ಆತನ ಮೂರನೇ ಪುಣ್ಯತಿಥಿಯಂದೇ ಮಗ ಜನಿಸಿದ ಸಂಭ್ರಮ!

Update: 2018-08-19 04:53 GMT

ಮುಂಬೈ, ಆ.19: ಮಾರುಕಟ್ಟೆ ಸಲಹಾಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಯುವತಿ ಕಾರು ಅಪಘಾತದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಸರಿಯಾಗಿ ಮೂರನೇ ವರ್ಷಕ್ಕೆ ಮಗು ಪಡೆಯುವ ಮೂಲಕ ಶೋಕದ ಮನೆಯಲ್ಲಿ ಸಂಭ್ರಮ ಮೂಡಿದ ಅಪರೂಪದ ಘಟನೆ ವರದಿಯಾಗಿದೆ.

ಮುಂಬೈನ ಜಸ್‌ಲೋಕ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಈ ಯುವತಿ ತನ್ನ ಹಾಗೂ ಪತಿಯ ಪ್ರೇಮದ ಕುಡಿಗೆ ತಾಯಿಯಾದಳು. ಪ್ರೀತಿ, ನಿರಂತರ ಪ್ರಯತ್ನ ಹಾಗೂ ಆಧುನಿಕ ತಂತ್ರಜ್ಞಾನದ ಫಲವಾಗಿ ಪತಿಯ ಮೂರನೇ ಪುಣ್ಯತಿಥಿ ಯುವತಿಯ ಪಾಲಿಗೆ ಸಂಭ್ರಮದ ದಿನವಾಗಿ ಮಾರ್ಪಟ್ಟಿತು.

ಈ ಪವಾಡ ಕಥಾನಕ ಆರಂಭವಾದದ್ದು 2015ರ ಆಗಸ್ಟ್‌ನಲ್ಲಿ. ಸುಪ್ರಿಯಾ ಜೈನ್ ಹಾಗೂ ಎಸ್. ಗೌರವ್ ಬೆಂಗಳೂರಿನಲ್ಲಿ ಉದ್ಯೋಗಿಗಳು. ಸಹಜವಾಗಿ ಮಗು ಪಡೆಯುವುದು ಸಾಧ್ಯವಾಗದಿದ್ದಾಗ ಐವಿಎಫ್ ವಿಧಾನದಿಂದ ಮಗು ಪಡೆಯುವ ನಿರ್ಧಾರಕ್ಕೆ ಈ ದಂಪತಿ ಬಂದರು. ಆದರೆ ವಿಧಿಯ ಆಟ ಬೇರೆ ಇತ್ತು. ಐವಿಎಫ್ ಪ್ರಕ್ರಿಯೆಗೆ ಒಳಗಾಗಿ ಹಿಂದಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಢಿಕ್ಕಿ ಹೊಡೆದು ಗೌರವ್ ಮೃತಪಟ್ಟರು.
ದುಃಖಸಾಗರದಲ್ಲಿ ಮುಳುಗಿದ ಜೈನ್, ಭಾವನಾತ್ಮಕವಾಗಿ ಈ ಘಟನೆ ಬಗ್ಗೆ ಬ್ಲಾಗ್‌ನಲ್ಲಿ ವಿವರಿಸಿ, ಭೀತಿ, ಅಸಹಾಯಕತೆಯನ್ನು ಬಣ್ಣಿಸಿದರು.

ದುರಂತ ನಡೆದ ದಿನ ಕೂಡಾ ಗೌರವ್, ಮತ್ತೊಮ್ಮೆ ಬರುವಾಗ ಸಿಹಿ ಸುದ್ದಿ (ಮಗುವಿನ ಬಗ್ಗೆ) ತರುವುದಾಗಿ ತಾಯಿಗೆ ಮಾತು ಕೊಟ್ಟು ಹೋಗಿದ್ದರು ಎಂದು ಜೈನ್ ಬರೆದಿದ್ದರು. "ಆದ್ದರಿಂದ ಈ ಕಥೆ ಸುಖಾಂತ್ಯವಾಗಬೇಕು ಎಂಬ ದೃಢ ನಿರ್ಧಾರಕ್ಕೆ ಬಂದೆ. ಇದಾದ ಒಂದು ತಿಂಗಳಲ್ಲೇ ಪತಿಯ ಕುಟುಂಬ ಅಥವಾ ತನ್ನ ಪೋಷಕರನ್ನೂ ಕೇಳದೇ ನಿರ್ಧಾರ ಕೈಗೊಂಡೆ. ಮೃತ ಪತಿಯಿಂದ ಮಗು ಪಡೆಯಬೇಕು ಎಂದು ನಿರ್ಧರಿಸಿದೆ. ಡಾ.ಫಿರೂಝಾ ಪಾರಿಖ್ ಅವರ ಸಲಹೆ ಪಡೆಯುವಂತೆ ಕೆಲವರು ಹೇಳಿದರು. ಹೀಗೆ ಮಗು ಪಡೆಯುವ ಈ ಸುಧೀರ್ಘ ಹಾಗೂ ದುಬಾರಿ ಪಯಣ ಆರಂಭವಾಯಿತು"

ಮೊದಲೇ ಸಂಗ್ರಹಿಸಿ ಇಟ್ಟಿದ್ದ ಪತಿಯ ವೀರ್ಯದಿಂದ ಮಗು ಪಡೆಯುವ ನಿರ್ಧಾರಕ್ಕೆ ಬಂದರು. ಆದರೆ ಹಲವು ಪ್ರಯತ್ನಗಳ ಬಳಿಕವೂ ಅದು ಫಲ ನೀಡಲಿಲ್ಲ. ಇನ್ನೇನು ಕೊನೆ ಪ್ರಯತ್ನದಲ್ಲಿ ಅಂತೂ ಬಾಡಿಗೆ ತಾಯ್ತನ ವಿಧಾನದ ಮೂಲಕ ಪ್ರಯತ್ನ ಫಲಿಸಿತು. ಜೈನ್ ಬಾಲಿಯಲ್ಲಿದ್ದಾಗ ಮಗು ಹುಟ್ಟಿದ ಸಿಹಿ ಸುದ್ದಿ ಬಂತು. ಅದು ಪತಿಯ ಮೂರನೇ ಪುಣ್ಯತಿಥಿಯ ದಿನವಾಗಿತ್ತು!

ಮರು ವಿಮಾನದಲ್ಲೇ ಮುಂಬೈಗೆ ಧಾವಿಸಿದ ಜೈನ್, "ನನಗೆ ಮಗು ಬೇಕಿರಲಿಲ್ಲ. ಆದರೆ ಗೌರವ್‌ನ ಮಗು ಬೇಕಿತ್ತು. ಒಂದು ಮಗುವನ್ನು ಪಡೆಯಬೇಕು ಹಾಗೂ ಮತ್ತೊಂದನ್ನು ದತ್ತು ಪಡೆಯಬೇಕು ಎನ್ನುವುದು ನಮ್ಮ ಒಪ್ಪಂದವಾಗಿತ್ತು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News