ಮಂಡ್ಯ: ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ದಸಂಸ ಪ್ರತಿಭಟನೆ

Update: 2018-08-17 18:46 GMT

ಮಂಡ್ಯ, ಆ.17: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ದೇಶದ ಉದ್ದಗಲಕ್ಕೂ ಅಲಕ್ಷಿತ ಸಮುದಾಯದ ಮೇಲೆ ದಾಳಿ ನಡೆಯುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಆರೋಪಿಸಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ಶುಕ್ರವಾರ ನಗರದಲ್ಲಿ ನಡೆದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಅಕ್ರಮವಾಗಿ ಗುಂಪುಗೂಡಿದ ಯೂತ್ ಫಾರ್ ಈಕ್ವಾಲಿಟಿ, ಅಜಾದ್ ಸೇನೆ ಸಂಘಟನೆ ಪದಾಧಿಕಾರಿಗಳು ಹಾಗೂ ಬೆಂಬಲಿಗರು ದೇಶದ ಸಾರ್ವಭೌಮತೆಯ ಪ್ರತೀಕವಾದ ಸಂವಿಧಾನದ ಪ್ರತಿಯನ್ನು ದಹಿಸಿ ರಾಷ್ಟ್ರದ್ರೋಹದ ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂದು ಅವರು ಕಿಡಿಕಾರಿದರು. ಇದೇ ವೇಳೆ ಸದರಿ ಕೋಮುವಾದಿ, ಜಾತಿವಾದಿ ವ್ಯಕ್ತಿಗಳು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಟೀಕಿಸಿ ಮೀಸಲಾತಿ ಫಲಾನುಭವಿ ಸಮುದಾಯಗಳನ್ನು ನಿಂದಿಸಿ ಅಪಮಾನ ಮಾಡಿದ್ದಾರೆ. ಜಾತಿವಾದಿ ಮತ್ತು ಅಸಮಾನತೆಯ ಪರವಾದ ತಮ್ಮ ಹೀನ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

209ರ ಲೋಕಸಭಾ ಚುನಾವಣೆಯಲ್ಲಿ ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರ ವಿರುದ್ಧ ಕೋಮುವಾದಿ ಮತ್ತು ಜಾತಿವಾದಿ ಸಮುದಾಯಗಳನ್ನು ಬಿಜೆಪಿ ಪರವಾಗಿ ಒಟ್ಟುಗೂಡಿಸುವ ಮೂರನೇ ದರ್ಜೆ ರಾಜಕಾರಣಕ್ಕೆ ಈ ದುರ್ಘಟನೆ ಮುನ್ನುಡಿ ಬರೆದಿದೆ ಎಂದು ಗುರುಪ್ರಸಾದ್ ಅಭಿಪ್ರಾಯಪಟ್ಟರು.

ಢೋಂಗಿ ದೇಶಭಕ್ತರ ಗುಂಪೊಂದು ಸಂವಿಧಾನದ ಪ್ರತಿಗೆ ಬೆಂಕಿಯಿಟ್ಟು ನರಹಂತಕ ಕ್ರೌರ್ಯವನ್ನು ಜಗಜ್ಜಾಹೀರು ಮಾಡಿದೆ. ಇದು ಸಾರ್ವತ್ರಿಕವಾಗಿ ಪ್ರತಿರೋಧ ತೋರಬೇಕಾದ ಮಹಾನ್ ಪಾತಕವಾಗಿದೆ ಎಂದು ಅವರು ಕಿಡಿಕಾರಿದರು.

ಇಂತಹ ಕಪಟ ದೇಶಭಕ್ತರ ಆಷಾಢಭೂತಿ ಚಟುವಟಿಕೆಗಳ ವಿರುದ್ಧ ದೇಶದ ಜನ ಎದ್ದು ನಿಲ್ಲಲೇ ಬೇಕಾಗಿದೆ. ನಿರಂತರ ಎಚ್ಚರ ಮತ್ತು ಪ್ರತಿಭಟನೆಗಳ ಮೂಲಕ ಮಾತ್ರ ಬಹುಸಂಸ್ಕೃತಿಯ ಪ್ರಜಾಸತ್ತಾತ್ಮಕ ಅವಕಾಶಗಳನ್ನು ಜೋಪಾನ ಮಾಡಲು ಸಾಧ್ಯ ಎಂದು ಅವರು ಕರೆ ನೀಡಿದರು.

ಕೃತ್ಯ ಎಸಗಿರುವ ಯೂತ್ ಫಾರ್ ಈಕ್ವಾಲಿಟಿ, ಅಜಾದ್ ಸೇನೆ ಪದಾಧಿಕಾರಿಗಳು ಮತ್ತು ಸದಸ್ಯರ ವಿರುದ್ಧ ರಾಷ್ಟ್ರೀಯ ಗೌರವ ಅಪಮಾನ ತಡೆ ಕಾಯ್ದೆ 1971 ಹಾಗೂ ಎಸ್‍ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಲ್ಲಿಗೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಡಿ.ದೇವರಾಜ್, ಸಂಘಟನಾ ಸಂಚಾಲಕ ತೂಬಿನಕೆರೆ ಪ್ರಸನ್ನ, ಮೈಸೂರು ಮಂಜು, ಬಿ.ಕೆ.ವಿಜಯಕುಮಾರ್, ವರದರಾಜೇಂದ್ರ, ಗುಡಿಗೇನಹಳ್ಳಿ ಚಂದ್ರಶೇಖರ್, ದಿನೇಶ ತರಿಕೆರೆ ಕಾಲನಿ, ನಗರಸಭಾ ಸದಸ್ಯ ಮಹೇಶ ಕೃಷ್ಣ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News