ಸೇನಾ ಸಮವಸ್ತ್ರ ಧರಿಸಿ ಪಿಣರಾಯಿ ವಿಜಯನ್ ಬಗ್ಗೆ ಸುಳ್ಳಾರೋಪ ಮಾಡಿದ ಕಿಡಿಗೇಡಿ

Update: 2018-08-20 07:53 GMT

ತಿರುವನಂತಪುರಂ, ಆ.20: ಕೇರಳದಲ್ಲಿ ಮಹಾಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ  ತೊಂದರೆಗೀಡಾದವರಿಗೆ ಸಹಾಯಹಸ್ತ ಚಾಚಲು ಸರಕಾರ, ರಕ್ಷಣಾ ಪಡೆಗಳು ಹಾಗೂ ಹಲವರು ಅವಿರತ ಶ್ರಮ ಪಡುತ್ತಿರುವ ನಡುವೆಯೇ ವ್ಯಕ್ತಿಯೊಬ್ಬ ಸೇನಾ ಸಮವಸ್ತ್ರ ಧರಿಸಿಕೊಂಡು ವೀಡಿಯೋವೊಂದರಲ್ಲಿ ಪರಿಹಾರ ಕಾರ್ಯಾಚರಣೆಯ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವುದು ಪತ್ತೆಯಾಗಿದೆ.

ಇಂತಹ ತಪ್ಪು ಮಾಹಿತಿಯ ಬಗ್ಗೆ ಮಾಹಿತಿ ದೊರೆತವರು ಒಂದು ನಿರ್ದಿಷ್ಟ ಸಂಖ್ಯೆಗೆ ವಾಟ್ಸ್ಯಾಪ್ ಮಾಡುವ ಮೂಲಕ ಅವುಗಳನ್ನು ಫಾರ್ವರ್ಡ್ ಮಾಡಿ ತಿಳಿಸಬೇಕೆಂದು ಸೇನೆ ಹೇಳಿದೆ. ಸೇನೆಯು ತೊಂದರೆಗೀಡಾದವರಿಗೆ ಸಹಾಯ ಮಾಡಲು ಸರ್ವ ಪ್ರಯತ್ನ ನಡೆಸುತ್ತಿದೆ ಎಂದೂ ಸೇನೆಯ ಎಡಿಜಿಪಿಐ ಅವರು ಟ್ವೀಟ್ ಒಂದರಲ್ಲಿ  ತಿಳಿಸಿದ್ದಾರೆ.

“ನಾನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ನಿಮಗೆ ಸೇನೆಯ ವಿರುದ್ಧ ಏಕೆ ಅಷ್ಟೊಂದು ದ್ವೇಷವಿದೆ?, ನಿಮ್ಮ ಸಚಿವ ಕೊಡಿಯೇರಿ ಬಾಲಕೃಷ್ಣನ್ ಸೇನೆಯು ಕೇರಳಕ್ಕೆ ಬರುವುದನ್ನು ಬಯಸಿರದೇ ಇದ್ದುದರಿಂದಲೇ?” ಎಂದು ಸೇನೆಯ ಸಮವಸ್ತ್ರ ಧರಿಸಿದ್ದ ಕಿಡಿಗೇಡಿ ಪ್ರಶ್ನಿಸಿದ್ದ.

ಇಂತಹ ಒಂದು ದುರಂತದ ಸಂದರ್ಭದಲ್ಲೂ ಕೆಲ ವಿಕೃತ ಮನಸ್ಸಿನವರು ಸುಳ್ಳು ಸುದ್ದಿ ಹಬ್ಬುತ್ತಿರುವುದು ನಿಜಕ್ಕೂ ಆತಂಕಕಾರಿ ಎಂದು  ಅಧಿಕಾರಿಗಳು ಹೇಳುತ್ತಿದ್ದಾರೆ. ಭಾರತೀಯ ಸೇನೆ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಇರುವ ಎಲ್ಲಾ ತಪ್ಪು ಮಾಹಿತಿಗಳ ವಿರುದ್ಧವೂ ನಾವು ಕ್ರಮ ಕೈಗೊಳ್ಳುತ್ತೇವೆ ಎಂದೂ ಹೇಳಲಾಗಿದೆ.

ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೇರಳಕ್ಕೆ ಇಂದು ಸ್ವಲ್ಪ ಬಿಡುಗಡೆ ದೊರಕಿದೆ. ರಾಜ್ಯಾದ್ಯಂತ ಘೋಷಿಸಲಾಗಿರುವ ರೆಡ್ ಅಲರ್ಟ್ ವಾಪಸ್ ಪಡೆಯಲಾಗಿದ್ದು ಜಲಾವೃತಗೊಂಡ ಪ್ರದೇಶಗಳಲ್ಲಿ ನೆರೆ ನೀರು ಇಳಿಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News