್ಯಮ ಶಾಲೆ, ಯುನೈಟೆಡ್  ಶಾಲೆ, ಎಸ್.ವಿ.ಎಂ ಶಾಲೆ ಹಾಗೂ ಸಂತ ಫಿಲೋಮಿನಾ ಶಾಲೆಯ 2500ಕ್ಕೂ ಅಧಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಹಾಸನ ವಿಧಾನ ಸಭೆ ಕ್ಷೇತ್ರದ ಶಾಸಕರಾದ ಪ್ರೀತಮ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂ. ಅಧ್ಯಕ್ಷ ಶ್ರೀಮತಿ ಬಿ ಎಸ್ ಶ್ವೇತಾ ದೇವರಾಜ್, ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ತಾಲೂಕು ಪಂ. ಅಧ್ಯಕ್ಷ ಸತೀಶ್, ನಗರಸಭೆ ಅಧ್ಯಕ್ಷ ಹೆಚ್.ಎಸ್ ಅನಿಲ್ ಕುಮಾರ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ ಜಗದೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಹೆಚ್.ಡಿ ರೇವಣ್ಣ ಚಾಲನೆ ನೀಡಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಬಲೂನು ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಸಸಿಯನ್ನು ನೆಡುವ ಮೂಲಕ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಶುಭ ಕೋರಿದರು. ಇದೇ ವೇಳೆ ಸಚಿವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News