ಭಾರತ-ಪಾಕ್ ಸಂಬಂಧ ಸುಧಾರಿಸುವುದೇ ವಾಜಪೇಯಿಗೆ ನೀಡಬಹುದಾದ ಅತ್ಯುನ್ನತ ಗೌರವ: ಇಮ್ರಾನ್ ಖಾನ್

Update: 2018-08-17 08:49 GMT

ಇಸ್ಲಾಮಾಬಾದ್, ಆ.17: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿರುವ ‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್’ ಅಧ್ಯಕ್ಷ ಇಮ್ರಾನ್ ಖಾನ್, ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪನೆಯೇ ಈ ಅತ್ಯುನ್ನತ ನಾಯಕನಿಗೆ ನಾವು ನೀಡಬಹುದಾದ ದೊಡ್ಡ ಗೌರವವಾಗಿದೆ ಎಂದಿದ್ದಾರೆ.

``ಭಾರತ-ಪಾಕ್ ಸಂಬಂಧಗಳನ್ನು ಸುಧಾರಿಸಲು ವಾಜಪೇಯಿ ನಡೆಸಿದ ಪ್ರಯತ್ನಗಳು ಸದಾ ಸ್ಮರಣೀಯ. ವಾಜಪೇಯಿ ವಿದೇಶಾಂಗ ಸಚಿವರಾಗಿದ್ದಾಗ ಈ ನಿಟ್ಟಿನಲ್ಲಿ ಶ್ರಮಿಸಿದ್ದರು. ಅವರ ನಿಧನದಿಂದ ದಕ್ಷಿಣ ಏಷ್ಯಾ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ.  ರಾಜಕೀಯ ಭಿನ್ನಾಭಿಪ್ರಾಯಗಳೇನಿದ್ದರೂ ಎರಡೂ ದೇಶಗಳಿಗೆ ಶಾಂತಿ ಅಗತ್ಯವಿದೆ. ಶಾಂತಿ ಸ್ಥಾಪನೆ ಮೂಲಕ ನಾವು ವಾಜಪೇಯಿಯವರಿಗೆ ಗೌರವ ಸಲ್ಲಿಸಬೇಕು. ಈ ದುಃಖದ ಸಂದರ್ಭದಲ್ಲಿ ನಾನು ಭಾರತದ ಜನರೊಂದಿಗೆ ನಿಲ್ಲುತ್ತೇನೆ,'' ಎಂದು ಇಮ್ರಾನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಜಪೇಯಿ ಅವರು ಭಾರತ-ಪಾಕಿಸ್ತಾನ್ ಸಂಬಂಧಗಳಲ್ಲಿ ಬದಲಾವಣೆ ತರಲು ಶ್ರಮಿಸಿದ ಮುತ್ಸದ್ದಿ ರಾಜಕಾರಣಿಯಾಗಿ ಸದಾ ಸ್ಮರಣೀಯರು ಎಂದು ಪಾಕ್ ವಿದೇಶಾಂಗ ಕಚೇರಿ ತನ್ನ ಸಂತಾಪ ಸಂದೇಶದಲ್ಲಿ ತಿಳಿಸಿದೆ.

ಫೆಬ್ರವರಿ 19, 1999ರಂದು ಆರಂಭಗೊಂಡ ದಿಲ್ಲಿ-ಲಾಹೋರ್ ಬಸ್ಸಿನಲ್ಲಿ ವಾಜಪೇಯಿ ಸ್ವತಃ ಪ್ರಯಾಣಿಸಿ ಲಾಹೋರ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ವಾಘಾ ಗಡಿಯಲ್ಲಿ ಅವರನ್ನು ಆಗಿನ ಪಾಕ್ ಪ್ರಧಾನಿ ನವಾಝ್ ಶರೀಫ್ ಬರಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News