ಕೊಡಗಿನಲ್ಲಿ ಸೇನಾ ತುಕಡಿಯಿಂದ ಅಸಹಾಯಕರ ರಕ್ಷಣೆ

Update: 2018-08-18 14:40 GMT

ಮಡಿಕೇರಿ, ಆ.18: ಮಹಾಮಳೆ ಹಾಗೂ ಎಲ್ಲೆಡೆ ಗುಡ್ಡ ಕುಸಿತದಿಂದ ಕೊಡಗಿನಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದ್ದು, ಜನರ ರಕ್ಷಣೆಗೆ ಭೂಸೇನೆ ಹಾಗೂ ನೌಕಾಪಡೆ ಧಾವಿಸಿದೆ. 

ಮಕ್ಕಂದೂರು, ಮುಕೋಡ್ಲು, ದೇವಸ್ತೂರು, ಕಾಲೂರು, ಮೇಘತಾಳು, ಹೆಬ್ಬೆಟ್ಟಗೇರಿ, ಮಾಂದಲಪಟ್ಟಿ ಗ್ರಾಮಗಳ ಜನರನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಾಲೇ ಗುಡ್ಡ ಜರಿದು ಈ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಹಲವು ಮನೆಗಳು ಕೊಚ್ಚಿ ಹೋಗಿವೆ. ಇಡೀ ಬೆಟ್ಟವೇ ಜರಿದಿರುವುದರಿಂದ ಮನೆಗಳು ಮಣ್ಣು ಪಾಲಾಗಿವೆ. ಹಲವು ಮಂದಿ ಬೆಟ್ಟ ಏರಿ ಕುಳಿತಿರುವ ಬಗ್ಗೆ ಮಾಹಿತಿ ಇದೆ.

ಕಾಲ್ನಡಿಗೆಯಲ್ಲೇ ಸಾಗಿದ ಯೋಧರು
ಕುಗ್ರಾಮಗಳಲ್ಲಿ ಸಿಲುಕಿಕೊಂಡಿರುವ ಗ್ರಾಮಸ್ಥರನ್ನು ರಕ್ಷಿಸಲು ಆಗಮಿಸಿರುವ ಡೋಗ್ರಾ ರೆಜ್‍ಮೆಂಟ್‍ನ 60 ಸೈನಿಕರು, ಭಾರತೀಯ ಸೇನಾ ಪಡೆಯ ತಾಂತ್ರಿಕ ವಿಭಾಗದ 73 ಸೈನಿಕರು ಟ್ರಕ್ ಮೂಲಕ ತೆರಳಲು ಸಾಧ್ಯವಾಗದೆ ಕಾಲ್ನಡಿಗೆಯಲ್ಲೇ ಸುಮಾರು 10 ಕಿ.ಮೀ. ದೂರ ಸಾಗಿದ್ದಾರೆ. ಮಕ್ಕಂದೂರು, ಮುಕ್ಕೋಡ್ಲು ಭಾಗದಲ್ಲಿ ಪ್ರವಾಹದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗ್ರಾಮಗಳನ್ನು ಪ್ರವೇಶಿಸಲು ಯೋಧರಿಗೆ ಅಡ್ಡಿಯಾಗಿದೆ. ಹಗ್ಗಗಳನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಅಳವಡಿಸುವ ಕಾರ್ಯ ಅತ್ಯಂತ ಸಾಹಸದಾಯಕವಾಗಿದ್ದು, ಯೋಧರು ಕೂಡ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಂಕಷ್ಟದಲ್ಲಿರುವ ಗ್ರಾಮಸ್ಥರನ್ನು ಹಗ್ಗದ ಸಹಕಾರದಿಂದಲೇ ತುಂಬಿ ಹರಿಯುತ್ತಿರುವ ಮಕ್ಕಂದೂರು ಹೊಳೆಯಿಂದ ದಾಟಿಸಬೇಕಾಗಿದೆ. ಕಾರ್ಯಾಚರಣೆ ಬಿರುಸುಗೊಂಡಿದ್ದು, ಮತ್ತಷ್ಟು ಯೋಧರ ತಂಡ ಆಗಮಿಸುವ ಸಾಧ್ಯತೆಗಳಿದೆ. 

ಮುಕ್ಕೋಡ್ಲು ಊರಿನವರೇ ಆದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಮನೆಯಲ್ಲಿ 300 ಮಂದಿ, ಜಿ.ಪಂ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಮನೆಯಲ್ಲಿ, ಹಂಚೆಟ್ಟಿರ ಮನು ಮುದ್ದಪ್ಪ ಅವರ ಮನೆಯಲ್ಲಿ 250 ಮಂದಿ, ಸೂರ್ಲಬ್ಬಿಯ ಅಂಗಡಿ ಬಳಿ 100 ಮಂದಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರವಾಹದ ನೀರು ಮತ್ತು ಮಣ್ಣಿನ ರಾಶಿಯಿಂದಾಗಿ ಗ್ರಾಮ ಬಿಟ್ಟು ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ಇದೆ. ವೃದ್ಧರು, ಮಕ್ಕಳು, ಮಹಿಳೆಯರು ಮನೆ ಕಳೆದುಕೊಂಡು ಅಲ್ಲಿನ 2-3 ದಿನಗಳಿಂದ ಬೆಟ್ಟದಲ್ಲಿ ಆಶ್ರಯ ಪಡೆದಿದ್ದಾರೆ.  

ಮೈಸೂರು, ಹಾಸನ ಸೇರಿದಂತೆ ಪಕ್ಕದ ಜಿಲ್ಲೆಗಳ ಹಿರಿಯ ಅಧಿಕಾರಿಗಳು, ವೈದ್ಯಕೀಯ ತಂಡ, ಪ್ರಕೃತಿ ವಿಕೋಪ ರಕ್ಷಣಾ ತಂಡ ಕೊಡಗಿಗೆ ಆಗಮಿಸಿದ್ದು, ಪ್ರವಾಹ, ಗುಡ್ಡಕುಸಿತದಿಂದ ಅತಂತ್ರರಾಗಿ ಕಾಡು, ಬೆಟ್ಟಗಳಲ್ಲಿ ಸಿಲುಕಿಕೊಂಡಿರುವ ಮಂದಿಯ ರಕ್ಷಣೆಯಲ್ಲಿ ತೊಡಿಗಿದ್ದಾರೆ.

ಮಡಿಕೇರಿ ತಾಲೂಕಿನ ಕಾಟಕೇರಿ ಗ್ರಾಮದಲ್ಲಿ ಮನೆ ಕುಸಿದು ಗಿಲ್ಬರ್ಟ್ ಎಂಬುವವರು ನಾಪತ್ತೆಯಾಗಿದ್ದು, ಸಾವಿನ ಶಂಕೆ ಎದುರಾಗಿದೆ. ಮನೆಯಲ್ಲಿದ್ದ ಸ್ಟೆಲ್ಲಾ ಹಾಗೂ ವೃದ್ಧೆ ಹ್ಯಾಲೀಸ್ ಅವರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಿಂದ ವೈದ್ಯರ ಸೂಚನೆ ಮೇರೆಗೆ ಮೈಸೂರು ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕೊಂಚ ಮಳೆ ಕಡಿಮೆ: ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನ  ಕೆಲವು ಗಂಟೆಗಳಿಂದ ಕೊಂಚ ಮಟ್ಟಿಗೆ ಮಳೆ ಕಡಿಮೆಯಾಗಿದ್ದು, ಇದರಿಂದ ಪ್ರವಾಹ ಹಾಗೂ ಭೂಕುಸಿತದಿಂದ ಸಂತ್ರಸ್ತರಾದವರ ರಕ್ಷಣಾ ಕಾರ್ಯ ಚುರುಕುಗೊಂಡಿದೆ. ಅದರೆ ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದ ರಸ್ತೆಗಳು ಗುಡ್ಡ ಕುಸಿದು ಸಂಪರ್ಕ ಕಡಿತ್ತಗೊಂಡಿರುವುದರಿಂದ ಸಂತ್ರಸ್ತರನ್ನು ಸಾಗಿಸುವುದೇ ದುಸ್ತರವಾಗಿದೆ.  

ಜೋಡುಪಾಲದಲ್ಲಿ ಆತಂಕ
ಮಡಿಕೇರಿ –ವೀರಾಜಪೇಟೆ ರಸ್ತೆಯ ಮಣ್ಣು ಕುಸಿದು ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ-ಮಂಗಳೂರು ರಸ್ತೆಯ ಮೇಲೆ ಬಹುತೇಕ ಕಡೆಗಳಲ್ಲಿ ಬೆಟ್ಟಗಳು ಕುಸಿದು ನಿಂತಿದ್ದು, ಮಳೆ ನಿಲ್ಲದೆ ತೆರವು ಕಾರ್ಯಾಚರಣೆ ನಡೆಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಬೆಟ್ಟಗಳೇ ಕುಸಿಯುತ್ತಿರುವುದರಿಂದ ಎರಡನೇ ಮೊಣ್ಣಂಗೇರಿ, ಜೋಡುಪಾಲ, ಮದೆನಾಡು ಗ್ರಾಮಗಳ 400ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ದೂರದ ಚೇರಂಬಾಣೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಕೆಲವು ಮನೆಗಳು ಈಗಾಗಲೇ ಮಣ್ಣಿನಡಿಯಲ್ಲಿ ಸಿಲುಕಿದ್ದು, ಕೆಲವರು ನಾಪತ್ತೆಯಾಗಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಮಂಜಿನ ನಗರಿ ಮಡಿಕೇರಿಯಲ್ಲಿ ಕೆಲವು ಸಮಯ ಬಿಸಿಲಿನ ವಾತಾವರಣ ಕಂಡು ಬಂದಿದ್ದು, ಜನ ಸಾಮಾನ್ಯರು ಕೊಂಚ ನಿರಾಳರಾಗಿದ್ದಾರೆ. ಆದರೆ ಇದು ಎಷ್ಟು ಸಮಯದವರೆಗೆ ಎಂಬ ಆತಂಕವೂ ಮನೆ ಮಾಡಿದೆ.

ಜನಪ್ರತಿನಿಧಿಗಳ ದಂಡು
ಮಹಾಮಳೆ, ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ಜನರ ಅಹವಾಲು ಆಲಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಂತ್ರಿಗಳು, ಅಧಿಕಾರಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು, ಕುಶಾಲನಗರ, ಸೋಮವಾರಪೇಟೆ, ಮಡಿಕೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಸಂತ್ರಸ್ತರನ್ನು ಭೇಟಿ ಮಾಡಿ ಭರವಸೆ ತುಂಬಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ್ದು, ಶನಿವಾರ ಮಡಿಕೇರಿಯ ಪೊಲೀಸ್ ಮೈತ್ರಿ ಭವನ, ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪ, ಓಂಕಾರ ಸದನದಲ್ಲಿ ತೆರಯಲಾಗಿರುವ ಸಂತ್ರಸ್ಥರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಮೈಸೂರು ಜಿಲ್ಲಾಡಳಿತದಿಂದ ಸಹಕಾರ
ಶನಿವಾರ ಮೈಸೂರು ಜಿಲ್ಲಾಡಳಿತದಿಂದ ಕೊಡಗಿಗೆ ವಿವಿಧ ವಸ್ತುಗಳನ್ನು ರವಾನಿಸಲಾಗಿದೆ. ಸುಮಾರು 6000 ಲೀ.ನಷ್ಟು ಬಾಟಲ್ ನೀರು, 20,000 ಲೀ.ನಷ್ಟು ಕ್ಯಾನ್ ನೀರು, 200 ಜಮಖಾನ, 40 ಕಾರ್ಪೆಟ್, 1000 ಹೊದಿಕೆ/ಕಂಬಳಿ, 1000 ಬೆಡ್ ಸ್ಪ್ರೆಡ್,  500 ಟವಲ್, 500 ನ್ಯಾಪ್ ಕಿನ್ಸ್, 100 ಮೀಟರ್ 50 ಬಂಡಲ್ ರೋಪ್, 120 ಟಾರ್ಚ್, 1900 ಪೌಂಡ್ ಬ್ರೆಡ್, 9 ಡಾಕ್ಟರ್ ತಂಡಗಳನ್ನು ಮಡಿಕೇರಿಗೆ ಕಳುಹಿಸಿಕೊಡಲಾಗಿದೆ. ಇದಲ್ಲದೆ ದಾನಿಗಳು ನೀಡಿರುವ ಒಂದು ಟ್ರಕ್‍ನಷ್ಟು ಇನ್ನಿತರ ವಸ್ತುಗಳನ್ನೂ ಮೈಸೂರಿನಿಂದ ರವಾನಿಸಲಾಗಿದೆ.

ಆರೋಗ್ಯದ ಬಗ್ಗೆ ಗಮನ ಹರಿಸಲು ಸಲಹೆ
ಕೊಡಗು ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ ಉಲ್ಭಣಗೊಂಡಿದ್ದು, ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ. ಸಾರ್ವಜನಿಕರು ದೃತಿಗೆಡದೆ ದೈರ್ಯದಿಂದ ಇರುವುದು ಹಾಗೂ ಪ್ರವಾಹ ಪರಿಸ್ಥಿತಿಗೆ ಸಿಲುಕಿಕೊಂಡಿರುವ ಜಿಲ್ಲೆಯ ನಾಗರಿಕರು ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮ ಅನುಸರಿಸುವುದರ ಮೂಲಕ ಸಾಂಕ್ರಾಮಿಕ ರೋಗಗಳು ಬರದಂತೆ ಎಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಾಜೇಶ್ ಅವರು ಮನವಿ ಮಾಡಿದ್ದಾರೆ.   

ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯುವುದು, ಆಹಾರವನ್ನು ಶುಚಿಯಾಗಿ ಹಾಗೂ ಬಿಸಿಬಿಸಿಯಾಗಿಯೇ ಸೇವಿಸುವುದು, ನಿಂತ ಮಳೆಯ ಕಲುಷಿತ ನೀರನ್ನು ಕುಡಿಯಬಾರದು, ಊಟಕ್ಕೆ ಮೊದಲು ಶೌಚದ ನಂತರ ಕಡ್ಡಾಯವಾಗಿ ಸೋಪಿನಿಂದ ಕೈತೊಳೆಯುವುದು, ಗರ್ಭಿಣಿಯರು, ತಾಯಂದಿರು, ಮಕ್ಕಳು ಮತ್ತು ವೃದ್ಧರನ್ನು ಮಳೆಯಿಂದ ರಕ್ಷಿಸಬೇಕು, ತುಂಬು ಗರ್ಭಿಣಿಯರು ಮನೆಯಲ್ಲಿದ್ದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ, ನವಜಾತ ಶಿಶು, ಮಕ್ಕಳು ಮನೆಯಲ್ಲಿದ್ದರೆ ಬೆಚ್ಚನೆಯ ಹೊದಿಕೆ ಹೊದಿಸಿರಿ ಮತ್ತು ಬೆಚ್ಚನೆಯ ಬಟ್ಟೆಯನ್ನು ಧರಿಸಿ, ಪ್ರವಾಹ ಪರಿಸ್ಥಿತಿಗೆ ಸಿಲುಕಿರುವ ಕುಟುಂಬದವರು ಜಿಲ್ಲಾಡಳಿತದಿಂದ ಪ್ರಾರಂಭಿಸುವ ಗಂಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಿ, ಸಿಕ್ಕಿಸಿಕ್ಕಲ್ಲಿ ಗಲೀಜು ಮಾಡಬೇಡಿ, ಪ್ರವಾಹದ ನೀರು ಕಡಿಮೆಯಾದ ಕಡೆ ಬ್ಲೀಚಿಂಗ್ ಪೌಡರ್ ಬಳಸಿ ಶುಚಿಗೊಳಿಸಿ, ಅನಗತ್ಯವಾಗಿ ಮಳೆಯಲ್ಲಿ ಸುತ್ತಾಡಿ ನೆನೆಯಬೇಡಿ, ಪ್ರವಾಹದ ನೀರಿನಲ್ಲಿ ವಿಷಜಂತುಗಳಾದ ಹಾವು, ಚೇಳು ಮುಂತಾದವು ಬರಬಹುದಾಗಿದ್ದು, ಎಚ್ಚರದಿಂದಿರಿ. ತುಂಡಾದ ವಿದ್ಯುತ್ ತಂತಿ ಮುಂತಾದವುಗಳನ್ನು ಮುಟ್ಟಬೇಡಿ, ಶೀತ, ನೆಗಡಿ, ಜ್ವರ, ಭೇದಿ ಮುಂತಾದ ಯಾವುದೇ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಬರಲು 108 ಕ್ಕೆ ಕರೆಮಾಡಿ ಅಥವಾ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ 104ಕ್ಕೆ ಕರೆಮಾಡಿ, ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆ, ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ, ಯಾವುದೇ ಆಂಬ್ಯುಲೆನ್ಸ್ ಗಳು ಸಿಗದೇ ಇದ್ದ ಪಕ್ಷದಲ್ಲಿ ಸಮೀಪದ ಯಾವುದೇ ವಾಹನವನ್ನು ಪಡೆದು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಅವರು ಕೋರಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News