ಮರಗಳಿಗೆ ಜಾಹೀರಾತು ಅಳವಡಿಸಿದರೆ ಕಠಿಣ ಶಿಕ್ಷೆ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

Update: 2018-08-19 19:28 GMT

ಧಾರವಾಡ, ಆ.19: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನುಮತಿ ಇಲ್ಲದೆ ಮರಗಳಿಗೆ ಜಾಹೀರಾತುಗಳನ್ನು ಅಳವಡಿಸಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ವಿಧಿಸಲಾಗುವುದು ಎಂದು ಧಾರವಾಡ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ.ಮಂಜುನಾಥ್ ಎಚ್ಚರಿಕೆ ನೀಡಿದರು.

ನಗರದ ಕೆಸಿಡಿ ವೃತ್ತದಲ್ಲಿ ಮರಗಳಿಗೆ ಅಳವಡಿಸಲಾಗಿದ್ದ ಜಾಹೀರಾತುಗಳನ್ನು ತೆರವುಗೊಳಿಸುವ ಮೂಲಕ ಜಾಹೀರಾತು ಮುಕ್ತ ಮರ, ಗಿಡ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮರಗಳಿಗೆ ಅನೇಕ ರೀತಿಯ ಜಾಹೀರಾತು ಫಲಕ, ಪೊಸ್ಟರ್, ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಇದು ಮರಗಳ ಬೆಳವಣಿಗೆ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದ್ದು, ಅರಣ್ಯ ಹಾಗೂ ಪಾಲಿಕೆ ಕಾಯ್ದೆ ಅನ್ವಯ ಜಾಹೀರಾತಿನಲ್ಲಿ ಕಾಣಿಸಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ವಿಧಿಸಲಾಗುವುದು ಎಂದು ಅವರು ಹೇಳಿದರು.

ನೈಸರ್ಗಿಕವಾಗಿ ಗಾಳಿ, ನೀರು, ಬೆಳಕು ಪಡೆದು ಸ್ವಚ್ಚಂದವಾಗಿ ಬೆಳೆಯಬೇಕಾದ ಗಿಡ ಮರಗಳಿಗೆ ಕಂಬಿ ಕಟ್ಟುವ, ಹಗ್ಗ-ತಂತಿ ಬಿಗಿಯುವ ಮತ್ತು ಮೊಳೆ ಹೊಡೆಯುವ, ರೆಂಬೆ, ಕೊಂಬೆ, ಟೊಂಗೆಗಳನ್ನು ಕತ್ತರಿಸುವ ಮೂಲಕ ಅನೇಕ ರೀತಿಯ ಜಾಹೀರಾತುಗಳನ್ನು ನೇತು ಬಿಡಲಾಗುತ್ತಿದೆ. ಇದರಿಂದ ಅವುಗಳ ಬೆಳವಣಿಗೆ ಕುಂಠಿತವಾಗಿ ರೋಗಗಳಿಗೆ ತುತ್ತಾಗುತ್ತವೆ ಮತ್ತು ಮುಂದೊಂದು ದಿನ ಆ ಮರಗಳೇ ಸತ್ತು ಹೊಗುತ್ತವೆ ಎಂದು ಮಂಜುನಾಥ್ ತಿಳಿಸಿದರು.
ಅರಣ್ಯ, ಮರಗಳ ಸಂಖ್ಯೆ ಕಡಿಮೆ ಆಗಿರುವದರಿಂದ ಪ್ರಕೃತಿ ವಿಕೋಪ ಉಂಟಾಗುತ್ತಿದೆ. ಇದರಿಂದ ಜೀವ ಸಂಕುಲ ಅಪಾಯಕ್ಕೆ ಸಿಲುಕಿದೆ. ಆದುದರಿಂದ, ಯಾವುದೇ ಪೂರ್ವಾನುಮತಿ ಹಾಗೂ ಪರವಾನಿಗೆ ಇಲ್ಲದೆ ಇನ್ನು ಮುಂದೆ ಮರಗಳಿಗೆ ಜಾಹೀರಾತು ಅಂಟಿಸಿದರೆ ಅಥವಾ ಅಳವಡಿಸಿದರೆ ಅಂತವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಅವರು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್‌ಕುಮಾರ್ ಮಾತನಾಡಿ, ಆಗಸ್ಟ್ 15 ರಿಂದ ಹಸಿರು ಕರ್ನಾಟಕ ಯೋಜನೆಯಲ್ಲಿ ಸಸಿಗಳನ್ನು ಜಿಲ್ಲೆಯಾದ್ಯಾಂತ ನೆಡಲಾಗುತ್ತಿದೆ. ಈಗ ವಿವಿಧ ಸಂಘ ಸಂಸ್ಥೆ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರ ವ್ಯಾಪ್ತಿಯಲ್ಲಿರುವ ಮರಗಳಿಗೆ ಅನಧಿಕೃವಾಗಿ ಅಳವಡಿಸಿರುವ ಎಲ್ಲ ರೀತಿಯ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ ಎಂದರು.

ನೆಚರ್ ಫಸ್ಟ್ ಸಂಸ್ಥೆಯ ಮುಖ್ಯಸ್ಥ ಪಿ.ವಿ.ಹಿರೇಮಠ್ ಮಾತನಾಡಿ, ಆಗಸ್ಟ್ 18 ರಿಂದ 10 ದಿನಗಳ ಕಾಲ ವಿವಿಧ ಸಂಘ, ಸಂಸ್ಥೆ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ನಗರದ ಪ್ರತಿ ಮರದ ಮೇಲೆ ಅಳವಡಿಸಿರುವ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು ಎಂದರು.
ನಾಲ್ಕು ಜನರ ತಂಡ ರಚಿಸಿ, ಪ್ರತಿ ತಂಡದಿಂದ ಪ್ರತಿಯೋಂದು ಓಣಿಗೆ ತೇರಳಿ ಮರಗಳನ್ನು ಸ್ವಚ್ಚಗೊಳಿಸಲಾಗುವುದು ಮತ್ತು ಮರಗಳಿಗೆ ಅಳವಡಿಸಿರುವ ಜಾಹೀರಾತು ಫಲಕ, ಬ್ಯಾನರ್, ಹಗ್ಗ, ತಂತಿಗಳನ್ನು ತೆಗೆದು ಅರಣ್ಯ ಇಲಾಖೆಗೆ ಒಪ್ಪಿಸಲಾಗುವುದು. ನಗರದ ಅಂದ ಹೆಚ್ಚಿಸಲು ಎಲ್ಲರ ಸಹಕಾರ ಮುಖ್ಯ ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸಹಾಯಕ ಆಯುಕ್ತ ರಂಜೀತ್‌ಕುಮಾರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News