ಕೇರಳ ಕೇಳಿದ್ದು 2,000 ಕೋಟಿ, ಕೇಂದ್ರ ಘೋಷಿಸಿದ್ದು 500 ಕೋ.ರೂ.

Update: 2018-08-18 07:44 GMT

 ಕೊಚ್ಚಿ, ಆ.18: ವೈಮಾನಿಕ ಸಮೀಕ್ಷೆ ಮೂಲಕ ಕೇರಳ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ತಕ್ಷಣಕ್ಕೆ 500 ಕೋ.ರೂ. ಮಧ್ಯಂತರ ಪರಿಹಾರ ಘೋಷಿಸಿದ್ದಾರೆ. ಈ ಹಿಂದೆ 100 ಕೋ. ರೂ. ಘೋಷಿಸಿದ್ದ ಕೇಂದ್ರ ಒಟ್ಟು 600 ಕೋಟಿ ಘೋಷಿಸಿದಂತಾಗಿದೆ. ಆದರೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಕ್ಷಣಕ್ಕೆ 2000 ಕೋ.ರೂ.ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಬೇಡಿಕೆ ಇಟ್ಟಿದ್ದರು.

    ಇಂದು ಬೆಳಗ್ಗೆ ಕೊಚ್ಚಿಯ ನೌಕಾನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್,ರಾಜ್ಯಪಾಲ ಪಿ.ಸದಾಶಿವಂ, ಕಂದಾಯ ಸಚಿವ ಇ. ಚಂದ್ರಶೇಖರನ್ ಹಾಗೂ ಇತರ ಅಧಿಕಾರಿಗಳ ಜೊತೆಗೆ ಪ್ರಧಾನಮಂತ್ರಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪ್ರಧಾನಿ ಅವರು ಪ್ರಧಾನಮಂತ್ರಿಗಳ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪ್ರವಾಹದಿಂದ ಪ್ರಾಣ ಕಳೆದುಕೊಂಡಿರುವ ಕುಟುಂಬದ ಸದಸ್ಯರಿಗೆ ್ರತಲಾ 2 ಲಕ್ಷ ರೂ. ಹೆಚ್ಚುವರಿ ನೆರವು, ಗಂಭೀರ ಗಾಯಗೊಂಡಿರುವವರಿಗೆ 50,000 ರೂ. ಪರಿಹಾರ ಘೋಷಿಸಿದರು.

ಪ್ರಾಥಮಿಕ ಅಂದಾಜಿನ ಪ್ರಕಾರ ಕೇರಳದ ಪ್ರವಾಹದಿಂದಾಗಿ ಸುಮಾರು 19,000 ಕೋ.ರೂ.ನಷ್ಟವಾಗಿದೆ ಎಂದು ಮುಖ್ಯಮಂತ್ರಿ ವಿಜಯನ್ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರಕಾರ ಕೇರಳಕ್ಕೆ ಮಧ್ಯಂತರ ಪರಿಹಾರ ಘೋಷಿಸಿದ ಬೆನ್ನಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಆದ್ಯತೆಯ ಮೇರೆಗೆ ಪ್ರವಾಹದಿಂದ ಹಾನಿಯಾಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ದುರಸ್ತಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಧಾನಿ ಸೂಚನೆ ನೀಡಿದರು. ಪ್ರವಾಹದಿಂದ ಮನೆ ಕಳೆದುಕೊಂಡಿರುವವರಿಗೆ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ ಆದ್ಯತೆಯ ಮೇರೆಗೆ ಮನೆ ಕಟ್ಟಿಕೊಡಲು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News