ಹರಪನಹಳ್ಳಿ: ನೆರೆ ಪೀಡಿತ ಪ್ರದೇಶಕ್ಕೆ ಶಾಸಕ ಜಿ.ಕರುಣಾಕರರೆಡ್ಡಿ ಭೇಟಿ

Update: 2018-08-18 18:30 GMT

ಹರಪನಹಳ್ಳಿ,ಆ.18: ತಾಲೂಕಿನಲ್ಲಿ ತುಂಗಭದ್ರ ನದಿ ಪಾತ್ರದಲ್ಲಿ ನೆರೆ ಹಾವಳಿಗೆ ತುತ್ತಾಗಿರುವ ಗರ್ಭಗುಡಿ, ಹಲುವಾಗಲು, ತಾವರಗೊಂದಿ, ನಿಟ್ಟೂರು ಗ್ರಾಮಗಳಿಗೆ ಶನಿವಾರ ಶಾಸಕ ಜಿ. ಕರುಣಾಕರರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಬೆಳೆಗಳು ಸಂಪೂರ್ಣ ನಾಶವಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣವೇ ಹಾನಿಯಾಗಿರುವ ಬೆಳೆಯನ್ನು ಸರ್ವೆ ನಡೆಸಿ ವರದಿ ನೀಡಬೇಕು. ಇದರಿಂದ ಇನ್ನೊಂದು ಬೆಳೆ ಬಿತ್ತನೆ ಮಾಡಲು ರೈತರಿಗೆ ಅನುಕೂಲವಾಗಲಿದೆ. ಅದ್ದರಿಂದ ಕೂಡಲೇ ಕಾರ್ಯ ಪ್ರವೃತ್ತರಾಗಬೇಕೆಂದು ಶಾಸಕರು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು. 

ಹರಪನಹಳ್ಳಿ ಪಟ್ಟಣಕ್ಕೆ ನೀರು ಸರಬರಾಜು ಕಾಮಗಾರಿಗೆ ಜಮೀನು ನೀಡಿರುವ ರೈತರು ನಮಗೆ ಪರಿಹಾರ ಬೇಡ, ಬೇರೆ ಕಡೆಗೆ ಜಮೀನು ನೀಡುವಂತೆ ಶಾಸಕರಿಗೆ ಮನವಿ ಮಾಡಿದರು. ಈ ಕುರಿತು ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸುವಂತೆ ಪುರಸಭೆ ಅಧ್ಯಕ್ಷರಿಗೆ ಸಲಹೆ ನೀಡಿದ ಶಾಸಕರು, ರೈತರ ಬೇಡಿಕೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಹಶೀಲ್ದಾರ್ ಗೆ ನಿರ್ದೇಶನ ನೀಡಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಪದೇ ಪದೇ ನೀರಿನಿಂದ ಮುಳಗುಡೆಯಾಗಿ ರಸ್ತೆ ಸಂಪರ್ಕ ಕಡಿದುಕೊಳ್ಳುತ್ತಿರುವ ಗರ್ಭಗುಡಿ ಗ್ರಾಮದಿಂದ ಹಲುವಾಗಲು ಮತ್ತು ಹಲುವಾಗಲು ಮಾರ್ಗವಾಗಿ ಮೈಲಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎರಡು ಕಡೆ ಸೇವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ 5 ಕೋಟಿ ರೂ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ನೆರೆ ಹಾವಳಿಯಿಂದ ಪ್ರಾಥಮಿಕ ವರದಿ ಪ್ರಕಾರ 1400 ಎಕರೆ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಸರ್ವೆ ಮಾಡಿ ನಿಖರ ಮಾಹಿತಿ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಮೀನುಗಾರರಿಗೆ ಬಲೆ ಹಾಗೂ ಬುಟ್ಟಿಗಳನ್ನು ನೀಡುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಅವರು ಹೇಳಿದರು. 

ಈ ಸಂದರ್ಭ ಜಿ.ಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ, ತಾ.ಪಂ ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ, ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಉಪಾಧ್ಯಕ್ಷ ಸತ್ಯನಾರಾಯಣ, ತಹಶೀಲ್ದಾರ್ ಕೆ.ಗುರುಬಸವರಾಜ್, ಬಿಜೆಪಿ ಅಧ್ಯಕ್ಷ ಕೆ.ಲಕ್ಷ್ಮಣ್, ಮುಖಂಡರಾದ ಎಂ.ಪಿ.ನಾಯ್ಕ, ಸಣ್ಣಹಾಲಪ್ಪ, ಲೋಕೇಶ್, ತೆಲಿಗಿ ಕರಿಬಸಪ್ಪ, ಬಾಗಳಿ ಕೋಟ್ರಪ್ಪ, ಡಿಶ್ ವೆಂಕಟೇಶ್, ಎಂ.ಮಲ್ಲೇಶ್, ದ್ಯಾಮಪ್ಪ, ನೀಲಗುಂದ ಮನೋಜ್, ಮಡಿವಾಳಪ್ಪ, ನವೀನ್ ಪಾಟೀಲ್, ಅಧಿಕಾರ್ ಮಲಕ್ಕಪ್ಪ, ಯು.ಪಿ.ನಾಗರಾಜ್, ಸಂತೋಷ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News