ಮೆಕ್ಕೆಜೋಳ ಬೆಳೆಗೆ ಹೊಸ ಪ್ರಬೇಧದ ಕೀಟಬಾಧೆ: ರೈತರಲ್ಲಿ ಜಾಗೃತಿ ಮುಖ್ಯ; ಜಿಲ್ಲಾಧಿಕಾರಿ ಎಂ.ದೀಪಾ

Update: 2018-08-19 19:27 GMT

ಧಾರವಾಡ, ಆ.19: ಜಿಲ್ಲೆಯ ವಿವಿಧ ತಾಲೂಕಿನ ಸೀಮಿತ ಪ್ರದೇಶಗಳಲ್ಲಿ ತಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೆಳೆಗೆ ಹೊಸ ಪ್ರಬೇಧದ ಸೈನಿಕರ ಹುಳು (ಸ್ಪೋಡೆಪ್ಟರಾ ಫ್ರುಜಿಪೆರ್ಡಾ)ಕೀಟಬಾಧೆ ಕಾಣಿಸಿಕೊಂಡಿದ್ದು, ರೈತರು ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳ ಸಲಹೆ ಮೇರೆಗೆ ಜಾಗೃತಿ ವಹಿಸಬೇಕೆಂದು ಜಿಲ್ಲಾಧಿಕಾರಿ ಎಂ.ದೀಪಾ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಮತ್ತು ಕೃಷಿ ವಿಜ್ಞಾನಿಗಳ ಸಭೆಯಲ್ಲಿ ‘ಮಾಹಿತಿ ಕರಪತ್ರ’ ಬಿಡುಗಡೆ ಮಾಡಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮೆಕ್ಕೆಜೋಳದ ಬಿತ್ತನೆಯಾಗಿದೆ. ಜೂನ್ ಅಂತ್ಯದಲ್ಲಿ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿತ್ತನೆಯಾಗಿರುವ ಸುಮಾರು 9 ಸಾವಿರ ಹೆಕ್ಟೆರ್ ಪ್ರದೇಶದಲ್ಲಿನ ಮೆಕ್ಕೆಜೋಳ ಬೆಳೆಯ ಶೇ.5 ರಿಂದ 10ರಷ್ಟು ಬೆಳೆಯಲ್ಲಿ ಈ ಹೊಸ ಪ್ರಬೇಧದ ಸೈನಿಕ ಹುಳು ಪತ್ತೆಯಾಗಿದೆ ಎಂದರು.

ಭಾರತದಲ್ಲಿ ಇದೇ ಮೊದಲಬಾರಿಗೆ ಅದೂ ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ಹೊಸ ಪ್ರಭೇಧದ ಹುಳು ಕಾಣಿಸಿಕೊಂಡಿದೆ. ಈಗಾಗಲೇ ಈ ಕೀಟಬಾಧೆ ಕುರಿತು ಜನಜಾಗೃತಿಗಾಗಿ ಕ್ರಮಕೈಗೊಳ್ಳಲಾಗಿದೆ. ರೈತರಿಗೆ ನೇರವಾಗಿ ಹುಳು ಬಾದೆ ಹಾಗೂ ಅದರ ನಿಯಂತ್ರಣ ಕುರಿತು ಮಾಹಿತಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರದಲ್ಲಿರುವ ವಿಜ್ಞಾನಿಗಳು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಪಾಲ್ ಸೈನಿಕ ಹುಳು ನಿಯಂತ್ರಣ ಮತ್ತು ನಿಮೂರ್ಲನೆಗೆ ರಾಸಾಯನಿಕ ಮತ್ತು ಜೈವಿಕ ಕೀಟನಾಶಕಗಳು ಲಭ್ಯವಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ರೈತರಿಗೆ ಶೇ.50ರಷ್ಟು ರಿಯಾಯತಿ ದರದಲ್ಲಿ ಇದನ್ನು ವಿತರಿಸಲಾಗುವುದು. ರೈತರು ಮುಂಜಾಗೃತೆ ವಹಿಸಿ ರೋಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ದೀಪಾ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ಮೆಕ್ಕೆಜೋಳ ಹಾಕಿದ 35 ರಿಂದ 45 ದಿನಗಳ ಒಳಗೆ ಈ ರೋಗ ಬಾಧೆ ಬೆಳೆಯಲ್ಲಿ ಕಾಣಿಸುತ್ತದೆ. ರೈತರು ಕೀಟನಾಶಕ ಬಳಸಿ ಇದನ್ನು ನಿಯಂತ್ರಿಸಬಹುದು. ಧಾರವಾಡ ಜಿಲ್ಲೆಯಲ್ಲಿ ಮುಖ್ಯವಾಗಿ ನವಲಗುಂದ ತಾಲೂಕಿನ ಬೆಳವಟಗಿ, ಗೊಬ್ಬರಗುಂಪಿ, ಶಾನವಾಡ, ಹಾಳಕುಸುಗಲ್, ಶಿಶ್ವಿನಾಳ, ಗುಡಿಸಾಗರ, ಅಳಗವಾಡಿ, ಪಡೆಸೂರು, ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೊಬಳಿ, ಧಾರವಾಡ ತಾಲೂಕಿನ ಗರಗ, ಧಾರವಾಡ, ಅಳ್ನಾವರ, ಅಮ್ಮಿನಭಾ ಹೊಬಳಿಗಳು ಮತ್ತು ಕುಂದಗೊಳ ತಾಲೂಕಿನ ಕುಂದಗೋಳ, ಸಂಶಿ ಹೊಬಳಿಯ ಗ್ರಾಮಗಳಲ್ಲಿನ ಶೇ 5 ರಿಂದ 10 ರಷ್ಟು ಮೆಕ್ಕೆಜೋಳ ಪ್ರದೇಶದಲ್ಲಿ ಹೊಸ ಪ್ರಬೇಧದ ಸೈನಿಕರ ಹುಳು ಕೀಟಬಾಧೆ ಕಾಣಿಸಿಕೊಂಡಿದ್ದು, ಸಮಗ್ರ ನಿರ್ವಹಣೆ ಮೂಲಕ ಹುಳು ಹತೋಟಿ ಮಾಡಬೇಕೆಂದರು.

ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಎಸ್.ಎನ್.ಜಾಧವ, ಪಾಲ್ ಸೈನಿಕ ಹುಳುವಿನ ಜೀವನಚಕ್ರ ಹಾಗೂ ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಪಿ.ಎನ್.ಪಾಟೀಲ, ಕೃ.ವಿ.ವಿ.ಯ ವಿಸ್ತರಣಾ ಸಹ ನಿರ್ದೇಶಕ ಡಾ.ಚನ್ನಪ್ಪಗೌಡ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News