ಚರಂಡಿಯಲ್ಲಿ ಪತ್ತೆಯಾದ ನವಜಾತ ಶಿಶುವನ್ನು ರಕ್ಷಿಸಿದ ಮಹಿಳೆ

Update: 2018-08-16 08:10 GMT

ಚೆನ್ನೈ, ಆ.16: ಸ್ವಾತಂತ್ರ್ಯ ದಿನದ ಮುಂಜಾನೆ ಚೆನ್ನೈ ನಗರದ ವಲಸರವಕ್ಕಂ ಪ್ರದೇಶದ ಚರಂಡಿಯೊಂದರಿಂದ ಯಾರೋ ಅಳುವ ಸದ್ದು ಕೇಳಿಸುತ್ತಿದೆ ಎಂದು ಬೆಳಗ್ಗೆ ಹಾಲು ಹಾಕುವವ ಗೀತಾರಿಗೆ ತಿಳಿಸಿದ್ದ. ಅದು ಬೆಕ್ಕಿನ ಮರಿ ಕೂಡಾ ಆಗಿದ್ದಿರಬಹುದು ಎಂದು ಗೀತಾ ಅಂದುಕೊಂಡಿದ್ದರು.

ಆದರೂ ಮನಸ್ಸು ಕೇಳದೆ ಚರಂಡಿಯತ್ತ ಇಣುಕಿದಾಗ ಹೊಕ್ಕುಳ ಬಳ್ಳಿ ಕುತ್ತಿಗೆಗೆ ಸುತ್ತಿಕೊಂಡಿದ್ದ ಸ್ಥಿತಿಯಲ್ಲಿ ದ್ದ ನವಜಾತ ಶಿಶುವೊಂದು ಅಲ್ಲಿದ್ದುದನ್ನು ನೋಡಿ ಗೀತಾ ಹೌಹಾರಿದ್ದರು.

ಮುಂದಿನ ಕೆಲವೇ ಕ್ಷಣಗಳಲ್ಲಿ ಗೀತಾ ಶಿಶುವನ್ನು ಚರಂಡಿಯಿಂದ ಸುರಕ್ಷಿತವಾಗಿ ಹೊರ ತಂದು ಅದರ ಕುತ್ತಿಗೆಗೆ ಸುತ್ತಿಕೊಂಡಿದ್ದ ಹೊಕ್ಕುಳ ಬಳ್ಳಿ ತೆಗೆದು ಮಗುವಿಗೆ ಸ್ನಾನ ಮಾಡಿಸಿ ಅದನ್ನು ಎಗ್ಮೋರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಡೆದ ಸಂಗತಿಯನ್ನು ವಿವರಿಸಿದ್ದರು. ಶಿಶುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಅದರ ಆರೋಗ್ಯ ಈಗ ಚೆನ್ನಾಗಿದೆ ಎಂದು ವೈದ್ಯರು  ತಿಳಿಸಿದ್ದಾರೆ.

“ಶಿಶು ಸ್ವಾತಂತ್ರ್ಯ ದಿನದಂದು ಪತ್ತೆಯಾಗಿರುವುದರಿಂದ ಅದಕ್ಕೆ ಸುತಂತಿರಂ (ಸ್ವಾತಂತ್ರ್ಯ) ಎಂಬ  ಹೆಸರಿಡುತ್ತೇನೆ. ಮಗುವಿಗೆ ಜೀವಿಸುವ ಸ್ವಾತಂತ್ರ್ಯ ದೊರಕಿತೆಂಬುದು ಖುಷಿ ನೀಡಿದೆ” ಎಂದು ಗೀತಾ ಹೇಳಿದ್ದಾರೆ.

ಮಗುವಿನ ರಕ್ಷಣಾ ಕಾರ್ಯಾಚರಣೆಯಿಮದ ಹಿಡಿದು ಅದನ್ನು ಆಸ್ಪತ್ರೆಗೆ ಸಾಗಿಸುವ ತನಕದ ಎಲ್ಲಾ ಘಟನಾವಳಿಗಳ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ.  ಹಲವಾರು ಸಾಮಾಜಿಕ ಜಾಲತಾಣಿಗರು ಗೀತಾರನ್ನು ಹಾಡಿ ಹೊಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News