“ಇಂದು ನಾನು ಜೀವಂತವಾಗಿರಲು ರಾಜೀವ್ ಗಾಂಧಿ ಕಾರಣ” ಎಂದಿದ್ದ ವಾಜಪೇಯಿ

Update: 2018-08-17 06:47 GMT

ಹೊಸದಿಲ್ಲಿ, ಆ.17: ಗುರುವಾರ ವಿಧಿವಶರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಕ್ಷಾತೀತವಾಗಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದವರು. ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಂಸತ್ತಿನಲ್ಲಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸುವುದರಲ್ಲಿ ನಿಸ್ಸೀಮರಾಗಿದ್ದರೂ ವಾಜಪೇಯಿ ವಿಚಾರ ಬಂದಾಗ ಅವರು ಯಾವತ್ತೂ ಅವರ ಬಗ್ಗೆ ಅತ್ಯಂತ ಸೌಜನ್ಯದಿಂದ ಮಾತನಾಡುತ್ತಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಅವರಿಬ್ಬರ ನಡುವೆ ಅತ್ಯಂತ ಸೌಹಾರ್ದ ಬಾಂಧವ್ಯವಿತ್ತು ಹಾಗೂ ಇದು ಇಂದಿನ ರಾಜಕೀಯದಲ್ಲಿ ವಿರಳವೂ ಹೌದು.

ವಾಜಪೇಯಿಯವರ ಬಗ್ಗೆ ಉಲ್ಲೇಖ್ ಎನ್‍ಪಿ ಅವರ ಕೃತಿ ``ದಿ ಅನ್ ಟೋಲ್ಡ್ ವಾಜಪೇಯಿ  : ಪೊಲಿಟೀಶಿಯನ್ ಆ್ಯಂಡ್ ಪ್ಯಾರಡಾಕ್ಸ್''  ಇದರಲ್ಲಿ  ತಮಗೆ ಕಿಡ್ನಿ ಸಂಬಂಧಿತ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲು ರಾಜೀವ್ ಗಾಂಧಿ ಸಹಾಯ ಮಾಡಿದ್ದನ್ನು ವಾಜಪೇಯಿ ಬಹಿರಂಗ ಪಡಿಸಿದ್ದರು.

ವಾಜಪೇಯಿಯವರ ಆರೋಗ್ಯ ಸಮಸ್ಯೆ ಬಗ್ಗೆ ತಿಳಿದು ರಾಜೀವ್ ಗಾಂಧಿ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು. ಕೃತಿಯಲ್ಲಿ ಆ ಘಟನೆಯ ಬಗ್ಗೆ ವಾಜಪೇಯಿ ಹೀಗೆ ಹೇಳಿಕೊಂಡಿದ್ದರು. ``ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ನನ್ನ ಕಿಡ್ನಿ ಸಮಸ್ಯೆಯ ಬಗ್ಗೆ ಅವರು ಹೇಗೋ ತಿಳಿದುಕೊಂಡು ನನಗೆ ವಿದೇಶದಲ್ಲಿ ಚಿಕಿತ್ಸೆ ಅಗತ್ಯವಿದೆಯೆಂದೂ ಕಂಡುಕೊಂಡರು. ಒಂದು ದಿನ  ಅವರು ನನ್ನನ್ನು ತಮ್ಮ ಕಚೇರಿಗೆ ಬರ ಹೇಳಿ ವಿಶ್ವ ಸಂಸ್ಥೆಯ ಭಾರತೀಯ ನಿಯೋಗದಲ್ಲಿ ನನ್ನನ್ನು ಸೇರಿಸುವುದಾಗಿ ಹಾಗೂ ನಾನು ಆ ಅವಕಾಶವನ್ನು ಉಪಯೋಗಿಸಿ ಅಲ್ಲಿ ಅಗತ್ಯವಿದ್ದರೆ ಚಿಕಿತ್ಸೆ ಪಡೆಯುವಂತೆ  ಹೇಳಿದ್ದರು. ನಾನು ನ್ಯೂಯಾರ್ಕ್ ಗೆ  ತೆರಳಿದ್ದೆ, ಇಂದು ನಾನು ಜೀವಂತವಾಗಿದ್ದರೆ ಅದೇ ಒಂದು ಕಾರಣ'' ಎಂದಿದ್ದರು.

ವಾಜಪೇಯಿಯವರ ಚಿಕಿತ್ಸೆ ಪೂರ್ಣಗೊಂಡ ನಂತರವಷ್ಟೇ ಅವರು ಅಮೆರಿಕಾದಿಂದ ಮರಳುವಂತೆ ನೋಡಿಕೊಳ್ಳಬೇಕೆಂದು 1984ರಿಂದ 1989ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ರಾಜೀವ್ ತಮ್ಮ ಅಧಿಕಾರಿಗಳಿಗೆ ಹೇಳಿದ್ದರು. ಆಗ ವಾಜಪೇಯಿ ವಿಪಕ್ಷ ನಾಯಕರಾಗಿದ್ದರು.

 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯಾದ ನಂತರ ಹಿರಿಯ ಪತ್ರಕರ್ತ ಕರಣ್ ಥಾಪರ್  ಅವರೊಂದಿಗಿನ ಸಂದರ್ಶನದಲ್ಲಿ ವಾಜಪೇಯಿ ಈ ಬಗ್ಗೆ ಹೇಳಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News