ಮಲೆನಾಡಿನಲ್ಲಿ ಕಡಿಮೆಯಾದ ವರ್ಷಧಾರೆ: ಸಹಜ ಸ್ಥಿತಿಗೆ ಮರಳಿದ ತಗ್ಗು ಪ್ರದೇಶಗಳು

Update: 2018-08-17 17:57 GMT

ಶಿವಮೊಗ್ಗ, ಆ. 17: ಕಳೆದ ಹಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಎಡೆಬಿಡದೆ ಬೀಳುತ್ತಿದ್ದ ಧಾರಾಕಾರ ವರ್ಷಧಾರೆ ಶುಕ್ರವಾರ ಕಡಿಮೆಯಾಗಿತ್ತು. ಇದರಿಂದ ಉಕ್ಕಿ ಹರಿಯುತ್ತಿದ್ದ ನದಿಗಳ ನೀರಿನ ಹರಿವಿವು ಕಡಿಮೆಯಾಗುತ್ತಿದೆ. ಜಲಾವೃತವಾಗಿದ್ದ ತಗ್ಗು ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಪ್ರಮುಖ ಡ್ಯಾಂಗಳ ಒಳಹರಿವು ಕಡಿಮೆಯಾಗಿದ್ದು, ಹೊರಬಿಡುತ್ತಿರುವ ನೀರಿನ ಪ್ರಮಾಣ ಕೂಡ ಇಳಿಕೆಯಾಗಿದೆ. 

ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ಏಳೆಂಟು ದಿನಗಳಿಂದ ಸತತವಾಗಿ ಬೀಳುತ್ತಿದ್ದ ಧಾರಾಕಾರ ಮಳೆಯಿಂದ, ಅಸ್ತವ್ಯಸ್ತಗೊಂಡಿದ್ದ ಜನಜೀವನ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿದೆ. ಹಲವೆಡೆ ಜಲಾವೃತವಾಗಿದ್ದ ಗದ್ದೆ-ತೋಟಗಳಲ್ಲಿ ನೀರು ಇಳಿಕೆಯಾಗಿದೆ. ಕೆಸರು ಮಣ್ಣು ತುಂಬಿಕೊಂಡಿದ್ದು, ಇದನ್ನು ತೆರವುಗೊಳಿಸುವ ಕಾರ್ಯದಲ್ಲಿ ರೈತರು ತಲ್ಲೀನರಾಗಿರುವುದು ಕಂಡುಬರುತ್ತಿದೆ. 

ಡ್ಯಾಂ ವಿವರ: ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1817 (ಗರಿಷ್ಠ ಮಟ್ಟ : 1819) ಅಡಿಯಿದೆ. ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ಡ್ಯಾಂನ ಒಳಃರಿವು 60 ಸಾವಿರ ಕ್ಯೂಸೆಕ್ ಇದ್ದು, 56 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಮಧ್ಯಾಹ್ನದ ನಂತರದ ಮಾಹಿತಿ ಅನುಸಾರ, ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಹೊರಹರಿವಿನ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ ಎಂದು ಡ್ಯಾಂ ವ್ಯಾಪ್ತಿಯ ಮೂಲಗಳು ಮಾಹಿತಿ ನೀಡುತ್ತವೆ. 

ಭದ್ರಾ ಡ್ಯಾಂನ ಒಳಹರಿವು 47,296 ಕ್ಯೂಸೆಕ್ ಇದ್ದು, 56,208 ಕ್ಯೂಸೆಕ್ ಹೊರಹರಿವಿದೆ. ತುಂಗಾ ಡ್ಯಾಂನ ಒಳಹರಿವು 51,686 ಕ್ಯೂಸೆಕ್ ಇದ್ದು, 50,175 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮಾಣಿ ಡ್ಯಾಂನ ನೀರಿನ ಮಟ್ಟ 1945.89 (ಗರಿಷ್ಠ ಮಟ್ಟ : 1952) ಅಡಿಯಿದೆ. 7844 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. 

ಭಾರೀ ನಷ್ಟ: ಜಿಲ್ಲೆಯಾದ್ಯಂತ ಬಿದ್ದ ಧಾರಾಕಾರ ಮಳೆಯಿಂದ ಜಿಲ್ಲೆಯ ಹಲವೆಡೆ ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ನಷ್ಟವಾಗಿದೆ. ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ಸಾವಿರಾರು ಎಕರೆ ಕೃಷಿ - ತೋಟಗಾರಿಕೆ ಬೆಳೆಗೆ ಧಕ್ಕೆಯಾಗಿದೆ. ಜನ-ಜಾನುವಾರುಗಳು ಮೃತಪಟ್ಟಿವೆ. ಈಗಾಗಲೇ ಜಿಲ್ಲಾಡಳಿತ ನಷ್ಟದ ಅಂದಾಜು ಕುರಿತಂತೆ ಸರ್ವೇ ನಡೆಸಲಾರಂಭಿಸಿದೆ. 

ಶಾಂತವಾದ ತುಂಗಾ-ಭದ್ರಾ ನದಿಗಳು
ಧಾರಾಕಾರ ಮಳೆಯಿಂದ ತುಂಗಾ, ಭದ್ರಾ ಹಾಗೂ ಮಾಲತಿ ನದಿಗಳು ಪ್ರವಾಹ ಸೃಷ್ಟಿಸಿದ್ದವು. ಜಲಾನಯನ ಪ್ರದೇಶದಲ್ಲಿ ಬೀಳುತ್ತಿದ್ದ ಉತ್ತಮ ಮಳೆಯಿಂದ ತುಂಗಾ ಹಾಗೂ ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಭಾರೀ ಹೆಚ್ಚಳ ಕಂಡುಬಂದಿತ್ತು. ಡ್ಯಾಂಗಳಿಂದ ಹೊರಬಿಡಲಾಗುತ್ತಿದ್ದ ನೀರಿನ ಪ್ರಮಾಣ ಕೂಡ ಹೆಚ್ಚಾಗಿತ್ತು. ಇದರಿಂದ ಶಿವಮೊಗ್ಗದಲ್ಲಿ ತುಂಗಾ ಹಾಗೂ ಭದ್ರಾವತಿಯಲ್ಲಿ ಭದ್ರಾ ನದಿಗಳು ಪ್ರವಾಹ ಸೃಷ್ಟಿಸಿದ್ದವು. ಎರಡು ನಗರಗಳಲ್ಲಿನ ನದಿಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ನೂರಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿತ್ತು. ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಪ್ರಸ್ತುತ ಡ್ಯಾಂಗಳಿಂದ ಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ, ಶಿವಮೊಗ್ಗ - ಭದ್ರಾವತಿ ನಗರಗಳಲ್ಲಿ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಜಲಾವೃತವಾಗಿದ್ದ ತಗ್ಗು ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ.

ಜೋಗಫಾಲ್ಸ್ ಗೆ ಜನಸಾಗರ
ಲಿಂಗನಮಕ್ಕಿ ಡ್ಯಾಂನಿಂದ ನೀರು ಹೊರಬಿಡುತ್ತಿರುವ ಕಾರಣದಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ಜಲಧಾರೆಯಿಂದ ಧುಮ್ಮಿಕ್ಕುತ್ತಿದೆ. ಮತ್ತೆ ಭೋರ್ಗರೆಯಲಾರಂಭಿಸಿದೆ. ಜಲಪಾತ ವೀಕ್ಷಣೆಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶ, ವಿದೇಶಗಳಿಂದಲೂ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ರಜಾ ದಿನಗಳಂದು ಭಾರೀ ಸಂಖ್ಯೆಯ ಪ್ರವಾಸಿಗರು ಜೋಗಕ್ಕೆ ಲಗ್ಗೆಯಿಡುತ್ತಿದ್ದಾರೆ. ಇದರಿಂದ ಜಲಪಾತದ ಸುತ್ತಮುತ್ತಲು ಕಾಲಿಡಲು ಜಾಗವಿರದಷ್ಟು ಜನ-ವಾಹನ ಸಂದಣಿ ಕಂಡುಬರುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News