ಮಲೆನಾಡಿನಲ್ಲಿ ಮುಂದುವರಿದ ವರುಣಾರ್ಭಟ : ತುಂಬಿ ಹರಿಯುತ್ತಿರುವ ನದಿಗಳು

Update: 2018-08-19 14:55 GMT

► ಒಂದು ದಿನ ಬಿಡುವಿನ ಬಳಿಕ ಮತ್ತೆ ಮಳೆ
► ರಸ್ತೆ ಬಿರುಕಿನಿಂದ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ
► ಮನೆಗಳ ಗೋಡೆ ಕುಸಿತದಿಂದ ಭಾರೀ ನಷ್ಟ

ಚಿಕ್ಕಮಗಳೂರು, ಆ.19: ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ಹಗಲಿನ ವೇಳೆ ಬಿಡುವು ನೀಡಿದ್ದ ಮಳೆ ರಾತ್ರಿಯಾಗುತ್ತಲೇ ಧಾರಾಕಾರವಾಗಿ ಸುರಿದ ಪರಿಣಾಮ ಮಲೆನಾಡಿನ ಪ್ರಮುಖ ನದಿಗಳು ಮತ್ತೆ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ರವಿವಾರವೂ ಮಳೆ ಮುಂದುವರಿದ ಪರಿಣಾಮ ಮಲೆನಾಡಿನ ಹಲವೆಡೆ ರಸ್ತೆಯ ಮೇಲೆ ಮಣ್ಣು ಕುಸಿದ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೆಲವೆಡೆ ಮನೆಗಳ ಸಮೀಪದಲ್ಲಿ ಧರೆ ಕುಸಿದು ಸಾಕಷ್ಟು ಮನೆಗಳಿಗೆ ಹಾನಿಯಾದ ಬಗೆ ವರದಿಯಾಗಿದೆ.

ಮಲೆನಾಡಿನ ಮಹಾ ಮಳೆಗೆ ರೋಸಿ ಹೋಗಿದ್ದ ಜನತೆ ಶನಿವಾರ ಕೊಂಚ ಮಳೆಯಾಗಿ ಬಿಸಿಲು ನೆಲಕ್ಕೆ ತಾಕತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದರು. ಆದರೆ ಶನಿವಾರ ರಾತ್ರಿಯಾಗುತ್ತಿದ್ದಂತೆ ಮಲೆನಾಡಿನಲ್ಲಿ ಮಳೆಯಾರ್ಭಟ ಮತ್ತೆ ಜೋರಾಗಿತ್ತು. ಶನಿವಾರ ರಾತ್ರಿ ಆರಂಭವಾದ ವರುಣಾರ್ಭಟ ರವಿವಾರವೂ ಮುಂದುವರಿದಿದ್ದರಿಂದ ಮಲೆನಾಡಿನಲ್ಲಿನ ತುಂಗಾ, ಭದ್ರಾ, ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನದಿಗಳ ನೆರೆ ನೀರು ತೋಟ ಹಾಗೂ ಹೊಲ ಗದ್ದೆಗಳಿಗೆ ನುಗಿದ ಪರಿಣಾಮ ಹಲವೆಡೆ ಭತ್ತದ ಗದ್ದೆಗಳಿಗೆ ಹಾನಿಯಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆ ಧಾರಾಕಾರ ಮಳೆಯಾದ ಪರಿಣಾಮ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ನದಿ ಪಾತ್ರದಲ್ಲಿರುವ ಹೆಗ್ಗರವಳ್ಳಿ ಗ್ರಾಮದ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ನೂರಾರು ಎಕರೆ ಕೃಷಿ ಭೂಮಿಗೆ ಹಾನಿಯಾಗಿದೆ. ಅಲ್ಲದೇ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಣ್ಣ ಸೇತುವೆ ಬಳಿ ಮಣ್ಣು ಕುಸಿದು ಹಾನಿಯಾಗಿದ್ದು, ಸೇತುವೆ ಸಂಪೂರ್ಣವಾಗಿ ಕುಸಿಯುವ ಭೀತಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ತಾಲೂಕಿನ ಕಳಸ, ಕುದುರೆಮುಖ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ, ರವಿವಾರ ಬೆಳಗಿನಿಂದಲೇ ನಿರಂತರವಾಗಿ ಮಳೆಯಾದ ಪರಿಣಾಮ ಕಳಸ-ಕುದುರೆಮುಖ-ಮಂಗಳೂರು ಸಂಪರ್ಕ ರಸ್ತೆಯಲ್ಲಿ ನಾಲ್ಕು ಕಡೆಗಳಲ್ಲಿ ಭೂ ಕುಸಿತ ಉಂಟಾಗಿತ್ತು. ಇದರಿಂದ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಸಂಚಾರ ಬಂದ್ ಆಗಿದ್ದು, ಕಿ.ಮೀ. ಉದ್ದಕ್ಕೂ ವಾಹನಗಳು ಸಾಲು ಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬಂದವು. ಭಾರೀ ಮಳೆಯಿಂದಾಗಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ರವಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ಕಳಸ ಹೊರನಾಡು ಸಂಪರ್ಕದ ಹೆಬ್ಬಾಳ ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಮುಳುಗಡೆಯಾಗಲು ಕೆಲವು ಅಡಿಗಳು ಬಾಕಿ ಇವೆ. ಭಾರೀ ಮಳೆ ಹಿನ್ನೆಯಲ್ಲಿ ಹೊರನಾಡು ಪ್ರವಾಸಿಗರ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ತಾಲೂಕು ವ್ಯಾಪ್ತಿಯಲ್ಲಿನ ಚಾರ್ಮಾಡಿ ಘಾಟ್‍ನಲ್ಲೂ ವಾಹನ ಸಂಚಾರ ಹೆಚ್ಚಿರುವುದರಿಂದ ಹಾಗೂ ಧಟ್ಟ ಮಂಜು, ನಿರಂತರ ಮಳೆಯಿಂದಾಗಿ ಆಗಾಗ್ಗೆ ಸಂಚಾರ ಸ್ಥಗಿತಗೊಂಡು ವಾಹನ ಚಾಲಕರು ಹಾಗೂ ಪ್ರವಾಸಿಗರು ಸಂಚಾರಕ್ಕೆ ಪರದಾಡುವಂತಾಗಿತ್ತು.

ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಕಡಿಮೆಯಾಗಿದ್ದ ಮಳೆ ರವಿವಾರ ಮುಂಜಾನೆಯಿಂದಲೇ ಚುರುಕುಗೊಂಡಿತ್ತು. ನಿರಂತರ ಮಳೆಯಿಂದಾಗಿ ತಾಲೂಕಿನ ಹಲವೆಡೆ ಮನೆಗಳ ಗೋಡೆ ಕುಸಿತ, ಭೂಕುಸಿತದಿಂದಾಗಿ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ತಾಲೂಕಿನ ಹುಲುಗರಡಿ, ಭೈರೇದೇವರು, ಸಂಪಾನೆ ಗ್ರಾಮಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಸಮೀಪವೇ ಗುಡ್ಡ ಕುಸಿತದಿಂದಾಗಿ ಮೂರು ಮನೆಗಳಿಗೆ ಭಾಗಶಃ ಹಾನಿಯಾದ ಬಗ್ಗೆ ವರದಿಯಾಗಿದೆ. ಈ ಗ್ರಾಮಗಳ ರವಿಶಂಕರ್, ಶ್ರೀಪಾಲ್ ಹಾಗೂ ವರ್ಧಮಾನಯ್ಯ ಎಂಬವರ ಮನೆಗಳಿಗೆ ಗುಡ್ಡ ಕುಸಿತದಿಂದಾಗಿ ಭಾಗಶಃ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಇದೇ ತಾಲೂಕು ವ್ಯಾಪ್ತಿಯಲ್ಲಿ ಜಯಪುರ-ಗುಡ್ಡೆತೋಟ ಹಾಗೂ ಜಯಪುರ-ಬಸ್ರಿಕಟ್ಟೆ ರಸ್ತೆಗಳು ಭಾರೀ ಮಳೆಯಿಂದಾಗಿ ಐದು ಕಡಗಳಲ್ಲಿ ಭಾರೀ ಬಿರುಕು ಬಿಟ್ಟಿದ್ದು, ಇದರಿಂದಾಗಿ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ.

ಇನ್ನು ಶೃಂಗೇರಿ, ಎನ್.ಆರ್.ಪುರ, ಬಾಳೆಹೊನ್ನೂರು, ಜಯಪುರ, ಹರಿಹರಪುರ, ಕೆರೆಕಟ್ಟೆ, ಕಿಗ್ಗಾ, ನೆಮ್ಮಾರು, ಬಿದರಗೋಡು, ಎಸ್.ಕೆ.ಬಾರ್ಡರ್ ಮತ್ತಿತರ ಪಟ್ಟಣ, ಗ್ರಾಮಗಳ ಸುತ್ತಮುತ್ತ ರವಿವಾರ ಬೆಳಗಿನಿಂದ ಸಂಜೆಯವರೆಗೂ ನಿರಂತರವಾಗಿ ಸಾಧಾರಣ ಮಳೆಯಾಗುತ್ತಿರುವುದರಿಂದ ಇಲ್ಲಿನ ತುಂಗಾ ನದಿ ಸೇರಿದಂತೆ ಸಣ್ಣ ಪುಟ್ಟ ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ತೋಟಗಳು, ಗದ್ದೆಗಳು ಜಲಾವೃತಗೊಂಡಿವೆ. ಭಾರೀ ಮಳೆ ಹಿನ್ನೆಲೆಯಲ್ಲಿ ಶೃಂಗೇರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.

ವಿವಿಧೆಡೆ ಮಳೆಗೆ ಮನೆ ಹಾನಿ ವಿವರ: 
ಶನಿವಾರ ರಾತ್ರಿ ಮಲೆನಾಡು ಭಾಗದಲ್ಲಿ ಸುರಿದ ಮಳೆಗೆ ಅನೇಕ ರಸ್ತೆಗಳ ಮೇಲೆ ಗುಡ್ಡದ ಮಣ್ಣು ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಅದೇ ರೀತಿ ಅನೇಕ ಮನೆಗಳ ಗೋಡೆ ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ. ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿ ವೀರಾಪುರ ಗ್ರಾಮದ ಚಂದ್ರಮ್ಮ ಎಂಬುವರ ಮನೆ ಶೇ.45 ರಷ್ಟು ಹಾನಿಯಾಗಿದ್ದು, 60 ಸಾವಿರ ರೂ. ನಷ್ಟು ಉಂಟಾಗಿದೆ. ಎನ್.ಆರ್.ಪುರ ತಾಲೂಕಿನ ಕಸಬ ಹೋಬಳಿ ವಾರ್ಡ್ ನಂ.3 ಗಣೇಶ್ ಎಂಬುವರ ಮನೆ  ಗೋಡೆ ಕುಸಿದು 20 ಸಾವಿರ ರೂ. ನಷ್ಟ ಉಂಟಾಗಿದೆ. 

ಎನ್.ಆರ್‍ಪುರ ತಾಲೂಕಿನ  ತ್ರೀಶಿಲಮ್ಮ ರವರ ಮನೆ ಮೇಲೆ ಮರ ಬಿದ್ದು  30 ಸಾವಿರ ರೂ. ನಷ್ಟ ಉಂಟಾಗಿದೆ. ಬಾಳೆಹೊನ್ನೂರು ಕೋನ್ನಡಿ ಗ್ರಾಮದ ಉಮೇಶ್ ಎಂಬುವರ ಮನೆ ಗೋಡೆ ಕುಸಿದುಬಿದ್ದು 40 ಸಾವಿರ ರೂ. ನಷ್ಟ ಉಂಟಾಗಿದೆ. ಬಾಳೆಹೊನ್ನೂರು ಕಾನೂರು ಗ್ರಾಮದ  ಚಂದ್ರಶೇಕರ್ ರವರ ಮನೆ ಗೋಡೆ ಕುಸಿದು 40 ಸಾವಿರ ರೂ. ನಷ್ಟವಾಗಿದೆ. ಅದೇ ಗ್ರಾಮದ ವಸಂತ್‍ರವರ ಮನೆ ಗೋಡೆ ಕುಸಿದು 20 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. 

ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿ ಬಿಲ್‍ಗದ್ದೆ ಚಿದಾನಂದರವರ ಮನೆಗೆ ಹಾನಿಯಾಗಿದೆ. ಮೇಗುಂದ ಹೋಬಳಿಯ ಹೊನ್ನೆಗುಂಡಿ ಗ್ರಾಮದ ಅಮೂಸಾಲಿಯನ್ ಮನೆಗೆ ಶೇ. 40ರಷ್ಟು ಹಾನಿಯಾಗಿದ್ದು 40 ಸಾವಿರ ರೂ. ನಷ್ಟವಾಗಿದೆ. ಮೇಗುಂದ ಹೋಬಳಿ ಚಿತ್ತದಕೊಳಲು ಗ್ರಾಮದಲ್ಲಿ ಓರ್ವರ ಮನೆಗೆ ಹಾನಿಯಾಗಿರುವ ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News