ದೇಶದ ಅಭಿವೃದ್ಧಿಗೆ ಹೊಸ ರೂಪ ಕೊಟ್ಟ ಮಹಾನ್ ನಾಯಕ ವಾಜಪೇಯಿ: ಶಾಸಕ ಎಸ್.ಎ ರವೀಂದ್ರನಾಥ್

Update: 2018-08-17 18:38 GMT

ದಾವಣಗೆರೆ,ಆ.17: ಹೊಸ ಚಿಂತನೆಗಳೊಂದಿಗೆ ದೇಶದ ಅಭಿವೃದ್ಧಿ ಹೊಸ ರೂಪ ಕೊಟ್ಟ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಸ್ಮರಿಸಿದರು. 

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಪ್ರಧಾನಿಯಾಗಿದ್ದಾಗ ನಮ್ಮ ದೇಶದಲ್ಲಿ ಇರುವಷ್ಟು ನೀರು, ಭೂಮಿ, ಖನಿಜ ಸಂಪತ್ತು ಬೇರೆ ದೇಶದಲ್ಲಿ ಇಲ್ಲ ಎಂಬುದನ್ನು ತೋ ರಿಸಿಕೊಟ್ಟರಲ್ಲದೇ, ಅವುಗಳ ಸದ್ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಯತ್ತ ಕೊಂಡ್ಯೊಯಲು ಶ್ರಮಿಸಿದ್ದಾರೆ. ಅಧಿಕಾರಕ್ಕೂ ಮುನ್ನಾ ಮತ್ತು ನಂತರವೂ ದೇಶದ ಬಗ್ಗೆ ಚಿಂತನೆ ಮಾಡಿ ತೋರಿಸಿದ್ದಾರೆ ಎಂದರು.

ಬಿಜೆಪಿಯನ್ನು ಕಟ್ಟಿ ಬೆಳಸಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಉತ್ತಮ ಕವಿಗಳಾಗಿ, ಪ್ರಖರ ವಾಗ್ಮೀಗಳಾಗಿದ್ದ ವಾಜಪೇಯಿ ಅವರ ಭಾಷಣ ಕೇಳಲು ಪುಳಕಿತಗೊಂಡು ಜನಸಾಗರವೇ ಹರಿದುಬರುತ್ತಿತ್ತು. ನೆಹರು, ಇಂದಿರಾ ಗಾಂಧಿ ಕೂಡಾ ವಾಜಪೇಯಿ ಅವರ ಭಾಷಣವನ್ನು ಕೂತುಹಲದಿಂದ ಕೇಳುತ್ತಿದ್ದರು ಎಂದರು.   

ನದಿಗಳ ಜೋ ಡಣೆ ವಾಜಪೇಯಿ ಅವರು ದೊಡ್ಡ ಕನಸಾಗಿತ್ತು. ನದಿಗಳ ಜೋಡಣೆಯಾದರೆ ದೇಶದಲ್ಲಿ ನೀರಿನ, ಬರಗಾಲದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಹುದು ಎಂದು ಅರಿತಿದ್ದರು. ಆದರೆ ಅವರ ಈ ಚಿಂತನೆ ಹಾಗೆಯೇ ಉಳಿಯಿತು ಎಂದರು.

ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ವಾಜಪೇಯಿ ಅವರು ಇನ್ನೂ ಜೀವಂತ ಎಂಬುದು ನಮಗೆ ದೊಡ್ಡ ಶಕ್ತಿ ಕೊಡುತ್ತದೆ. ಪಕ್ಷ ಮತ್ತು ಸಂಘಟನೆಯಲ್ಲಿ ಶ್ರದ್ದೆ ಮತ್ತು ಗೌರವ ಹೊಂದಿದ್ದರು. ನನಗಿಂತ ಪಕ್ಷವೇ ಮುಖ್ಯ ಎನ್ನುತ್ತಾ ಸಂಸ್ಕಾರಯುತ ಪಕ್ಷ ನಮ್ಮದು ಎಂಬ ಹೆಮ್ಮೆ ಅವರು ಅವರಲ್ಲಿತ್ತು. ಅವರು ಜನರು ನೆನಪಿನಲ್ಲಿಟ್ಟುಕೊಳ್ಳುವಂತಹ ಉತ್ತಮ ಆಡಳಿತ ನೀಡಿದ್ದಾರೆ. ವಾಜಪೇಯಿ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂದು ಗುಣಗಾನ ಮಾಡಿದರು.

ರಾಜಕೀಯ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ ಮೇಲ್ಪಂಕ್ತಿಯಲ್ಲಿ ಬರಲು ಅವರು ಸ್ಪೂರ್ತಿಯಾಗಿದ್ದಾರೆ. ಮೇರು ವ್ಯಕ್ತಿತ್ವವುಳ್ಳ ವಾಜಪೇಯಿ ಅವರು ಯಾವುದೇ ಸಮಸ್ಯೆಗಳು ಎದುರಾದರೂ ಧೃತಿಗೆಡಲಿಲ್ಲ. ಬಿಜೆಪಿ ಕಾರ್ಯಕರ್ತರಿಗೆ ಇವರ ಆದರ್ಶ ಪ್ರೇರಣೆಯಾಗಿದೆ. ಅವರ ಆಶಯದಂತೆ ಪಕ್ಷದ ಸಂಘಟನೆ ಬಲಗೊಳಿಸಿಕೊಂಡು ಜನಸೇವೆ ಮಾಡೋಣ ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ತಾಯಿ ಎಂದು ಭಾವಿಸಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಇಂತಹ ಮುತ್ಸದಿ ನಾಯಕ ಪುನಃ ಹುಟ್ಟಿ ಬರಲಿ. ಇವರ ಮಾರ್ಗದರ್ಶನದಲ್ಲಿ ನಾವು ಸಾಗಿದರೆ ಅದೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತೆ ಎಂದು ಹೇಳಿದರು.

ಶಾಸಕ ಪ್ರೊ. ಲಿಂಗಣ್ಣ, ಬಿಜೆಪಿ ಮುಖಂಡ ಜೆ. ಸೋಮಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡ ರಾದ ವೈ. ಮಲ್ಲೇಶ್, ಹೆಚ್.ಎಸ್. ನಾಗರಾಜ್, ಜಗದೀಶ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News