ಪಾಕ್‌ನ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣವಚನ

Update: 2018-08-18 06:09 GMT

ಇಸ್ಲಾಮಾಬಾದ್, ಆ.18: ಮಾಜಿ ಕ್ರಿಕೆಟ್ ತಾರೆ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಶನಿವಾರ ಬೆಳಗ್ಗೆ ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಸ್ಲಾಮಾಬಾದ್ನ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಹಲವು ನಾಯಕರು ಹಾಗೂ ಕ್ರಿಕೆಟಿಗರು ಸಾಕ್ಷಿಯಾದರು.

 ಕಾರ್ಯಕ್ರಮದಲ್ಲಿ ಖಾನ್ ಪತ್ನಿ ಬುಶ್ರಾ ಬಿಬಿ, ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಪಂಜಾಬ್ ಅಸೆಂಬ್ಲಿ ಸ್ಪೀಕರ್ ಪರ್ವೆಝ್ ಇಲಾಹಿ, ಮಾಜಿ ಕ್ರಿಕೆಟಿಗ ರಮೀಝ್ ರಾಜಾ, ಪಿಟಿಐ ನಾಯಕರು, ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಶುಕ್ರವಾರವೇ ಪಾಕ್‌ಗೆ ಆಗಮಿಸಿದ್ದರು. ಸುನೀಲ್ ಗವಾಸ್ಕರ್ ಹಾಗೂ ಕಪಿಲ್‌ದೇವ್ ಆಹ್ವಾನ ನೀಡಲಾಗಿದ್ದು, ಪೂರ್ವ ಕಾರ್ಯಕ್ರಮ ನಿಮಿತ್ತ ಇಬ್ಬರೂ ಇಲ್ಲಿಗೆ ಬಂದಿಲ್ಲ.

‘‘ನಾನು ಪಾಕಿಸ್ತಾನಕ್ಕೆ ಓರ್ವ ರಾಜಕಾರಿಣಿಯಾಗಿ ಆಗಮಿಸಿಲ್ಲ. ಖಾನ್ ಅವರ ಸ್ನೇಹಿತನಾಗಿ ಇಲ್ಲಿಗೆ ಬಂದಿದ್ದೇನೆ’’ ಎಂದು ಪಂಜಾಬ್ ರಾಜ್ಯ ಸರಕಾರದ ಸಚಿವರಾಗಿರುವ ಸಿಧು ಪ್ರತಿಕ್ರಿಯಿಸಿದ್ದಾರೆ.

ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಖಾನ್ ನೇತೃತ್ವದ ಪಿಟಿಐ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತದ ಕೊರತೆ ಎದುರಿಸಿತ್ತು. ಶುಕ್ರವಾರ ಸಂಸತ್ತಿನಲ್ಲಿ ಸಣ್ಣ ಪಕ್ಷದ ಬೆಂಬಲದಲ್ಲಿ ಖಾನ್ ಬಹುಮತ ಸಾಬೀತುಪಡಿಸಿದ್ದಾರೆ. 342 ಸದಸ್ಯರ ಪಾಕ್ ಸಂಸತ್ತಿನ ಕೆಳಮನೆಯಲ್ಲಿ ಬಹುಮತಕ್ಕೆ 172 ಸದಸ್ಯರ ಬೆಂಬಲದ ಅಗತ್ಯವಿತ್ತು. ಖಾನ್ 176 ಮತಗಳನ್ನು ಪಡೆದು ಬಹುಮತ ಪರೀಕ್ಷೆಯಲ್ಲಿ ಪಾಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News