"ನಮ್ಮ ರಕ್ಷಣೆಗೆ ಯಾರೂ ಬಂದಿಲ್ಲ, ನಮ್ಮ ಜೀವವನ್ನು ನಾವೇ ಕಾಪಾಡಿಕೊಂಡಿದ್ದೇವೆ"

Update: 2018-08-20 16:12 GMT

ಮಡಿಕೇರಿ, ಆ.20: ಕೊಡಗಿನಲ್ಲಿ ಜಲ ಪ್ರಳಯವನ್ನು ಸೃಷ್ಟಿಸಿದ ಮಹಾಮಳೆಯಿಂದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಗ್ರಾಮಗಳು ಅಪಾರ ಹಾನಿಗೆ ಒಳಗಾಗಿದ್ದು, ಈ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದ ಗ್ರಾಮಸ್ಥರು ಜಲದಿಗ್ಬಂಧನದಿಂದ ಬಿಡಿಸಿಕೊಂಡು ಬಂದ ಸಾಹಸವೇ ರೋಮಾಂಚಕ. 

'ಜೀವ ಉಳಿಸಿಕೊಳ್ಳುವುದಕ್ಕಾಗಿ ಗ್ರಾಮದ ಬೆಟ್ಟ, ಗುಡ್ಡಗಳಲ್ಲಿ ಪರಿಚಯದವರ ಸುರಕ್ಷಿತ ಮನೆಗಳಲ್ಲಿ ಆಶ್ರಯ ಪಡೆದರೂ ಕ್ಷಣ ಕ್ಷಣಕ್ಕೂ ಜೀವ ಭಯ ಕಾಡುತ್ತಿತ್ತು. ಕಳೆದೆರಡು ದಿನಗಳಿಂದ ಜಿಲ್ಲಾಡಳಿತ ಹಾಗೂ ಸರ್ಕಾರದ ಕಾರ್ಯಾಚರಣೆ ತಂಡಗಳು ನೂರಾರು ಮಂದಿಯನ್ನು ರಕ್ಷಿಸಿದ್ದೇವೆ. ಸಿಲುಕಿಕೊಂಡವರನ್ನು ಹೊರ ತಂದಿದ್ದೇವೆ ಎಂದೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಗ್ರಾಮಸ್ಥರು ಸ್ಮಶಾನದಂತಿದ್ದ ಗ್ರಾಮಗಳಿಂದ ಪಾರಾಗಿ ಬಂದ ರೀತಿಯೇ ಸಾಹಸಮಯ' ಎಂದು ಪ್ರವಾಹದ ನಡುವಿನಲ್ಲಿ ತಮ್ಮ ಮನೆಯಲ್ಲಿ ಸುಮಾರು 100ಕ್ಕೂ ಅಧಿಕ ಗ್ರಾಮಸ್ಥರೊಂದಿಗೆ ಸಿಲುಕಿಕೊಂಡಿದ್ದ ಜಿಲ್ಲಾ ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರು ವಿವರಿಸುತ್ತಾರೆ.

'ತಮ್ಮ ತಮ್ಮ ಜೀವ ಉಳಿಸಿಕೊಳ್ಳುವುದಕ್ಕಾಗಿ ಗ್ರಾಮಸ್ಥರೇ ದುಸ್ಸಾಹಸದಿಂದ ಬೆಟ್ಟ ಗುಡ್ಡ, ಕಾಡು ಮೇಡುಗಳನ್ನು ದಾಟಿ ಡಾಂಬರು ರಸ್ತೆಗೆ ಬಂದು ತಲುಪಿದ ನಂತರವಷ್ಟೆ ಅಧಿಕಾರಿಗಳು ಹಾಗೂ ಕಾರ್ಯಾಚರಣೆ ತಂಡ ಭೇಟಿಯಾಗಿದೆ. ಆಗಸ್ಟ್ 15 ರಿಂದ ಮಹಾಮಳೆ ಗ್ರಾಮವನ್ನು ಆವರಿಸುತ್ತಲೆ ಬಂತು. ಇದು ಪ್ರತಿ ವರ್ಷ ಸುರಿಯುವ ಮಾಮೂಲಿ ಮಳೆಯೆಂದು ಗ್ರಾಮಸ್ಥರು ಸುಮ್ಮನಾದರು. ಆದರೆ ಗಂಟೆಗಂಟೆಗೂ ಮಳೆಯ ಪ್ರಮಾಣ ಹೆಚ್ಚುತ್ತಲೆ ಹೋಯಿತು. ಆಗಸ್ಟ್ 16 ಹಾಗೂ 17 ರಂದು ಮಳೆ ತೀವ್ರತೆಯನ್ನು ಪಡೆದುಕೊಂಡು ಗ್ರಾಮಕ್ಕೆ ಗ್ರಾಮವೇ ಜಲಾವೃತಗೊಳ್ಳಲು ಆರಂಭವಾಯಿತು. ಅಪಾಯವನ್ನು ಅರಿತ ಸುಮಾರು 74 ಮಂದಿ ತಂತಿಪಾಲದ ದೊಡ್ಡ ಗುಡ್ಡದ ಮೇಲೆ ಹತ್ತಿ ಕುಳಿತರು. ಜಿಲ್ಲಾಡಳಿತದಿಂದ ಕಾರ್ಯಾಚರಣೆ ಪಡೆ ಹೆಲಿಕಾಪ್ಟರ್ ಮೂಲಕ ಬರಲಿದೆ ಎಂದು ಗ್ರಾಮಸ್ಥರು ವಿಶ್ವಾಸದಲ್ಲಿ ಇರುವಾಗಲೆ ಪ್ರವಾಹ ಹೆಚ್ಚಾಗುತ್ತಲೆ ಹೋಯಿತು ಎಂದರು.

'ಪ್ರವಾಹ ಏರಿಕೆಯಾಗುತ್ತಿದ್ದಂತೆಯೇ ಮೇಘತ್ತಾಳು ಭಾಗದಲ್ಲಿ ಬೃಹತ್ ಗುಡ್ಡ ಕುಸಿದು 10 ಏಕರೆಯಷ್ಟು ಪ್ರದೇಶವನ್ನು ಆವರಿಸಿತು. ನೋಡ ನೋಡುತ್ತಿದ್ದಂತೆಯೇ ತಂತಿಪಾಲ ಗ್ರಾಮ ಸಂಪೂರ್ಣ ಜಲಾವೃತ ಗೊಂಡು ವಾಹನಗಳು ನೀರಿನಲ್ಲಿ ತೇಲತೊಡಗಿದವು. ಮಕ್ಕಳು, ವಯೋ ವೃದ್ಧರು ಕಾಪಾಡಿ ಕಾಪಾಡಿ ಎಂದು ಗೋಗರೆದರು. ಮಳೆ ನಿಲ್ಲದೆ, ಗ್ರಾಮ ಕೆಸರು ನೀರಿನಿಂದ ದ್ವೀಪದಂತಾದಾಗ ಇನ್ನು ಜಿಲ್ಲಾಡಳಿತವನ್ನು ಕಾಯುವುದು ಬೇಡವೆಂದು ಬದುಕಿದರೆ ಊರು ಸೇರುತ್ತೇವೆ, ಇಲ್ಲದಿದ್ದರೆ ಎಲ್ಲರು ಸಾಯೋಣವೆಂದು ಧೈರ್ಯ ಮಾಡಿ ಗ್ರಾಮವನ್ನು ಬಿಡಲು ನಿರ್ಧಾರ ಕೈಗೊಂಡು ಪ್ರಯಾಣ ಬೆಳೆಸಿದೆವು.'

ಹಗ್ಗ ಹಾಗೂ ಮರ ಕತ್ತರಿಸುವ ಯಂತ್ರದೊಂದಿಗೆ ಉಟ್ಟ ಬಟ್ಟೆಯಲ್ಲೆ ಎಲ್ಲರು ಹೊರಟೆವು. ಪ್ರವಾಹದಲ್ಲಿ ಸಂಪರ್ಕ ಸೇತುವೆ ಮುಳುಗಿದ್ದರಿಂದ ಹಗ್ಗದ ಮೂಲಕ ಸೇತುವೆಯನ್ನು ದಾಟಿ 3 ಕಿ.ಮೀ. ದೂರ ನಡೆದೆವು. ಆ ಮಾರ್ಗದಲ್ಲಿ ದೊಡ್ಡ ಪ್ರವಾಹ ಹರಿಯುತ್ತಿದ್ದುದರಿಂದ ಮರವೊಂದನ್ನು ಬೀಳಿಸಿ ಆ ಮರದ ಮೂಲಕ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಯಿಲೆಯಿಂದ ಬಳಲುತ್ತಿದ್ದವರನ್ನು ಹೆಗಲಿನ ಮೇಲೆ ಹೊತ್ತುಕೊಂಡು ದಾಟಿದೆವು. ನಂತರ ಕೋಟೆ ಬೆಟ್ಟವನ್ನು ಏರಲು ಆರಂಭಿಸಿದೆವು. ಕೋಟೆ ಬೆಟ್ಟಕ್ಕೆ ಬಡಿಯುತ್ತಿದ್ದ ಗಾಳಿಯ ದಾಳಿಯನ್ನು ಸಹಿಸಿಕೊಂಡು ನೂರಕ್ಕೂ ಅಧಿಕ ಮಂದಿ ಬೆಟ್ಟವೇರಿ ಎರಡು ಹೊಳೆಗಳನ್ನು ದಾಟಿ ಹೇಗೋ ಮಾದಾಪುರ -ಸೋಮವಾರಪೇಟೆಯ ಇಗ್ಗೋಡ್ಲು ಗ್ರಾಮದ ಡಾಂಬರಿನ ರಸ್ತೆಗೆ ಬಂದು ತಲುಪಿದೆವು. ಅಲ್ಲಿ ತಲುಪುತ್ತಿದ್ದಂತೆಯೇ ನಮ್ಮನ್ನು ಸ್ವಾಗತಿಸಲು ನಿಂತಿರುವಂತೆ ಕಾರ್ಯಾಚರಣೆ ತಂಡಗಳು ಗೋಚರಿಸಿದವು ಎಂದು ರವಿಕುಶಾಲಪ್ಪ ತಮ್ಮ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.

ಇಷ್ಟೆಲ್ಲ ಕಷ್ಟಪಟ್ಟು ನಾವು ಸಾವಿನ ದವಡೆಯಿಂದ ಪಾರಾಗಿದ್ದೇವೆ. ಆದರೆ, ಕಾರ್ಯಾಚರಣೆ ಪಡೆಗಳು ನಾವೇ ಗ್ರಾಮಸ್ಥರನ್ನು ರಕ್ಷಿಸಿದ್ದೇವೆಂದು ಹೇಳಿಕೊಳ್ಳುತ್ತಿರುವುದು ಬೇಸರ ತಂದಿದೆಯೆಂದು ರವಿಕುಶಾಲಪ್ಪ ವಿಷಾದಿಸಿದರು. ಆಸ್ತಿ ಹೋದರೂ ಪರವಾಗಿಲ್ಲ, ಹೇಗಾದರು ಮಾಡಿ ಗ್ರಾಮಸ್ಥರ ಜೀವವನ್ನು ಉಳಿಸಬೇಕೆಂದು ಹರಸಾಹಸ ಪಟ್ಟೆವು. ಯಾವುದೇ ಜೀವ ಹಾನಿಯಾಗದಿರುವುದು ಸಮಾಧಾನ ತಂದಿದ್ದರೂ, ಪುಟ್ಟ ಮಗುವೊಂದು ಅಸುನೀಗಿರುವುದು ವಿಷಾದಕರವೆಂದು ರವಿಕುಶಾಲಪ್ಪ ಕಣ್ಣೀರು ಹಾಕಿದರು.

ನನ್ನ ಮನೆಯ ಅಂಗಳದಲ್ಲಿ 14 ವಾಹನಗಳು ನಿಂತಿದ್ದು, ಇವುಗಳ ಸ್ಥಿತಿಗತಿ ನನ್ನ ಮನೆಯ ಸ್ಥಿತಿ ಗತಿ ಹೇಗಿದೆ ಎನ್ನುವುದೇ ತಿಳಿದಿಲ್ಲವೆಂದು ನೋವನ್ನು ತೋಡಿಕೊಂಡ ಅವರು, ಮಕ್ಕಂದೂರು, ಮುಕ್ಕೋಡ್ಲು, ಶಾಂತಳ್ಳಿ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಅವರು ಮನವಿ ಮಾಡಿದರು.

ಇಂದು ಜಿಲ್ಲಾಧಿಕಾರಿಗಳ ಬಳಿ ಬಂದಿದ್ದ ರವಿ ಕುಶಾಲಪ್ಪ ಜಿಲ್ಲಾಡಳಿತವು ಸಂಕಷ್ಟದಲ್ಲಿ ಸಿಲುಕಿದ್ದ ಗ್ರಾಮಸ್ಥರನ್ನು ರಕ್ಷಣೆ ಮಾಡುವಲ್ಲಿ ಎಡವಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಯವರೆಗೆ ರಸ್ತೆ ಮೇಲೆ ಬಿದ್ದಿರುವ ಬರೆಯ ಮಣ್ಣನ್ನು ತೆರವುಗೊಳಿಸಿಲ್ಲವೆಂದು ಕಿಡಿ ಕಾರಿದರು.

ಶಾಸಕ ಕೆ.ಜಿ. ಬೋಪಯ್ಯ ಕೂಡ ಇವರ ಮಾತಿಗೆ ಧ್ವನಿಗೂಡಿಸಿ, ಜಿಲ್ಲಾಡಳಿತ ತಕ್ಷಣ ಕಾರ್ಯೋನ್ಮುಖವಾಗಬೇಕೆಂದು ಸೂಚಿಸಿದರು. ಇದೀಗ 3 ಜೆಸಿಬಿಗಳು ಮುಕ್ಕೋಡ್ಲು ಗ್ರಾಮ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿವೆ ಎಂದು ರವಿಕುಶಾಲಪ್ಪ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News