ಕೇರಳದ ಮಳೆಹಾನಿಗೆ 100 ಕೋಟಿ ರೂ., ಮೋದಿಯ ಪ್ರವಾಸಕ್ಕೆ 1,484 ಕೋಟಿ ರೂ.!

Update: 2018-08-17 11:13 GMT

ಹೊಸದಿಲ್ಲಿ, ಆ.17: ಕೇರಳದ ಮಳೆಹಾನಿಯಲ್ಲಿ 8,000 ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟವಾಗಿದೆ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದ್ದು, ಕೇಂದ್ರ ಸರಕಾರಕ್ಕೆ ತುರ್ತಾಗಿ 1,220 ಕೋಟಿ ರೂಪಾಯಿ ತುರ್ತು ನೆರವು ನೀಡುವಂತೆ ಕೇರಳ ಸರಕಾರ ಮನವಿ ಮಾಡಿತ್ತು . ಆದರೆ ಕೇಂದ್ರ ಸರಕಾರ ಮೊದಲ ಹಂತದಲ್ಲಿ ಕೇವಲ 100 ಕೋಟಿ ರೂಪಾಯಿ ಮಾತ್ರ ಕೇರಳಕ್ಕೆ ನೀಡಿದೆ.

ಕೇಂದ್ರ ಸರಕಾರದ ಹಣ ಏನೇನೂ ಸಾಲದು ಎಂಬ ಟೀಕೆ ಸಾರ್ವತ್ರಿಕವಾಗಿ ಕೇಳಿಬಂದಿದೆ. ಇದೇವೇಳೆ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರು ಕೇರಳಕ್ಕೆ ಕೇಂದ್ರ ಸರಕಾರ ನೀಡಿದ ಮೊತ್ತವನ್ನು ಮತ್ತು ಕೇಂದ್ರ ಸರಕಾರದ ಜಾಹೀರಾತು ಖರ್ಚು ಹಾಗೂ  ಪ್ರಧಾನಿ ನರೇಂದ್ರ ಮೋದಿಯ ಪ್ರವಾಸಕ್ಕಾಗಿ ಮಾಡಿರುವ ವೆಚ್ಚವನ್ನು ಪರಸ್ಪರ ಹೋಲಿಸಿ ಮಾಡಿರುವ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ದುರಂತದಿಂದ ಕೇರಳವನ್ನು ಪಾರು ಮಾಡುವುದಕ್ಕಿಂತ ಕೇಂದ್ರ ಸರಕಾರಕ್ಕೆ ಜಾಹೀರಾತಿಗೆ ವೆಚ್ಚ ಮಾಡುವುದು  ಮತ್ತು ಮೋದಿಯ ಪ್ರವಾಸ ಮುಖ್ಯವಾಗಿದೆ ಎಂದು ಪ್ರಶಾಂತ್ ಭೂಷಣ್ ಬೆಟ್ಟು ಮಾಡಿದ್ದಾರೆ. ಈವರೆಗೆ ಪ್ರಧಾನಿ ಮೋದಿ ಪ್ರವಾಸಕ್ಕಾಗಿ  1,484 ಕೋಟಿ ರೂಪಾಯಿ  ವೆಚ್ಚ ಮಾಡಿದ್ದು ಒಂದೆಡೆಯಾದರೆ, ಕೇಂದ್ರ ಸರಕಾರ ಜಾಹೀರಾತಿಗಾಗಿ 4300 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ. ಕುಂಭ ಮೇಳಕ್ಕೆ 4,200 ಕೋಟಿ ರೂಪಾಯಿ ಮತ್ತು ಶಿವಾಜಿ ಪ್ರತಿಮೆಗೆ 3,600 ಕೋಟಿ ರೂಪಾಯಿ ಮತ್ತು  ವಲ್ಲಭಭಾಯಿ ಪಟೇಲರ ಪ್ರತಿಮೆಗೆ 2,989 ಕೋಟಿ ರೂಪಾಯಿ ಕೇಂದ್ರ ಸರಕಾರ ನೀಡುತ್ತಿದೆ ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News