ಹಾಸನ: ಅಜ್ಜನಹಳ್ಳಿಯಲ್ಲಿ ಭಾರೀ ಪ್ರಮಾಣದ ಭೂ ಕುಸಿತ; ಶಿರಾಡಿ ಘಾಟ್ ಬಂದ್

Update: 2018-08-20 16:28 GMT

ಹಾಸನ,ಆ.20: ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರ ಮತ್ತು ಅರಕಲಗೂಡು ತಾಲೂಕಿನಲ್ಲಿ ಜನಜೀವನ ಅಕ್ಷರಶಃ ನಲುಗಿಹೋಗಿದೆ. ಸಕಲೇಶಪುರ ಸಮೀಪದ ಅಜ್ಜನಹಳ್ಳಿಯಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ಇಲ್ಲಿನ ಜನರು ನೆರವಿಗಾಗಿ ಹಾತೊರೆಯುತ್ತಿದ್ದಾರೆ. ಈಗಾಗಲೇ ಇಲ್ಲಿ ಸುಮಾರು 20 ಹೆಕ್ಟೇರ್ ಭೂ ಪ್ರದೇಶ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. 

ಐಕೂರು-ಹೆತ್ತೂರು ನಡುವಿನ ಐಗೂರು ಹೊಳೆ ತುಂಬಿ ಹರಿಯುತ್ತಿದ್ದು, ಇಲ್ಲಿನ ಪುರಾತನ ಸೇತುವೆಗೆ ಧಕ್ಕೆಯಾಗುವ ಭೀತಿ ಉಂಟಾಗಿದೆ. ಇನ್ನು ಈ ಭಾಗದಲ್ಲಿ ಬರುವ ಹಳ್ಳಿ ಗದ್ದೆ ನಡುವಿನ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕಾಗಿನೆಲೆ ಹೊಂಗಡಹಳ್ಳ ನಡುವಿನ ಬಾಳೆಹಳ್ಳ ಸಮೀಪ ಭೂ ಕುಸಿತ ಉಂಟಾಗಿದೆ. 

ಹಾಸನ ಗಡಿ ಭಾಗದ ಗೊದ್ದು, ಸೋಮವಾರಪೇಟೆ, ಪಟ್ಲ, ಹಡ್ಲಗದ್ದೆ ರಸ್ತೆಗಳು ಕೂಡ ಹಾಳಾಗಿದ್ದು, ರಸ್ತೆಗಳ ಮಧ್ಯೆ ಮರಗಳು ನೆಲಕ್ಕುರುಳಿರುವುದರಿಂದ ಸಂಚಾರ ಕೂಡಾ ಕಡಿತಗೊಂಡಿದೆ. ಸುತ್ತಮುತ್ತಲಿನ ಗ್ರಾಮಸ್ಥರೇ ಬಿದ್ದಿರುವ ಮರಗಳ ತೆರವುಗೊಳಿಸುತ್ತಿದ್ದಾರೆ. ಸಕಲೇಶಪುರ ಸುತ್ತಮುತ್ತಲಿನ ಕಾಫಿ ತೋಟ, ಏಲಕ್ಕಿ ತೋಟದಲ್ಲಿ ನೀರು ನಿಂತು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹೊಸಹಳ್ಳಿ-ಚಿನ್ನಹಳ್ಳಿ ಸಂಪರ್ಕ ಕಡಿತಗೊಂಡಿದೆ. ಭತ್ತದ ಗದ್ದೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿವೆ. 

ಹೆತ್ತೂರು, ಬಿಸಿಲೆ, ಹೆಗ್ಗದ್ದೆ, ಕಾಗಿನಹರೆ, ಹತ್ತಿಹಳ್ಳಿ, ಬ್ಯಾಕರವಳ್ಳಿ, ಕ್ಯಾನೆಹಳ್ಳಿ, ಹಾನುಬಾಳು ಮತ್ತು ಕಾಡುಮನೆ ಭಾಗದಲ್ಲಿ ಭಾರೀ ಮಳೆಯಾಗಿದೆ ಎಂದು ತಿಳಿದುಬಂದಿದೆ. 

ಮಳೆಗೆ ತಾಲೂಕಿನಲ್ಲಿರುವ ಬನ್ನಹಳ್ಳಿ ಪಟ್ಲ, ಯಡಕೇರಿ ಹೊಳೆಗಳು ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ವಿಸ್ತೀರ್ಣದ ಭತ್ತದ ಗದ್ದೆಗಳು ಸೇರಿದಂತೆ ಹಲವು ಬೆಳೆಗಳು ಜಲಾವೃತವಾಗಿವೆ. ಅಲ್ಲದೇ ಭೂ ಕುಸಿತದಿಂದಾಗಿ ಸಕಲೇಶಪುರದ ಮಾಗೇರಿ ರಸ್ತೆಯಲ್ಲಿ ಮತ್ತೆ ಭೂಮಿ ಬಿರುಕು ಕಾಣಿಸಿಕೊಂಡಿದೆ. 2 ದಿನಗಳ ಹಿಂದಷ್ಟೆ ಬಾಯಿ ತೆರೆದಿದ್ದ ಮಗೇರಿ ರಸ್ತೆ ಇಂದು ಸಂಪೂರ್ಣ ಕುಸಿದಿದ್ದು, ಮಾಗೇರಿ, ಹಾಸನ, ಕೊಡಗು ಗಡಿ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.  ಮಳೆಯಿಂದಾಗಿ ನಗರ ಪ್ರದೇಶಗಳಿಗೆ ಸಂಪರ್ಕ ಕಲ್ಪಿದುವ 3 ರಸ್ತೆಗಳು ಕಡಿತಗೊಂಡಿದೆ. ಪರ್ಯಾಯ ಮಾರ್ಗವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಸಕಲೇಶಪು ಗಡಿಭಾಗದ ಮಾಗೇರಿಯಲ್ಲಿ ಮೊದಲ ಗಂಜಿ ಕೇಂದ್ರ ತೆರೆಯಲಾಗಿದ್ದು, ಇಲ್ಲಿಯ ಸರಕಾರಿ ಶಾಲೆಯಲ್ಲಿ 120ಕುಟುಂಬಗಳಿಗೆ ಆಶ್ರಯ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ದ್ವೀಪದಂತಾಗಿರುವ ಅರಕಲಗೂಡು
ಅರಕಲಗೂಡು ತಾಲೂಕು ಸಂಪೂರ್ಣವಾಗಿ ನಲುಗಿ ಹೋಗಿದೆ. ಕೊಡಗು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಾವೇರಿ ನದಿ ಹಾಗೂ ಹಾರಂಗಿ ಜಲಾಶಯದಿಂದ ನೀರು ಹೊರಬಿಡುತ್ತಿರುವುದರಿಂದ ಎರಡು ಕಡೆಯ ನೀರು ಒಟ್ಟಿಗೆ ಹರಿಯುತ್ತಿರುವ ಪರಿಣಾಮ ಕೊಣನೂರು, ರಾಮನಾಥಪುರ, ಬಸವಾಪಟ್ಟಣ ಹಾಗೂ ಕೇರಳಾಪುರ ಗ್ರಾಮಗಳಲ್ಲಿ ಪ್ರವಾಹ ಕಂಡುಬಂದಿದೆ.

ರಾಮನಾಥಪುರ ಹೊರತುಪಡಿಸಿದರೆ ಬೇರೆಡೆ ಜನ ವಸತಿ ಪ್ರದೇಶಕ್ಕೆ ನೀರು ನುಗ್ಗಿಲ್ಲ. ಆದರೆ ಕೃಷಿ ಪ್ರದೇಶ ಮಾತ್ರ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಅಂದಾಜು 10ಸಾವಿರ ಹೆಕೆರೆ ನೀರಾವರಿ ಕೃಷಿ ಜಮೀನಿನಲ್ಲಿ ಕೈಗೊಳ್ಳಲಾಗಿರುವ ಬೆಳೆ ಹಾಗೂ ನೂರಾರು ಎಕರೆಯ ಅಡಿಕೆ ತೆಂಗಿನ ತೋಟದ ವಿವಿಧ ಬೆಳೆ ಭಾರಿ ಪ್ರಮಾಣದ ಹಾನಿಗೆ ಒಳಗಾಗಿದೆ.

ಜೀವ ನದಿ ಕಾವೇರಿಯಲ್ಲಿ ಪ್ರವಾಹ ಉಂಟಾಗಿ 6ನೇ ದಿನಕ್ಕೆ ಕಾಲಿಟ್ಟಿದ್ದು, ರಾಮನಾಥಪುರ ಗ್ರಾಮದ ಪುರಾತನ ದೇವಾಲಯ ಶ್ರೀರಾಮೇಶ್ವರ ಹಾಗೂ ಇತರೆ ದೇವಾಲಯಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಇಂದು ಸುಬ್ರಹ್ಮಣ್ಯ ದೇವಾಲಯದ ಸುತ್ತಾಮುತ್ತ ನೀರು ವ್ಯಾಪಿಸಿದ್ದು, ಈ ಭಾಗದ 30ಕ್ಕೂ ಅಧಿಕ ಜನ ವಸತಿ ಪ್ರದೇಶದ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. 

ರಾಮನಾಥಪುರ ಕಾವೇರಿ ನದಿ ದಂಡೆ ಸುತ್ತಾಮುತ್ತಲಿನ ಸುಮಾರು 400ಕ್ಕೂ ಹೆಚ್ಚು ಮನೆಗಳು ನದಿ ಪ್ರವಾಹದಿಂದ ಕೂಡಿವೆ. ಐ.ಬಿ ಸರ್ಕಲ್‍ನಲ್ಲಿದ್ದ ಸುಮಾರು 70 ಮನೆಗಳಿಗೆ ಪ್ರವಾಹದಿಂದ ನೀರು ನುಗಿದ ಪರಿಣಾಮ 30 ಹೆಚ್ಚು ಮನೆಗಳು ಬಿದ್ದು ಹೋಗಿದ್ದು, ಉಳಿದ ಮನೆಗಳು ಅಪಾಯದ ಸ್ಥಿತಿಯಲ್ಲಿವೆ,. ರಾಮೇಶ್ವರಸ್ವಾಮಿ ದೇಸ್ಥಾನದ ಸುತ್ತ ಇದ್ದ 45 ಹೆಚ್ಚು ಮನೆಗಳು ನೀರಿನಿಂದ ಕೂಡಿವೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಅಗಸ್ಥೇಶ್ವರಸ್ವಾಮಿ, ಪಟ್ಟಾಭಿರಾಮಸ್ವಾಮಿ, ಕಸ್ತೂರ್ ಭಾ ರಸ್ತೆ ಸೇರಿದಂತೆ ಸುಮಾರು 150 ಮನೆಗಳಲ್ಲಿ ನೀರು ಅಕ್ರಮಿಸಿಕೊಂಡಿದ್ದು, ಕೆಲವು ಮನೆಗಳು ಈಗಾಗಲೇ ನೀರಿನ ರಭಸಕ್ಕೆ ಕುಸಿಯುತ್ತಿವೆ. 

ಅಪಾಯಮಟ್ಟಮೀರಿ ನದಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ರಾಮನಾಥಪುರ ಕೊಣನೂರು, ಕೇರಳಾಪುರ, ಕಟ್ಟೇಪುರ, ಗೊಬ್ಬಳಿ ನಡುವಿನ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಈ ಸ್ಥಳಗಳಲ್ಲಿ ಬಿಗಿ ಪೊಲೀಸ್ ವ್ಯವಸ್ಥೆಗೊಳಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ಜನರು ರಾಮನಾಥಪುರಕ್ಕೆ ಬರುತ್ತಿರುವ ಪರಿಣಾಮ ವಾಹನ ದಟ್ಟಣೆ ಅಧಿಕಗೊಂಡಿದೆ. 

ಶಿರಾಡಿ ಘಾಟ್ ಬಂದ್:
ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್‍ನಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು, ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣಿನ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಮುಂದಿನ 4 ತಿಂಗಳು ಶಿರಾಡಿ ಘಾಟ್ ಸಂಚಾರಕ್ಕೆ ಲಭ್ಯವಿರುವುದಿಲ್ಲ ಎಂದು ಸಚಿವ ರೇವಣ್ಣ ತಿಳಿಸಿದ್ದಾರೆ.

ರೈಲು ಸಂಪರ್ಕ ಕಡಿತ
50ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತವಾಗಿರುವುದರಿಂದ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈಲ್ವೆ ಇಲಾಖೆಗೆ ತುಂಬಲಾರದ ನಷ್ಟ ಉಂಟಾಗಲಿದ್ದು, ರೈಲ್ವೆ ಸಿಬ್ಬಂದಿಗಳಿಂದ ತೆರವು ಕಾರ್ಯಚರಣೆ ಕೂಡಾ ಸ್ಥಗಿತವಾಗಿದೆ. ಸಕಲೇಶಪುರ ತಾಲೂಕಿನ ಎಡಕುಮರಿ ಸಮೀಪದಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿದ್ದು, ಮಣ್ಣು ತೆರವುಗೊಳಿಸಲು ಸ್ಥಳೀಯ ಕೂಲಿಯಾಳುಗಳು ಕೂಡಾ ಭಯಪಡುವಂತಾಗಿದೆ. ಹೀಗಾಗಿ ರೈಲ್ವೆ ಇಲಾಖೆ ಪರದಾಡುವಂತಾಗಿದೆ.

ಕತ್ತಲಲ್ಲಿ ಗ್ರಾಮಗಳು
ಮಂಗಳೂರು-ಬೆಂಗಳೂರು ನಡುವಿನ ರಸ್ತೆ, ರೈಲು ಮಾರ್ಗದ ಸಂಪರ್ಕ ಸೇರಿದಂತೆ ಹಲವು ಗ್ರಾಮಗಳ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡು ಜನರು ಪರದಾಡುವಂತಾಗಿದೆ. ನೆಲಕ್ಕುರುಳಿರುವ ಲೈಟು ಕಂಬದ ಲೆಕ್ಕ ಸಿಗದಂತಾಗಿದ್ದು ಸದ್ಯಕ್ಕೆ ವಿದ್ಯುತ್ ಈ ಗ್ರಾಮಗಳಿಗೆ ಸಂಪರ್ಕ ಅಸಾಧ್ಯ ಎನ್ನುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News