ಹುಳಿಯಾರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ

Update: 2018-08-18 18:33 GMT

ಹುಳಿಯಾರು,ಆ.18: ಪ್ರೈಮರಿ ಲೈನ್‍ಗೆ ಸೆಕೆಂಡರಿ ಲೈನ್ ಶಾರ್ಟ್ ಆಗಿ ಊರಿನಲ್ಲಿನ ಟಿವಿ ಸೇರಿದಂತೆ ಬಹುತೇಕ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮವಾಗಿರುವ ಘಟನೆ ಹುಳಿಯಾರು ಸಮೀಪದ ದೊಡ್ಡಬಿದರೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ದೊಡ್ಡಬಿದರೆ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವ ಟಿಸಿ ಬಳಿ ಪ್ರೈಮರಿ ಲೈನ್‍ಗೆ ಸೆಕೆಂಡರಿ ಲೈನ್ ಶಾರ್ಟ್ ಆಗಿ ಟಿಸಿ ಸುಟ್ಟಿದೆ. ಪರಿಣಾಮ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಲೈನ್‍ನಲ್ಲಿ ಹೆಚ್ಚುವರಿ ವಿದ್ಯುತ್ ಪಸರಿಸಿ ಈ ಅವಘಡ ಸಂಭವಿಸಿದೆ.

ದೊಡ್ಡಬಿದರೆ ಗ್ರಾಮ ದೇವತೆ ಶ್ರೀಕರಿಯಮ್ಮ ದೇವಾಲಯದ ಸಿಸಿ ಟಿವಿಯ ಎಲ್ಲಾ ಪರಿಕರಗಳು ಸುಟ್ಟಿವೆ. ಅಲ್ಲದೆ ಜಗಧೀಶ್, ರಮೇಶ್ ಎನ್ನುವವರ ಮನೆಯ ಟಿವಿ ಭಸ್ಮವಾಗಿದೆ. ಡಿಷ್ ಕೇಬಲ್‍ನಲ್ಲೂ ವಿದ್ಯುತ್ ಪಸರಿಸಿ ಸೆಟಪ್ ಬಾಕ್ಸ್ ಗಳು ಸುಟ್ಟಿದ್ದು, ಪ್ರಸ್ತುತ ಗ್ರಾಮದಲ್ಲಿ ವಿದ್ಯುತ್ ಕಡಿತವಾಗಿರುವುದರಿಂದ ಅಂದಾಜು ನಷ್ಟದ ವಿವರ ಲಭ್ಯವಾಗಿಲ್ಲ.

ಮನೆಯ ಪ್ಲಕ್ಸ್ ಬಾಕ್ಸ್ ಹೊತ್ತಿ ಉರಿಯುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ತಪ್ಪಿಸಲು ಹೋದ ರಮೇಶ್ ಎನ್ನುವವರಿಗೆ ವಿದ್ಯುತ್ ಸ್ಪರ್ಶವಾಗಿ ಎರಡು ಬೆರಳುಗಳು ಸುಟ್ಟಿವೆ. ಇದೇ ಗ್ರಾಮದ ಕುಸುಮಾ ಎನ್ನುವವರು ಮಿಕ್ಸಿ ಆಡಿಸುವಾಗ ವಿದ್ಯುತ್ ಸ್ಪರ್ಶವಾಗಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಇವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಬೆಸ್ಕಾಂನ ಶಾಖಾಧಿಕಾರಿ ಉಮೇಶ್ ನಾಯ್ಕ ಅವರು ಭೇಟಿ ನೀಡಿ ಘಟನೆಯ ವಿವರ ಪಡೆದು ಟಿ.ಸಿ. ಬದಲಾವಣೆಗೆ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News