ಕೊಡಗಿನಲ್ಲಿ ಭೂ ಕಂಪನದ ವದಂತಿ: ಆತಂಕಕ್ಕೊಳಗಾದ ಜನತೆ

Update: 2018-08-18 12:37 GMT

ಮಡಿಕೇರಿ, ಆ.18: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಯ ಸಂಕಷ್ಟದಿಂದ ಕೊಡಗಿನ ಜನ ಪಾರಾಗಲು ಪರದಾಡುತ್ತಿರುವ ಹಂತದಲ್ಲೆ ಭೂ ಕಂಪನ ಉಂಟಾಗುತ್ತದೆ ಎನ್ನುವ ಊಹಾಪೋಹಗಳು ಜನರಲ್ಲಿ ಭೀತಿಯನ್ನು ಮೂಡಿಸಿತು. ಶನಿವಾರ ಬೆಳಗ್ಗಿನಿಂದಲೆ ಮಡಿಕೇರಿ ತಾಲೂಕಿನಲ್ಲಿ ಒಬ್ಬರಿಂದ ಒಬ್ಬರಿಗೆ ಭೂಕಂಪನದ ಅಂತೆ ಕಂತೆಗಳು ಹಬ್ಬಿ ಕೆಲವು ಎತ್ತರ ಪ್ರದೇಶದ ನಿವಾಸಿಗಳು ಮನೆ ತೊರೆದ ಘಟನೆಗಳು ನಡೆದಿವೆ.

ಮಧ್ಯಾಹ್ನ 3 ಗಂಟೆಗೆ ಭೂಕಂಪವಾಗುತ್ತದೆ ಎನ್ನುವ ವದಂತಿಗಳು ಹಬ್ಬಿ ನಂತರ 4 ಗಂಟೆ, 5 ಗಂಟೆ ಎನ್ನುವ ಸುಳ್ಳು ಪ್ರಚಾರವನ್ನು ನೀಡಲಾಯಿತು. ಈ ವದಂತಿಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಪತ್ರಿಕಾ ಹೇಳಿಕೆ ನೀಡಿ, ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದರು.

ಎಲ್ಲಿಯೂ ಭೂಕಂಪ ಸಂಭವಿಸುವ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಜಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ, ಯಾವುದೇ ಮುನ್ಸೂಚನೆ ನೀಡಿಲ್ಲ. ಆದರೂ ಸಾರ್ವಜನಿಕ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿಗಳು ಹಬ್ಬುತ್ತಿವೆ. ಇವುಗಳಿಗೆ ಯಾರೂ ಕಿವಿಗೊಡಬಾರದೆಂದು ಶ್ರೀ ವಿದ್ಯಾ ಮನವಿ ಮಾಡಿದರು.

ಹಾರಂಗಿ ಜಲಾಶಯ ಹಾಗೂ ಕೋಟೆ ಬೆಟ್ಟ ಸುಭದ್ರವಾಗಿದ್ದು, ಈ ಬಗ್ಗೆಯೂ ಯಾರಿಗೆ ಆತಂಕ ಬೇಡವೆಂದರು. ಸೇನಾ ತುಕಡಿ ಮತ್ತು ನೌಕಾ ದಳ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಯಿಂದ 30 ಕ್ಕೂ ಅಧಿಕ ಅಧಿಕಾರಿಗಳ ತಂಡ ಕೊಡಗಿಗೆ ಆಗಮಿಸುತ್ತಿದ್ದು, ಸಂತ್ರಸ್ತರಿಗೆ ನೆರವು ನೀಡಲಿದ್ದಾರೆ. ಗಂಜಿ ಕೇಂದ್ರಗಳಿಗೆ ತಾತ್ಕಾಲಿಕ ಶೌಚಾಲಯಗಳ ಅಗತ್ಯವಿದ್ದು, ಇವುಗಳನ್ನು ಮೈಸೂರಿನಿಂದ ತರಿಸಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದರು.

ಅಂಗಡಿ ಮಳಿಗೆಗೆ ಹಾನಿ
ಮಡಿಕೇರಿ ನಗರದಲ್ಲಿ ಮಳೆ ಕಡಿಮೆಯಾಗಿದ್ದರೂ ಗುಡ್ಡಗಳು ಕುಸಿಯುತ್ತಿರುವ ಘಟನೆಗಳು ಮುಂದುವರೆದಿದೆ. ಹಳೆಯ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಬೃಹತ್ ಬರೆ ಕುಸಿದು ಸುಮಾರು 5 ಅಂಗಡಿಗಳು ಜಖಂಗೊಂಡಿವೆ. ಬಸ್ ನಿಲ್ದಾಣದ ಮೇಲಿನ ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದ್ದು, ಬಸ್ ನಿಲ್ದಾಣ ನೆಲಸಮಗೊಳ್ಳುವ ಆತಂಕ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News