ಮಡಿಕೇರಿ: ಅಪಾಯದಂಚಿನ ಗ್ರಾಮಗಳನ್ನು ತೊರೆದ ಸಂತ್ರಸ್ಥರು

Update: 2018-08-20 11:20 GMT

ಮಡಿಕೇರಿ, ಆ.20: ಕಿರಗಂದೂರು ಸಮೀಪದ ಮಕ್ಕಳಗುಡಿ ಬೆಟ್ಟದಲ್ಲಿ ಕಳೆದ ಮೂರು ದಿನಗಳಿಂದ ಭೂಮಿ ಜಾರುತ್ತಿದೆ. ಬೆಟ್ಟದಿಂದ ಜಾರಿದ ಮಣ್ಣು, ಕಲ್ಲುಗಳು ಹಾಗು ಭಾರೀ ಗಾತ್ರದ ಮರಗಳು ಐಗೂರು, ಕಿರಗಂದೂರು ಸಂಪರ್ಕ ರಸ್ತೆಗೆ ಶೇಖರಣೆಗೊಂಡಿದ್ದು, ಅಲ್ಲಿನ ನಿವಾಸಿಗಳು ಮನೆ ಖಾಲಿ ಮಾಡಿ ತೆರಳಿದ್ದಾರೆ. 

ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ನಿಲ್ಲಿಸಿದ ಶಾಲಾ ವಾಹನವನ್ನು ಹೊರತೆಗೆಯಲು ಗ್ರಾಮದ ಯುವಕರು ಶ್ರಮಿಸುತ್ತಿದ್ದಾರೆ. ತಾಕೇರಿ ಗ್ರಾಮದಲ್ಲಿ ಭೂಮಿ ಬಿರುಕು ಹೆಚ್ಚಾಗುತ್ತಿದ್ದು, ಗ್ರಾಮದ ಹೆಚ್ಚಿನ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವುದು ಕಂಡು ಬಂತು. 2006 ರ ಜುಲೈ 26ರಂದು ಭೂಕುಸಿತ ಸಂಭವಿಸಿದ ಬಿಳಿಗೇರಿ ರಾಜಂಡಬಾಣೆಯಲ್ಲಿ ಮತ್ತೊಮ್ಮೆ ಭೂಮಿ ಬಿರುಕು ಬಿಟ್ಟಿದ್ದು, ಬಾಚಿನಾಡಂಡ ಚಿಟ್ಟಿಯಪ್ಪ ಅವರ ಮನೆ ಜರುಗುತ್ತಿದೆ. ಮೋಹನ್ ಬೋಪಣ್ಣ ಅವರ ಕೆರೆ ಒಡೆದಿದ್ದು, ಪಲ್ಪರ್‍ಗೌಸ್ ಕುಸಿದಿದೆ. ಈಗಾಗಲೆ ನಾಲ್ಕು ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.

ತಾಲೂಕಿನ ಮುಕ್ಕೊಡ್ಲು ಹಚ್ಚಿನಾಡು ಗ್ರಾಮಗಳಲ್ಲಿ ಸಿಲುಕಿಗೊಂಡಿದ್ದ 60 ಪುರುಷರು. ಮಹಿಳೆಯರು, ಮಕ್ಕಳು ಹಾಗು ವೃದ್ದರು ಸೇರಿದಂತೆ 60ಮಂದಿಯನ್ನು ಬೆಂಗಳೂರಿನ ಅಗ್ನಿಶಾಮಕದಳದ ಸಿಬ್ಬಂದಿಗಳು ರಕ್ಷಿಸಿ, ಮಾದಾಪುರ ಗಂಜಿ ಕೇಂದ್ರಕ್ಕೆ ಕರೆ ತಂದಿದ್ದಾರೆ. ಶಾಸಕ ಅಪ್ಪಚ್ಚು ರಂಜನ್, ಅಗ್ನಿಶಾಮಕದಳದ ಮಹಾನಿರ್ದೇಶಕ ಎಂ.ಎನ್.ರೆಡ್ಡಿ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಮೂರು ಕಿ.ಮೀ.ಕಾಲ್ನಡಿಯಲ್ಲೆ ತೆರಳಿ, ಇಗ್ಗೊಡ್ಲು ಗ್ರಾಮದ ಮೂಲಕ ಕರೆತರಲಾಗಿದೆ. ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾದಾಪುರ ಗಂಜಿಕೇಂದ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News