ಪ್ರವಾಹ ಸಂತ್ರಸ್ತರ ರಕ್ಷಣೆಗೆ ಕ್ರಮ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-08-18 12:20 GMT

ಬೆಂಗಳೂರು, ಆ. 18: ನಿರಂತರ ಮಳೆ, ಪ್ರವಾಹ, ಗುಡ್ಡ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಸಿಬ್ಬಂದಿ, ನಾಗರಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಮಳೆ-ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿ, ರಕ್ಷಣೆ, ಪರಿಹಾರ ಕಾರ್ಯಾಚರಣೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡ ಬಳಿಕ ಮಾತನಾಡಿದ ಅವರು, ಇದುವರೆಗೂ 3500 ಜನರನ್ನು ರಕ್ಷಿಸಲಾಗಿದೆ ಎಂದರು.

ಶುಕ್ರವಾರ ಸಂಜೆ ದಕ್ಷಿಣ ಕನ್ನಡ, ಕೊಡಗು ಗಡಿಭಾಗದ ಜೋಡುಪಾಲ ಎಂಬಲ್ಲಿ ಗುಡ್ಡ ಕುಸಿತದಿಂದ ಸಿಲುಕಿಕೊಂಡಿದ್ದ 347 ಜನರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೇತೃತ್ವದ ತಂಡ ರಕ್ಷಣೆ ಮಾಡಿದೆ. ಕೊಡಗು ಭಾಗದಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಸ್ಥಳಾಂತರ: ಸಂತ್ರಸ್ತರಿಗೆ 31 ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, 2250 ಜನರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದ ಅವರು, ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು. ರಕ್ಷಣಾ ಕಾರ್ಯಕ್ಕೆ ಕೊಡಗಿಗೆ ಇತರೆ ಜಿಲ್ಲೆಗಳಿಂದ ನಿಯೋಜಿಸಲಾಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ತಲುಪಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದ್ದು, ನಾಗರಿಕರಿಗೆ ಸೀಮೆಎಣ್ಣೆ, ಅಡುಗೆ ಅನಿಲ ಸಿಲಿಂಡರ್ ಹಾಗೂ ಪೆಟ್ರೋಲ್ ಸೇರಿದಂತೆ ಅಗತ್ಯವಿದ್ದು, ತಕ್ಷಣವೇ ಅವುಗಳನ್ನು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಆ ಭಾಗದ ಎಲ್ಲ ಎಟಿಎಂಗಳಿಗೂ ಹಣ ತುಂಬಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಗೆ 10 ವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ಒದಗಿಸಲು ಸೂಚನೆ ನೀಡಲಾಗಿದೆ. ಶಿಶು ಆಹಾರ ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಮುಕೊಡ್ಲು ಗ್ರಾಮದಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಹಲವು ಜನ ಸಿಲುಕಿರುವ ಬಗ್ಗೆ ಮಾಹಿತಿ ಇದ್ದು, ಅವರನ್ನು ರಕ್ಷಿಸಲು ಸೇನಾ ತಂಡ ಈಗಾಗಲೇ ತೆರಳಿ ರಕ್ಷಿಸಿದೆ.

ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಗಳಿಗೆ 50 ಜೆಸಿಬಿಗಳನ್ನು ಬಳಸಿ ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿ ಮಾಡಿ, ರಕ್ಷಣಾ ಕಾರ್ಯಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ಬಹುತೇಕ ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ಕುಸಿಯುತ್ತಿರುವುದರಿಂದ ಭೂವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರನ್ನು ನಿಯೋಜಿಸಲಾಗುತ್ತಿದೆ.

ಪರಿಹಾರ: ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು, ಸಂತ್ರಸ್ತರ ದಾಖಲೆಗಳು ನಾಶವಾಗಿದೆ. ತಕ್ಷಣವೇ ಅವುಗಳ ನಕಲು ಪ್ರತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಮನೆಗಳನ್ನು ಕಳೆದುಕೊಂಡ ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೆ 2ಲಕ್ಷ ರೂ.ಪರಿಹಾರ ಹಾಗೂ ಸತ್ತವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಒದಗಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯುವಂತೆ ಸೂಚಿಸಲಾಗಿದೆ. ಪೋಲೀಸ್, ಅರಣ್ಯ ಇಲಾಖೆ ವಾಹನಗಳನ್ನು ಪಡೆಯಲು ಸೂಚಿಸಲಾಗಿದೆ. ಜಿ.ಪಂ. ಕಚೇರಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಕೋಟೆ ಶಿಥಿಲಾವಸ್ಥೆಯಲ್ಲಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಗಮನಕ್ಕೆ ತರಲು ನಿರ್ಧರಿಸಲಾಯಿತು. ಕಚೇರಿಯ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಯಾವುದೇ ಆರ್ಥಿಕ ಮುಗ್ಗಟ್ಟು ಎದುರಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಪ್ರಕೃತಿ ವಿಕೋಪದಿಂದ ಆಗಿರುವ ಲೋಪದೋಷಗಳನ್ನು ಅಧ್ಯಯನ ನಡೆಸಿ, ಮುನ್ನೆಚರಿಕೆ ವಹಿಸಲು ಸೂಚಿಸಲಾಗಿದೆ.

ಬೆಳೆ ನಷ್ಟಕ್ಕೆ ಪರಿಹಾರ: ಜಲಾಶಯಗಳು ಭರ್ತಿಯಾಗಿ ಹೊರ ಹರಿವು ಹೆಚ್ಚಾಗಿದ್ದು ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು ಹಾಗೂ ಹಾಸನದ ಭಾಗಗಳಲ್ಲಿ ಬೆಳೆ ನಷ್ಟ ಉಂಟಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ 3 ದಿನಗಳೊಳಗೆ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಆ ವರದಿ ಆಧರಿಸಿ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ರಸ್ತೆ ವಿಸ್ತರಣೆಗಾಗಿ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಗುಡ್ಡಗಳನ್ನು ಕಡಿದಿರುವುದೆ ಅತಿವೃಷ್ಟಿಗೆ ಪ್ರಮುಖ ಕಾರಣ. ಭವಿಷ್ಯದಲ್ಲಿ ಇಂತಹ ತೊಂದರೆಗಳು ಉದ್ಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವ ಸಂಬಂಧ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

‘ಮಳೆ-ಪ್ರವಾಹ ಪರಿಸ್ಥಿತಿಯಿಂದ ಬಿದ್ದುಹೋಗಿರುವ ಮೊಬೈಲ್ ಟವರ್‌ಗಳನ್ನು ಕೂಡಲೇ ಯಥಾಸ್ಥಿತಿಗೆ ತಂದು ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಇತರೆ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ಎಪ್ರಿಲ್ ನಿಂದ ಇಲ್ಲಿಯ ವರೆಗೆ ರಾಜ್ಯದಲ್ಲಿ ಮಳೆ ಅನಾಹುತಕ್ಕೆ 153 ಮಂದಿ ಮೃತಪಟ್ಟಿದ್ದು, 11,427 ಮನೆಗಳು ಹಾನಿಗೀಡಾಗಿವೆ. 723 ಜಾನುವಾರುಗಳು ಮೃತಪಟ್ಟಿವೆ. ಕೊಡಗು ಜಿಲ್ಲೆಯಲ್ಲಿ ಈವರೆಗೂ 6 ಮಂದಿ ಮೃತಪಟ್ಟಿದ್ದು, 800ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ’

-ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News