ಮಡಿಕೇರಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಸಂಸದ ಪ್ರತಾಪ್ ಸಿಂಹ ಬೇಟಿ

Update: 2018-08-20 11:27 GMT

ಮಡಿಕೇರಿ, ಆ.20: ಮಹಾಮಳೆಯಿಂದಾಗಿ ಭೂ ಕುಸಿತ, ಪ್ರವಾಹದ ಸ್ಥಳ ಹಾಗೂ ಸಂತ್ರಸ್ಥರಿರುವ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಸಂತ್ರಸ್ತರಿಳಿಗೆ ಸಾಂತ್ವಾನ ಹೇಳಿದರು. 

ಸಂಸದರು ಸೋಮವಾರಪೇಟೆಯ ಕೊಡವ ಸಮಾಜ, ಒಕ್ಕಲಿಗರ ಗೌಡ ಸಮಾಜ, ಐಗೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿರಗಂದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಸಂತ್ರಸ್ತರೊಂದಿಗೆ ಸಂಸದರು ಮಾತನಾಡುತ್ತಾ, ನೀವು ಯಾರೂ ದೃತಿಗೆಡುವ ಅವಶ್ಯಕತೆ ಇಲ್ಲ. ನಿಮ್ಮ ಆರೋಗ್ಯ ರಕ್ಷಣೆಗಾಗಿ ವೈದ್ಯರು, ಔಷಧಗಳು, ಆಹಾರಗಳು, ಬಟ್ಟೆ, ಹೊದಿಕೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಇಲ್ಲಿನ ಕೇಂದ್ರಗಳಲ್ಲಿ ಕಲ್ಪಿಸಲಾಗಿದೆ. ನಿಮಗಾಗಿ ಇಡೀ ರಾಜ್ಯವೇ ಸ್ಪಂಧಿಸುತ್ತಿದೆನೀವು ಕಳೆದುಕೊಂಡಿರುವ ಮನೆಗಳನ್ನು ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿಯಲ್ಲಿ ನಿರ್ಮಿಸಿಕೊಡಲಾಗುವುದು. ಮನೆಗಳ ವ್ಯವಸ್ಥೆ ಸೇರಿದಂತೆ ತಮ್ಮ ಊರುಗಳು ಸಾಮಾನ್ಯ ಸ್ಥಿತಿಗೆ ಮರಳಲು ಕೆಲವು ತಿಂಗಳು ಬೇಕಾಗುತ್ತದೆ. ಇಲ್ಲಿ ಎಲ್ಲಾ ನೋವುಗಳನ್ನು ಸಹಿಸಿಕೊಂಡು, ಸ್ವಲ್ಪ ಚೇತರಿಸಿಕೊಳ್ಳಿ ಎಂದು ಮನವಿ ಮಾಡಿದರು.

ಮಕ್ಕಳಗುಡಿ ಬೆಟ್ಟದ ತಪ್ಪಲಿಗೆ ಬೆಟ್ಟ ಕುಸಿದಿರುವ ಸ್ಥಳವನ್ನು ವೀಕ್ಷಿಸಿದರು. ಬೆಟ್ಟ ಕುಸಿತದಿಂದ ಸುಮಾರು 20 ಏಕರೆಗೂ ಹೆಚ್ಚು ಕಾಫಿ ತೋಟ ಸೇರಿದಂತೆ ಬೆಲೆ ಬಾಳುವ ಮರಗಳು, ಅದಕ್ಕೆ ಹಬ್ಬಿದ್ದ ಕಾಳು ಮೆಣಸಿನ ಬಳ್ಳಿಗಳೂ ಸೇರಿದಂತೆ ಲಕ್ಷಾಂತರ ರೂ. ನಷ್ಟವಾಗಿದೆ. ಈ ಸಂದರ್ಭ ನಷ್ಟವನ್ನನುಭವಿಸಿದ ಕಿರಗಂದೂರು ಗ್ರಾಮದ ದಿವಂಗರ ಕೆ.ಟಿ. ಪೂವಯ್ಯನವರ ಪುತ್ರ ರೋಷನ್, ರವಿ, ಕೆ.ಟಿ. ಲಿಂಗರಾಜ್ ಸೇರಿದಂತೆ ಇತರರು ಇದ್ದು, ತಮಗಾದ ನಷ್ಟದ ಬಗ್ಗೆ ಅಳಲನ್ನು ತೋಡಿಕೊಂಡರು. ಈ ಸಂದರ್ಭ ಸಂಸದರು ಮಾತನಾಡಿ, ತಕ್ಷಣವೆ ರಸ್ತೆಗೆ ಬಿದ್ದಿರುವ ಮಣ್ಣು, ಕಲ್ಲು ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ ಎಂದರು.  

ನಂತರ ಮಾಧ್ಯಮದವರೊಂದಿಗೆ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜಿಲ್ಲೆ ಈ ಹಿಂದೆ ಎಂದೂ ಕಂಡರಿಯದ ಮಳೆ ಇದಾಗಿದೆ. ಇದರೊಂದಿಗೆ ಅಲ್ಲಲ್ಲಿ ಪ್ರವಾಹ ಹಾಗೂ ಬೆಟ್ಟಗುಡ್ಡಗಳ ಕುಸಿತದ ದುರಂತಗಳು ನಡೆಯುತ್ತಿದೆ. ದುರಂತದಿಂದ ಜೀವನ್ಮರಣಗಳ ಮಧ್ಯೆ ಸಿಲುಕಿದ್ದವರ ರಕ್ಷಣೆಗಾಗಿ ಭೂಸೇನೆಯ 174 ಮಂದಿ, ವಾಯು ಸೇನೆಯ 10 ಮಂದಿ, 30 ಮಂದಿ ಎನ್‍ಡಿಆರ್‍ಎಫ್ ಸಿಬ್ಬಂದಿಗಳು ಶ್ರಮಿಸುತ್ತಿದ್ದು, ಈಗಾಗಲೆ 661 ಮಂದಿಯನ್ನು ರಕ್ಷಿಸಿ, ಜಿಲ್ಲೆಯಲ್ಲಿ ತೆರೆದಿರುವ 36 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಗಂಜಿ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವೆಡೆಗೆ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿನ ಹವಾಮಾನ ವೈಪರಿತ್ಯದಿಂದಾಗಿ ಕೇಂದ್ರದಿಂದ ಬಂದ ಹೆಲಿಕಾಫ್ಟರ್ ಕಾರ್ಯನಿರ್ವಹಿಸಲಾಗದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಿಲುಗಡೆ ಮಾಡಲಾಗಿದೆ ಎಂದರು. ಈಗಾಗಲೇ ಜಿಲ್ಲೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭ ಕರಂದ್ಲಾಜೆ, ಶಾಸಕ ಸಿ.ಟಿ. ರವಿಯವರುಗಳು ಭೇಟಿ ನೀಡಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಕಷ್ಟ-ನಷ್ಟದ ಬಗ್ಗೆ ವರದಿ ಮಾಡುವಂತೆ ತಿಳಿಸಲಾಗಿದೆ ಎಂದರು.

ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಪ್ರಾ.ಕೃ.ಪ.ಸಹಕಾರ ಸಂಘದ ಉಪಾಧ್ಯಕ್ಷ ಕೆ.ಡಿ. ಸುರೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News