ತುಮಕೂರು ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಯಿಂದ ಮುಸ್ಲಿಮರಿಗೆ ಟಿಕೆಟ್ ಇಲ್ಲ !

Update: 2018-08-20 16:58 GMT

ತುಮಕೂರು.ಆ.20: ಸೆಪ್ಟಂಬರ್ 1 ರಂದು ನಡೆಯುವ ತುಮಕೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಸುಮಾರು 70 ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿರುವ 2 ಎ ವರ್ಗಕ್ಕೆ ಸೇರಿದ ಮುಸ್ಲಿಂ ಸಮುದಾಯಕ್ಕೆ ಸೀಟು ಹಂಚಿಕೆ ಮಾಡದಿರುವುದು ಹಲವು ರೀತಿಯ ಚರ್ಚೆಯನ್ನು ಹುಟ್ಟು ಹಾಕಿದೆ.

ಆಡಳಿತ ಮತ್ತು ಅಭಿವೃದ್ದಿಯ ಒಂದು ಭಾಗವೇ ಆಗಬೇಕಾಗಿದ್ದ 2 ಎ ವರ್ಗಕ್ಕೆ ಸೇರಿದ ಮುಸ್ಲಿಂ ಸಮುದಾಯವನ್ನು ಬಿಜೆಪಿ ಪಕ್ಷ ಮೊದಲಿನಿಂದಲೂ ಮಲತಾಯಿ ದೋರಣೆಯಿಂದ ನೋಡುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆ ಯಾಗಿದ್ದು, ಒಟ್ಟಾರೆ ಜನಸಂಖ್ಯೆಯ ಶೇ12ರಷ್ಟಿರುವ ಮುಸ್ಲಿಮರಿಗೆ ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡಿರಲಿಲ್ಲ. ಅದೇ ರೀತಿಯ ಧೋರಣೆಯನ್ನು ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿಯೂ ಅನುಸರಿಸುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಅಲ್ಲದೆ ಮುಸ್ಲಿಂ ಮತದಾರರೇ ಹೆಚ್ಚಿರುವ ನಜರಾಬಾದ್ ವಾರ್ಡು ಸಂಖ್ಯೆ 10, ಸಾಮಾನ್ಯವರ್ಗಕ್ಕೆ ಮೀಸಲಾದ ವಾರ್ಡು ಸಂಖ್ಯೆ 13ಕ್ಕೆ ತನ್ನ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿಲ್ಲ. ಪರಿಶಿಷ್ಟ ಜಾತಿ ಟಿಕೆಟ್ ಹಂಚಿಕೆಯಲ್ಲಿಯೂ ಹೆಚ್ಚಿನ ಕ್ಷೇತ್ರಗಳಲ್ಲಿ ಬೋವಿ ಜನಾಂಗಕ್ಕೆ ನೀಡಿದ್ದು, ಉತ್ತರ ಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಿದ ತಂತ್ರವನ್ನೇ ಅನುಸರಿಸುತ್ತಿದೆ. ಮುಸ್ಲಿಮರು, ದಲಿತರಲ್ಲಿ ಬಹುಸಂಖ್ಯಾತರನ್ನು ಹೊರಗಿಟ್ಟು ಚುನಾವಣೆ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಪ್ರಕಟವಾಗಿರುವ ಬಿಜೆಪಿ ಪಟ್ಟಿಯಲ್ಲಿ ಮೂಲ ಬಿಜೆಪಿಗರಿಗಿಂತ, ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದ ಜಿ.ಎಸ್.ಬಸವರಾಜು ಮತ್ತು ಜ್ಯೋತಿಗಣೇಶ್ ಹಿಂಬಾಲಕರಿಗೆ ಹೆಚ್ಚಿನ ಟಿಕೆಟ್ ನೀಡಿದ್ದಾರೆ ಎಂಬ ಆರೋಪ ಪಕ್ಷದವರಿಂದಲೇ ಕೇಳಿ ಬರುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News