ಪ್ರವಾಹ ಭೀತಿ: ದೇಶಕ್ಕೆ ತಪ್ಪಿಲ್ಲ ಮಹಾ ವಿಪತ್ತು

Update: 2018-08-20 03:34 GMT

ಹೊಸದಿಲ್ಲಿ, ಆ. 20: ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ 16 ಸಾವಿರ ಮಂದಿ ಪ್ರವಾಹದಿಂದ ಜೀವ ಕಳೆದುಕೊಳ್ಳುವ ಭೀತಿ ಇದ್ದು, 47 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಅಂದಾಜಿಸಿದೆ.

ಪ್ರಸ್ತುತ ಪ್ರವಾಹದಿಂದ ಆಗುತ್ತಿರುವ ವಾರ್ಷಿಕ ಜೀವಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟದ ಅಂಕಿ ಅಂಶಗಳ ಆಧಾರದಲ್ಲಿ ಎನ್‌ಡಿಎಂಎ ಈ ಅಂದಾಜು ಮಾಡಿದೆ.

ಭಾರತ ತೀರಾ ಮುಂಚಿತವಾಗಿಯೇ ಹವಾಮಾನ ಮುನ್ನೆಚ್ಚರಿಕೆ ನೀಡುವ ಮೂಲಕ ಸಂಭಾವ್ಯ ಹಾನಿಯನ್ನು ತಡೆಯಲು ಪೂರಕವಾದ ವ್ಯವಸ್ಥೆ ಮತ್ತು ಈ ನಿಟ್ಟಿನಲ್ಲಿ ನೆರವಾಗಲು ಅತ್ಯಾಧುನಿಕ ಉಪಗ್ರಹ ವ್ಯವಸ್ಥೆಯನ್ನು ಹೊಂದಿದ್ದರೂ, ವಿಪತ್ತು ಅಪಾಯ ಕಡಿಮೆಗೊಳಿಸುವ ಮತ್ತು ವಿಪತ್ತು ತಡೆಯುವ ಸಾಮರ್ಥ್ಯ ವೃದ್ಧಿಸುವ ಯೋಜನೆಗಳು ಕಾಗದದಲ್ಲೇ ಉಳಿಯಲಿವೆ.

ಇದರ ನೋಡಲ್ ಏಜೆನ್ಸಿಯಾದ ಎನ್‌ಡಿಎಂಎ ಕೇವಲ ಮಾರ್ಗಸೂಚಿಗಳನ್ನು ನೀಡುವುದು, ವಿಚಾರ ಸಂಕಿರಣ ಆಯೋಜಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಸಭೆ ನಡೆಸುವ ಅಧಿಕಾರವನ್ನಷ್ಟೇ ಹೊಂದಿದೆ. ಕೇರಳದಲ್ಲಿ ಎನ್‌ಎಂಡಿಸಿ ಕೈಗೊಂಡ ಯೋಜನೆಗಳ ಬಗ್ಗೆ ವಿವರ ನೀಡಲು ಸಂಸ್ಥೆಯ ವಕ್ತಾರರು ನಿರಾಕರಿಸಿದ್ದಾರೆ.

ಗೃಹ ಸಚಿವಾಲಯವು ಇತ್ತೀಚೆಗೆ 640 ಜಿಲ್ಲೆಗಳ ಅಪಾಯ ಸಾಧ್ಯತೆಯನ್ನು ಅಂದಾಜಿಸಿದೆ. ಇಂಥ ಅಪಾಯ ಅಂದಾಜಿಸುವಿಕೆ, ಅಪಾಯ ಸಾಧ್ಯತೆ ತಡೆ ಮತ್ತು ಸರಿಪಡಿಸುವ ಕ್ರಮ, ವಿಕೋಪ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ಷಮತೆಯ ಆಧಾರದಲ್ಲಿ ರಾಷ್ಟ್ರೀಯ ಸೂಚ್ಯಂಕವನ್ನೂ ಸಿದ್ಧಪಡಿಸಲಾಗಿದೆ. ವಿಕೋಪ ಪರಿಸ್ಥಿತಿಯಲ್ಲಿ ಯಥಾಸ್ಥಿತಿಗೆ ಮರಳುವ ಮಟ್ಟ ತೀರಾ ಕಡಿಮೆ ಇದ್ದು, ಗಣನೀಯ ಸುಧಾರಣೆ ಆಗಬೇಕಿದೆ ಎಂದು ವರದಿ ಸಲಹೆ ಮಾಡಿದೆ.

"ಬಹುತೇಕ ರಾಜ್ಯಗಳು ಆಯಾ ರಾಜ್ಯಕ್ಕೆ ನಿರ್ದಿಷ್ಟವಾದ ಅಪಾಯ ಮೌಲ್ಯ ಮಾಪನ, ಬದಲಾಗುತ್ತಿರುವ ವಾತಾವರಣಕ್ಕೆ ಸಂಬಂಧಿಸಿದಂತೆ ಅಪಾಯ ಸಾಧ್ಯತೆಗಳು ಮತ್ತು ವಿಕೋಪಗಳ ಸಂಕೀರ್ಣತೆ ಬಗ್ಗೆ ಸಮಗ್ರ ಅಧ್ಯಯನವನ್ನೂ ನಡೆಸಿಲ್ಲ" ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News